ವರುಣಾ:ಕ್ಷೇತ್ರದ ಜನರ ಆಶೀರ್ವಾದದಿಂದ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದು, ಒಂದೇ ಒಂದು ರೂಪಾಯಿ ಲಂಚ ಪಡೆದ ಉದಾಹರಣೆ ನನ್ನ ಮೇಲೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ರಾಜ್ಯದ ಜನತೆ ನನ್ನ ಜೊತೆಗೆ ಇರುವವರೆಗೂ ನಾನು ಬಿಜೆಪಿ-ಜೆಡಿಎಸ್ ಷಡ್ಯಂತ್ರಕ್ಕೆ ಹೆದರುವುದಿಲ್ಲ, ಎಲ್ಲಾ ಷಡ್ಯಂತ್ರ ಸೋಲಿಸುತ್ತೇನೆ, ಅವರ ಆಟಗಳಿಗೆ ಜಗ್ಗಲ್ಲ, ಬಗ್ಗಲ್ಲ, ಸಾಮಾಜಿಕ ನ್ಯಾಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.
ಸುಳ್ಳು ಆರೋಪ ಸಹಿಸುವುದಿಲ್ಲ
ನನ್ನ ಮೇಲಿನ ಲಂಚದ ಸುಳ್ಳು ಆರೋಪವನ್ನು ಜನತೆ ಸಹಿಸುವುದಿಲ್ಲ, ರಾಜ್ಯದ ಜನತೆ ನನ್ನ ಜೊತೆಗೆ ಇರುವವರೆಗೂ ಷಡ್ಯಂತ್ರಗಳಿಗೆ ಹೆದರಲ್ಲ.
45 ವರ್ಷದ ರಾಜಕೀಯ ಬದುಕಿನಲ್ಲಿ ನನ್ನ ಮೇಲೆ ಭ್ರಷ್ಟಾಚಾರದ ಸಣ್ಣ ಕಪ್ಪುಚುಕ್ಕೆ ಇಲ್ಲ, ಹಿಂದುಳಿದ ವರ್ಗದವನಾದ ನಾನು ಎರಡು ಬಾರಿ ಮುಖ್ಯಮಂತ್ರಿ ಆದೆ ಎಂಬ ಕಾರಣಕ್ಕೆ ಬಿಜೆಪಿಗೆ ಹೊಟ್ಟೆಕಿಚ್ಚು.
ನಾನು ಎರಡು ಬಾರಿ ಮುಖ್ಯಮಂತ್ರಿ ಆದರೂ ಮೈಸೂರಿನಲ್ಲಿ ಒಂದೂ ಸ್ವಂತ ಮನೆ ಇಲ್ಲ, ಮರಿಸ್ವಾಮಿ ಮನೇಲಿ ಇದೀನಿ, ಕುವೆಂಪು ರಸ್ತೇಲಿ ೩ ವರ್ಷದಿಂದ ಮನೆ ಕಟ್ಟುತ್ತಲೇ ಇದ್ದೀನಿ, ಇದುವರೆಗೂ ಪೂರ್ತಿ ಆಗಿಲ್ಲ, ನನಗೆ ವರ್ಚಸ್ಸು ಕೊಡುವವರು ಮತದಾರರು, ನಿಮಗೆ ಪ್ರಾಮಾಣಿಕವಾಗಿದ್ದೇನೆ ಎಂದರು.
ರಾಜ್ಯದ ಜನತೆ ನನ್ನ ವರ್ಚಸ್ಸು
ನೀವೇ ನನ್ನ ಮಾಲೀಕರು, ನೀವೇ ನನ್ನ ಯಜಮಾನರು, ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೆ, ಬಿಜೆಪಿ-ಜೆಡಿಎಸ್ ನಾಯಕರ ಹೊಟ್ಟೆಕಿಚ್ಚಿನಿಂದ ನನ್ನ ವರ್ಚಸ್ಸು ಕಡಿಮೆ ಆಗಲ್ಲ, ನನ್ನ ವರ್ಚಸ್ಸು ವರುಣಾ ಜನತೆ, ನನ್ನ ವರ್ಚಸ್ಸು ರಾಜ್ಯದ ಜನತೆ ಎಂದರು.
ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೆಲ್ಲಾ ರಾಜ್ಯದ ಎಲ್ಲ ಬಡವರಿಗೆ ಆರ್ಥಿಕ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇನೆ, ಹತ್ತು ಹಲವು ಭಾಗ್ಯಗಳನ್ನು ಕೊಡುವ ಜೊತೆಗೆ ಹಲವು ನಿಗಮಗಳ ಸಾಲ ಮನ್ನಾ ಮಾಡಿದ್ದೇನೆ, ಡಾ.ಅಂಬೇಡ್ಕರ್ ಆಶಯದಂತೆ ಬಡವರಿಗೆ ಆರ್ಥಿಕ ಶಕ್ತಿ ಕೊಡುವ ಕಾರ್ಯಕ್ರಮ ರೂಪಿಸಿ ಜಾರಿ ಮಾಡಿದ್ದೇನೆ.
ಎರಡನೇ ಬಾರಿ ಮುಖ್ಯಮಂತ್ರಿ ಆದಾಗಲೂ ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ, ಮಧ್ಯಮ ವರ್ಗದವರ ಬದುಕಿಗೆ ಆಸರೆ ಆಗುವ ಐದು ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಜಾರಿ ಮಾಡಿದ್ದೇವೆ, ಪ್ರತೀ ವರ್ಷ ಈ ಗ್ಯಾರಂಟಿಗಳ ಮೂಲಕ 56 ಸಾವಿರ ಕೋಟಿ ರೂ.ಗಳನ್ನು ಜನರ ಖಾತೆಗೆ ನೇರವಾಗಿ ಹಾಕುತ್ತಿದ್ದೇವೆ, ದೇಶದಲ್ಲಿ ನುಡಿದಂತೆ ನಡೆದುಕೊಂಡಿರುವ ಪಕ್ಷ ಕಾಂಗ್ರೆಸ್ ಪಕ್ಷ ಎಂದರು.
ಜನರ ಲೂಟಿ ಮಾಡಿದವು
ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರವಾಗಲಿ, ರಾಜ್ಯದಲ್ಲಿದ್ದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ ಸರ್ಕಾರಗಳು ಜನರ ಕಲ್ಯಾಣ ಮಾಡದೆ ಲೂಟಿ ಮಾಡಿದವು.
ಬಿಜೆಪಿ ಸಾಮಾಜಿಕ ನ್ಯಾಯ ವಿರೋಧಿ, ಬಡವರ ವಿರೋಧಿ, ಮೂರು ಬಾರಿ ಪ್ರಧಾನಿ ಆಗಿರುವ ಮೋದಿ ಅವರು ಕೊಟ್ಟ ಮಾತಿನಂತೆ ನಡೆದ ಉದಾಹರಣೆ ಇದೆಯಾ, ಇಷ್ಟು ವರ್ಷ ಪ್ರಧಾನಿಯಾಗಿ ಮೋದಿ ಬಡವರ ಪರವಾಗಿ ಒಂದೇ ಒಂದು ಯೋಜನೆ ಜಾರಿ ಮಾಡಿಲ್ಲ.
ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವವರು ಕರ್ನಾಟಕದವರು, ನಮ್ಮ ಪಾಲಿನ ತೆರಿಗೆ ಪಡೆಯಲು ಭಿಕ್ಷೆ ಬೇಡಬೇಕಾ, ಇತರೆ ರಾಜ್ಯಗಳಿಗೆ ಹೆಚ್ಚು ತೆರಿಗೆ ಪಾಲು ಕೊಟ್ಟು ರಾಜ್ಯಕ್ಕೆ ಮಾತ್ರ ಕೇವಲ ಆರು ಸಾವಿರ ಕೋಟಿ ರೂ. ನೀಡಲಾಗಿದೆ, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ರಾಜ್ಯದ ಜನತೆ ಮಾತನಾಡಬೇಕು
ಈ ಅನ್ಯಾಯದ ವಿರುದ್ಧ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದೆವು, ಬಿಜೆಪಿ-ಜೆಡಿಎಸ್‌ನ ಒಬ್ಬ ಲೋಕಸಭಾ ಸದಸ್ಯನೂ ರಾಜ್ಯದ ಪಾಲನ್ನು ಕೇಳುವ ಧೈರ್ಯ ಮಾಡಿಲ್ಲ, ಮಾಡುವುದೂ ಇಲ್ಲ, ಕೇಂದ್ರ ಸರ್ಕಾರದ ಈ ದ್ರೋಹದ ವಿರುದ್ಧ ರಾಜ್ಯದ ಜನತೆ ಮಾತನಾಡಬೇಕು ಎಂದು ಕರೆ ನೀಡಿದರು.
ರಾಜ್ಯಕ್ಕೆ ವಿಶೇಷ ಅನುದಾನದ ಜೊತೆಗೆ ನೀರಾವರಿ ಯೋಜನೆಗೆ 5,495 ಕೋಟಿ ರೂ. ನೀಡಲು ಶಿಫಾರಸ್ಸು ಮಾಡಿದ್ದ ನಿರ್ಮಲಾ ಸೀತಾರಾಮನ್ ಈ ಹಣವನ್ನೂ ಕೊಡಲಿಲ್ಲ, ರಾಜ್ಯದ ಫೆರಿಫೆರಲ್ ರಸ್ತೆಗೆ, ಕೆರೆಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ಕೊಡುವುದಾಗಿ ಘೋಷಿಸಿದ್ದರು, ಆದರೆ ನಯಾಪೈಸೆ ಕೊಡಲಿಲ್ಲ.
ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಂದ್ ಆಗಲಿವೆ ಎಂದು ಪ್ರಧಾನಿ ಮೋದಿ ಹಾಗೂ ರಾಜ್ಯದ ಬಿಜೆಪಿ ನಾಯಕರಿಂದ ಸುಳ್ಳು ಹೇಳಿಸಿದರು, ಇದುವರೆಗೂ ಗ್ಯಾರಂಟಿಗಳು ನಿಂತಿಲ್ಲ, ನಿಲ್ಲುವುದೂ ಇಲ್ಲ, ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ನಿಲ್ಲಲ್ಲ ಎಂದು ಘೋಷಿಸಿದರು.