ಗೌಪ್ಯ ನಡೆ ಅನುಸರಿಸಿದ್ದ ಕಲಾವಿದ
ಬೆಂಗಳೂರು : ವಿಧಾನಸಭಾ ಉಪ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ತೊರೆದ ಸಿ.ಪಿ.ಯೋಗೇಶ್ವರ್ ಅವರು ನಿರೀಕ್ಷೆಯಂತೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿ ಯೋಗೇಶ್ವರ್ ಅವರಿಗೆ ಪಕ್ಷದ ಲಾಂಛನ ನೀಡುವ ಮೂಲಕ ಸೇರ್ಪಡೆ ಮಾಡಿಕೊಂಡರು.
ಇದಕ್ಕೂ ಮುನ್ನ ಶಿವಕುಮಾರ್ ಹಾಗೂ ಅವರ ಸಹೋದರ ಶಿವಕುಮಾರ್ ಮಂಡ್ಯ ಜಿಲ್ಲಾ ಕಾಂಗ್ರೆಸ್ ಶಾಸಕರ ಜೊತೆಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಯೋಗೇಶ್ವರ್ ಆಶೀರ್ವಾದ ಪಡೆದುಕೊಂಡರು.
ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಉದ್ದೇಶದಿಂದಲ್ಲೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು, ಮೈಸೂರು ಪ್ರವಾಸದಿಂದ ನಿನ್ನೆ ರಾತ್ರಿ ನಗರಕ್ಕೆ ಹಿಂದಿರುಗಿದ್ದರು.
ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಶಿವಕುಮಾರ್ ಅವರು ಕೇರಳ ಪ್ರವಾಸ ರದ್ದುಗೊಳಿಸಿ ನಗರದಲ್ಲೇ ಉಳಿದು ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪ್ರಾಥಮಿಕ ಸದಸ್ಯತ್ವ ನೀಡಿದರು. ನಂತರ ಯೋಗೇಶ್ವರ್ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಜಿಯನ್ನು ಪಡೆದರು.
ಯೋಗೇಶ್ವರ್ ಕಾಂಗ್ರೆಸ್ ಸೇರುವುದು ಖಚಿತಗೊಂಡಿದ್ದರೂ ಕಳೆದ ಮೂರು ದಿನಗಳಿಂದ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ನ ಮುಖಂಡರಿಗೂ ಅವರ ನಡೆಯನ್ನು ಭಾರಿ ಗೌಪ್ಯವಾಗಿ ಇಟ್ಟಿದ್ದಲ್ಲದೆ, ಕೆಲವು ನಾಟಕೀಯ ಬೆಳವಣಿಗೆಗಳು ನಡೆದವು.
ಯೋಗೇಶ್ವರ್ ಅವರು ಬಿಎಸ್ಪಿ ಅಥವಾ ಎಸ್ಪಿಯಿಂದ ಕಣಕ್ಕಿಳಿಯಲು ಆ ಪಕ್ಷಗಳ ಬಿ ಫಾರಂ ಅನ್ನು ಪಡೆದುಕೊಂಡಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರೋಧಿ ಬಣ ಯೋಗೇಶ್ವರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ರಾಷ್ಟ್ರೀಯ ನಾಯಕರ ಜೊತೆ ನಡೆಸಿದ ಪ್ರಯತ್ನ ಒಂದು ಹಂತದಲ್ಲಿ ಯಶಸ್ವಿಯೂ ಆಗಿತ್ತು.
ಜೆಡಿಎಸ್ ಚಿಹ್ನೆಯಡಿ ಯೋಗೇಶ್ವರ್ ಅವರನ್ನು ಚುನಾವಣಾ ಕಣಕ್ಕಿಳಿಸಲು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಒಪ್ಪಿಸಿದ್ದರು. ಆದರೆ, ರಾಜಕೀಯ ಚಾಣಾಕ್ಯತನ ತೋರಿ ಎನ್ ಡಿಎ ಕೂಟದ ಮುಖಂಡರ ನಿಲುವಿಗೆ ವಿರುದ್ಧವಾಗಿ ಮತ್ತೆ ಹಸ್ತದ ಕೈಹಿಡಿದರು. ಕಳೆದ ಎರಡೂವರೆ ದಶಕಗಳ ರಾಜಕೀಯದಲ್ಲಿ ಆರು ಬಾರಿ ಪಕ್ಷಾಂತರ ಮಾಡಿದ್ದಾರೆ.
ಕೆಸಿಪಿ, ಕಾಂಗ್ರೆಸ್, ಬಿಎಸ್ ಪಿ, ಎಸ್ ಪಿ, ಬಿಜೆಪಿ ಪಕ್ಷಗಳಲ್ಲದೆ, ಪಕ್ಷೇತರವಾಗಿ ಒಮ್ಮೆ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ದರು. ಆದರೆ, ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಅವರು ಹೆಚ್.ಡಿ.ಕುಮಾಸ್ವಾಮಿ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.