ಕಾಂಗ್ರೆಸ್ ಸೇರುವುದು ಮೊದಲೇ ಗೊತ್ತಿತ್ತು: ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಬಿಜೆಪಿಗೆ ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ರಾಜೀನಾಮೆ ಕೊಟ್ಟಿರುವುದರಲ್ಲಿ ಆಶ್ಚರ್ಯ ಪಡುವಂತದ್ದು ಏನೂ ಇಲ್ಲ . ಇದು ಗಾಳಿಯಲ್ಲಿ ಗುಂಡು ಹೊಡೆಯುವಂತ ಆರೋಪ ಅಲ್ಲ, ಯಾವಾಗ ತರಾತುರಿಯಲ್ಲಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರೋ ಅವತ್ತೇ ಗೊತ್ತಿತ್ತು ಇದರಲ್ಲಿ ಆಶ್ಚರ್ಯ ಏನು ಇಲ್ಲ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ಕಳೆದ ಎರಡು ತಿಂಗಳಿಂದ ನಿರಂತರವಾಗಿ ನನ್ನ ಹೆಸರು ಚಾಲ್ತಿಯಲ್ಲಿದೆ. ಜೆಡಿಎಸ್ ಕಾರ್ಯಕರ್ತರು ನಿಖಿಲ್ ಗೆ ಟಿಕೆಟ್ ಕೊಟ್ಟರೆ ನಾವು ಕೆಲಸ ಮಾಡುತ್ತೇವೆ ಅಂದಿದ್ದರು. ಇಲ್ಲಿ ಯಾವುದೇ ತೀರ್ಮಾನಗಳು ಎನ್ ಡಿಎ ಕಡೆಯಿಂದ ಘೋಷಣೆ ಆಗಬೇಕು. ನಿನ್ನೆ ಕುಮಾರಣ್ಣ ಅವರು ಇದನ್ನೇ ಹೇಳಿದ್ದಾರೆ. ತಾಳಿದವನು ಬಾಳಿಯಾನು ಅಂತ. ಅಂತಿಮವಾಗಿ ನಮ್ಮ ನಾಯಕರು ಮತ್ತು ಬಿಜೆಪಿ ನಾಯಕರು ಅಭ್ಯರ್ಥಿಯನ್ನು ಘೋಷಣೆ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಗೆ ಕೇಂದ್ರ ಸಚಿವಕುಮಾರಸ್ವಾಮಿಯೇ ಟಾರ್ಗೆಟ್ . ಕಳೆದ ಲೋಕಸಭಾ ಚುನಾವಣೆಯಲ್ಲಿ 14 ಲೋಕಸಭೆ ಕ್ಷೇತ್ರಗಳಲ್ಲಿ 12 ಕ್ಷೇತ್ರವನ್ನು ಗೆದ್ದಿದ್ದೇವೆ. ಅದರಲ್ಲಿ ಪ್ರಾಮುಖ ಪಾತ್ರ ನಮ್ಮ ಕಾರ್ಯಕರ್ತರು, ಕುಮಾರಣ್ಣನ ನಾಯಕತ್ವ. ಈ ವಿಚಾರಕ್ಕೆ ಕುಮಾರಣ್ಣ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿಯ ರಾಜ್ಯಮಟ್ಟದ ಒಕ್ಕಲಿಗರನ್ನು ಕುಮಾರಣ್ಣ ಅವರು ತುಳಿಯುತ್ತಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇದರ ಹಿಂದೆ ಕುಮ್ಮಕ್ಕು ಕೊಟ್ಟವರು ಯಾರು ಅನ್ನುವುದು ಪ್ರಸ್ತುತ ಬೆಳವಣಿಗೆ ನೋಡಿದರೆ ರಾಜ್ಯದ ಜನರಿಗೆ ಗೊತ್ತಾಗುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.