ಬೆಂಗಳೂರು:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರರ ವಿರೋಧದ ನಡುವೆಯೂ ಸಿ.ಪಿ.ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಎಷ್ಟು ವಿರೋಧಿಯೂ ಅಷ್ಟೇ ಸಮನಾಗಿ ಯೋಗೇಶ್ವರ್ ಅವರನ್ನೂ ವಿರೋಧಿಸುತ್ತಾರೆ.
ಸಹೋದರರು ನಂಬಲು ಸಿದ್ಧರಿಲ್ಲ
ಕುಮಾರಸ್ವಾಮಿ ಅವರನ್ನು ನಂಬಿದರೂ, ಯೋಗೇಶ್ವರ್ ಅವರನ್ನು ರಾಜಕೀಯವಾಗಿ ನಂಬಲು ಶಿವಕುಮಾರ್ ಸಹೋದರರು ಸಿದ್ಧರಿಲ್ಲ.
ಆದರೆ, ಸಿದ್ದರಾಮಯ್ಯ ಅವರಿಗೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮುಖಭಂಗ ಮಾಡಬೇಕೆಂಬುದೇ ಗುರಿ.
ಈ ಗುರಿ ಸಾಧಿಸಲು ಚನ್ನಪಟ್ಟಣದಲ್ಲಿ ಸಮರ್ಥ ಅಭ್ಯರ್ಥಿಗಳು ಇಲ್ಲದ ಕಾರಣ ಕಳೆದ ಎರಡು ತಿಂಗಳ ಹಿಂದಿನಿಂದಲೂ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತಂದು ಉಪಚುನಾವಣಾ ಕಣಕ್ಕಿಳಿಸಲು ತೆರೆಮರೆಯಲ್ಲಿ ಮಾತುಕತೆ ನಡೆದಿದ್ದವು.
ಜಾರ್ಜ್ ನಿವಾಸದಲ್ಲಿ ಚರ್ಚೆ
ಕಳೆದ ತಿಂಗಳು ಸಚಿವ ಜಾರ್ಜ್ ನಿವಾಸದಲ್ಲಿ ಮುಖ್ಯಮಂತ್ರಿ ಅವರು, ಯೋಗೇಶ್ವರ್ ಅವರೊಂದಿಗೆ ಮುಖಾಮುಖಿ ಚರ್ಚೆ ನಡೆಸಿ, ಅಂದೇ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಗೆದ್ದು ಬನ್ನಿ, ನಿಮ್ಮನ್ನು ಬರುವ ಜನವರಿಯಲ್ಲಿ ಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದಲ್ಲದೆ, ಚುನಾವಣೆಯಲ್ಲಿ ಗೆಲ್ಲಿಸುವುದೂ ನನ್ನ ಹೊಣೆ ಎಂದಿದ್ದರು.
ಈ ಯಾವ ಬೆಳವಣಿಗೆಗಳೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಗಮನಕ್ಕೆ ಬಂದಿರಲಿಲ್ಲ, ಅವರಿಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷದ ಶಕ್ತಿ ಏನು ಎಂಬುದು ತಿಳಿದಿತ್ತು.
ಕ್ಷೇತ್ರದಲ್ಲಿ ಸುತ್ತಾಟ
ಮೊದಲು ತಮ್ಮ ಸಹೋದರ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿ ಕ್ಷೇತ್ರದಲ್ಲಿ ಹಲವು ಬಾರಿ ಸುತ್ತಾಟವನ್ನೂ ನಡೆಸಿದ್ದರು.
ನಂತರ ತಮ್ಮ ನಿಲುವಿನಿಂದ ಹಿಂದೆ ಸರಿದು, ದೂರದ ಸಂಬಂಧಿ ಹಾಗೂ ಕೆಪಿಎಸ್‌ಸಿ ಮಾಜಿ ಸದಸ್ಯ ರಘುನಂದ ರಾಮಣ್ಣ ಅವರನ್ನು ಕಣಕ್ಕಿಳಿಸುವ ತೀರ್ಮಾನ ಕೈಗೊಂಡಿದ್ದರು.
ಯೋಗೇಶ್ವರ್ ಅವರಿಗೆ ಬಿಜೆಪಿಯಲ್ಲಿ ಟಿಕೆಟ್ ದೊರೆಯುವುದಿಲ್ಲ, ಅವರು ಬಂಡಾಯ ಎದ್ದು ಪಕ್ಷೇತರರಾಗಿ ನಿಲ್ಲಬಹುದು, ಇಂತಹ ಸನ್ನಿವೇಶದಲ್ಲಿ ಅವರು ಗೆಲುವಿನ ದಡ ಮುಟ್ಟುವುದಿಲ್ಲ ಎಂಬ ಅನಿಸಿಕೆ ಶಿವಕುಮಾರ್ ಅವರಲ್ಲಿತ್ತು.
ಪಕ್ಷಕ್ಕೆ ಕರೆತರುವ ಅನುಮತಿ
ಆದರೆ, ಉಪಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರು ಎಐಸಿಸಿ ರಾಜಕೀಯ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮೂಲಕ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತರುವ ವಿಷಯ ಪ್ರಸ್ತಾಪಿಸಿ, ಅನುಮತಿಯನ್ನೂ ಪಡೆದುಕೊಂಡರು.
ಚನ್ನಪಟ್ಟಣ ಗೆಲುವೊಂದೇ ಮುಖ್ಯ, ಇದು ಯೋಗೇಶ್ವರ್ ಅವರಿಂದ ಮಾತ್ರ ಸಾಧ್ಯ, ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಹಿನ್ನಡೆ ಉಂಟು ಮಾಡಲು ನಮಗೆ ಇದೊಂದು ಅವಕಾಶ ಎಂದು ವರಿಷ್ಠರಿಗೆ ಸಿದ್ದರಾಮಯ್ಯ ಮನವರಿಕೆ ಮಾಡಿದ್ದು ಯಶಸ್ಸು ತಂದಿತು.
ವೇಣುಗೋಪಾಲ್ ಅವರೇ ಶಿವಕುಮಾರ್ ಅವರನ್ನು ಸಂಪರ್ಕಿಸಿ ಯೋಗೇಶ್ವರ್ ವಿಷಯ ಪ್ರಸ್ತಾಪಿಸಿ, ಅವರೇ ಪಕ್ಷದ ಅಭ್ಯರ್ಥಿ ಎಂದಿದ್ದಲ್ಲದೆ, ಚುನಾವಣಾ ಹೊಣೆಯನ್ನೂ ವಹಿಸಿಕೊಳ್ಳುವಂತೆ ಆದೇಶ ಮಾಡಿದರು.
ಮುಖ್ಯಮಂತ್ರಿ ಗಾದಿಗೆ ಸಮೀಪಿಸುವ ಸಂದರ್ಭದಲ್ಲಿ ಪಕ್ಷದ ವರಿಷ್ಠರ ಹಾಗೂ ಸಿದ್ದರಾಮಯ್ಯ ಅವರ ವಿರೋಧ ಕಟ್ಟಿಕೊಳ್ಳಬಾರದೆಂಬ ಕಾರಣಕ್ಕೆ ಒಲ್ಲದ ಮನಸ್ಸಿನಿಂದ ಯೋಗೇಶ್ವರ್ ಆಗಮನಕ್ಕೆ ಶಿವಕುಮಾರ್ ಒಪ್ಪಿಗೆ ಸೂಚಿಸಿದರಾದರೂ, ಚುನಾವಣೆಯಲ್ಲಿ ಇದು ಎಷ್ಟರ ಮಟ್ಟಿಗೆ ಫಲ ನೀಡುವುದೆಂಬುದನ್ನು ಕಾದು ನೋಡಬೇಕಿದೆ.