ಸರ್ಕಾರಿ ನೌಕರರು ಪ್ರಾಮಾಣಿಕ ಹಾದಿಯಲ್ಲಿ ನಡೆಯಬೇಕು
ಬೆಂಗಳೂರು:ಸರ್ಕಾರಿ ನೌಕರರು ಭ್ರಷ್ಟಾಚಾರ ತೊರೆದು ಪ್ರಾಮಾಣಿಕ ಹಾದಿಯಲ್ಲಿ ನಡೆದು, ತಮ್ಮ ಕರ್ತವ್ಯದಲ್ಲಿ ಸತ್ಯ, ನಿಷ್ಠೆ ಹಾಗೂ ಸಮಗ್ರತೆ ಪ್ರದರ್ಶಿಸಿ ದೇಶದ ಅಭಿವೃದ್ಧಿಗೆ ಪೂರಕವಾಗಬೇಕು ಎಂದು ಉಪಲೋಕಾಯುಕ್ತ, ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಇಂದಿಲ್ಲಿ ಕರೆ ಕೊಟ್ಟಿದ್ದಾರೆ.
ಸಾರ್ವಜನಿಕರ ಕುಂದು ಕೊರತೆ, ದೂರುಗಳ ವಿಚಾರಣೆ, ಪ್ರಕರಣಗಳ ವಿಲೇವಾರಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸವಲತ್ತು ಪಡೆಯುವ ಹಕ್ಕು ಎಲ್ಲ ನಾಗರಿಕರಿಗೆ ಇದೆ, ಎಲ್ಲರಿಗೂ ಸಮಪಾಲು, ಸಮಬಾಳು ಎಂಬ ಸಂವಿಧಾನದ ಆಶೋತ್ತರದಡಿ ಲೋಕಾಯುಕ್ತ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಕೊಡಿಸುವ ಕೆಲಸವನ್ನು ಮಾಡುತ್ತಿದೆ ಎಂದರು.
ಲೋಕಾಯುಕ್ತ ಕಾರ್ಯೋದ್ದೇಶ
ಭ್ರಷ್ಟಾಚಾರದಿಂದ ದೇಶದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ, ಭ್ರಷ್ಟಾಚಾರ ನಿರ್ಮೂಲನೆ ಲೋಕಾಯುಕ್ತ ಸಂಸ್ಥೆಯ ಕಾರ್ಯೋದ್ದೇಶ, ಎಲ್ಲಿ ಕೆಲಸ ಆಗುತ್ತಿಲ್ಲ, ಯಾವ ಕೆಲಸ ವಿಳಂಬವಾಗುತ್ತಿದೆ ಎಂಬುದನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸೌಲಭ್ಯ ಕಲ್ಪಿಸುವ ಕೆಲಸವನ್ನು ನಾವು ಮಾಡುತ್ತೇವೆ.
ಸೌಕರ್ಯ ಒದಗಿಸುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಕರ್ತವ್ಯಲೋಪ ಎಸಗಿದರೆ, ದುರ್ನಡತೆ ಪ್ರದರ್ಶಿಸಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಲೋಕಾಯುಕ್ತ ಕಾಯ್ದೆಯಡಿ ದೂರು ಸಲ್ಲಿಸಿದ ನಂತರ ಸೂಕ್ತ ವಿಚಾರಣೆ ನಡೆಸಲಾಗುವುದು, ಆರೋಪಕ್ಕೆ ಪ್ರತಿಕ್ರಿಯೆ ನೀಡಲು ಅಧಿಕಾರಿಗಳಿಗೆ ಸಾಕಷ್ಟು ಅವಕಾಶ ನೀಡಲಾಗುವುದು, ದೂರುದಾರರು ಸುಳ್ಳು ಆರೋಪ ಮಾಡಿದರೆ, ಅಂತಹ ಪ್ರಕರಣಗಳಲ್ಲಿ ಅವರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು.
ಸದುಪಯೋಗ ಪಡೆದುಕೊಳ್ಳಿ
ಹಲವು ಬಾರಿ ಸಾರ್ವಜನಿಕರಿಗೆ ತಮ್ಮ ಹಕ್ಕುಗಳ ಬಗ್ಗೆ ಸಾಕಷ್ಟು ಅರಿವು ಇಲ್ಲದ ಕಾರಣ ಕುಂದು ಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮಗಳನ್ನು ನಡೆಸುವುದು ಅವಶ್ಯಕವಾಗಿದೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇನ್ನೊಬ್ಬ ಉಪಲೋಕಾಯುಕ್ತ, ನ್ಯಾಯಮೂರ್ತಿ ಬಿ.ವೀರಪ್ಪ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಸ್ತಂಭದಂತಿರುವ ಮಾಧ್ಯಮಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ತಪ್ಪುಗಳನ್ನು ತಿದ್ದಿ ಪ್ರಾಮಾಣಿಕ ಸಮಾಜ ನಿರ್ಮಿಸಲು ಸಾಧ್ಯ ಎಂದರು.