ಬಳ್ಳಾರಿ:ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಕರ್ನಾಟಕದ ರಾಜಕೀಯ ದಿಕ್ಸೂಚಿಯನ್ನೇ ಬದಲಾಯಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದೆಲ್ಲೆಡೆ ಆಡಳಿತ ವಿರೋಧಿ ಅಲೆ ವ್ಯಾಪಕವಾಗಿದೆ.
ಎನ್‌ಡಿಎ ಅಭ್ಯರ್ಥಿಗಳ ಜಯಭೇರಿ
ಉಪಚುನಾವಣೆ ನಡೆಯುತ್ತಿರುವ ಮೂರೂ ಕ್ಷೇತ್ರಗಳಲ್ಲೂ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ.
ತದನಂತರ ರಾಜ್ಯದ ರಾಜಕೀಯ ಚಿತ್ರಣವೇ ಬದಲಾವಣೆಗೊಂಡು ಮುಂದೆ ಏನೆಲ್ಲಾ ಆಗುತ್ತದೆ ಎಂಬುದನ್ನು ಕಾದು ನೋಡಿ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಹಗರಣಗಳ ಸರಮಾಲೆ ಹೊತ್ತಿದೆ, ಮುಡಾ, ವಾಲ್ಮೀಕಿ ಸೇರಿದಂತೆ ಹಲವು ಹಗರಣಗಳನ್ನು ಬಿಜೆಪಿ ಬಯಲು ಮಾಡಿದೆ.
ಅಧಿಕಾರದ ಅಂಚಿನಲ್ಲಿ
ಸಿದ್ದರಾಮಯ್ಯ ಅವರೇ ಸ್ವತಃ ಮುಡಾ ಹಗರಣದಲ್ಲಿ ಸಿಲುಕಿ ಅಧಿಕಾರ ಕಳೆದುಕೊಳ್ಳುವ ಅಂಚಿನಲ್ಲಿದ್ದಾರೆ.
ಇದೊಂದು ಜನ ವಿರೋಧಿ ಸರ್ಕಾರ ಅಷ್ಟೇ ಅಲ್ಲ, ಜಾತಿ-ಜಾತಿಗಳ ನಡುವೆ ಸಂಘರ್ಷ ಉಂಟು ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ.
ಅಹಿಂದ ಹಾಗೂ ಭ್ರಷ್ಟಾಚಾರ ನಿಗ್ರಹ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಎಲ್ಲಾ ಸಮಯದಾಯಗಳನ್ನು ಮರೆತು, ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇಂತಹ ಭ್ರಷ್ಟ ಸರ್ಕಾರವನ್ನು ಜನ ಕಿತ್ತೊಗೆಯಲು ಕಾತರದಿಂದಿದ್ದಾರೆ ಎಂದರು.