ಚನ್ನಪಟ್ಟಣ:ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಆಯ್ಕೆ ಬಯಸಿ ಇಂದು ನಾಮಪತ್ರ ಸಲ್ಲಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಜೊತೆಗೂಡಿ ಅದ್ದೂರಿ ಮೆರವಣಿಗೆಯಲ್ಲಿ ತೆರಳಿ ನಿಖಿಲ್ ನಾಮಪತ್ರ ಸಲ್ಲಿಸಿದರು.
ದೇವಾಲಯಗಳಲ್ಲಿ ಪೂಜೆ
ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ತಮ್ಮ ತಾತ ಎಚ್.ಡಿ.ದೇವೇಗೌಡ ಹಾಗೂ ಕುಟುಂಬ ಸದಸ್ಯರೊಂದಿಗೆ ನಗರದ ವೆಂಕಟ ರಮಣಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಅಲ್ಲಿಂದ ತಮ್ಮ ತಂದೆ ಕುಮಾರಸ್ವಾಮಿ ಹಾಗೂ ಪತ್ನಿ ಜೊತೆಗೂಡಿ ಚನ್ನಪಟ್ಟಣದ ಕೆಂಗಲ್ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಬಿಜೆಪಿ ಹಿರಿಯ ಮುಖಂಡರಾದ ಡಿ.ವಿ.ಸದಾನಂದಗೌಡ, ಆರ್.ಅಶೋಕ್, ಡಾ.ಅಶ್ವತ್ಥನಾರಾಯಣ, ಸಂಸದರಾದ ಡಾ.ಕೆ.ಸುಧಾಕರ್, ಯಧುವೀರ ಒಡೆಯರ್ ಮತ್ತಿತರ ಗಣ್ಯರ ಜೊತೆ ಚನ್ನಪಟ್ಟಣದ ಹೊರವಲಯದ ಶೇರ್ವಾ ವೃತ್ತದಿಂದ ಜನಸಾಗರದೊಂದಿಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಕಚೇರಿ ತಲುಪಿದರು.
ಬೃಹತ್ ರೋಡ್ ಶೋ
ರೋಡ್ ಶೋದಲ್ಲಿ ಜನಸಾಗರವೇ ಬಂದಿದ್ದರಿಂದ ಶೇರ್ವಾ ವೃತ್ತದಿಂದ ತಹಸೀಲ್ದಾರ್ ಕಚೇರಿ ಮುಟ್ಟಲು ಒಂದು ತಾಸಿಗೂ ಹೆಚ್ಚು ಸಮಯ ಹಿಡಿಯಿತು.
ನಂತರ ನಿಖಿಲ್ ಅವರು, ಸಂಸದ ಬಿ.ವೈ.ರಾಘವೇಂದ್ರ, ಸದಾನಂದ ಗೌಡ, ಕುಮಾರಸ್ವಾಮಿ ಹಾಗೂ ಪತ್ನಿ ಜೊತೆ ತೆರಳಿ ನಾಮಪತ್ರ ಸಲ್ಲಿಸಿದರು.
ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಿ.ಪಿ.ಯೋಗೇಶ್ವರ್, ಗುರುವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೂಡಿ ಅದ್ದೂರಿ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ್ದರು.
ಇಂದು ಎನ್‌ಡಿಎ ಮೈತ್ರಿಕೂಟದ ಕಾರ್ಯಕರ್ತರು, ಅಭ್ಯರ್ಥಿ ಹಾಗೂ ರಾಜ್ಯ ನಾಯಕರನ್ನು ಜಯಘೋಷದೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಕೊಂಡೊಯ್ದರು.
ಯೋಗೇಶ್ವರ್ ವಿರುದ್ಧ ಕಿಡಿ
ನಾಮಪತ್ರ ಸಲ್ಲಿಕೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ವಿ.ಸದಾನಂದ ಗೌಡ ಹಾಗೂ ಆರ್.ಅಶೋಕ್, ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಸ್ವಾರ್ಥಕ್ಕಾಗಿ ರಾಜಕೀಯ ಮಾಡುವ ವ್ಯಕ್ತಿ ಯೋಗೇಶ್ವರ್ ಎಂದು ಬಣ್ಣಿಸಿದ ಗೌಡರು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಖಂಡರಿಗೆ ಮತ್ತೆ ಹಳೆಯ ನೆನಪು ತರಿಸಲಿದ್ದಾರೆ ಎಂದರು.
ಯೋಗೇಶ್ವರ್ ಆಧುನಿಕ ಭಗೀರಥ ಅಲ್ಲವೇ ಅಲ್ಲ, ನನ್ನ ಸಂಪುಟದಲ್ಲಿದ್ದ ಸಂದರ್ಭದಲ್ಲಿ ಕ್ಷೇತ್ರದ ಕೆರೆಗಳಿಗೆ ನೀರು ತರಲು ಹಣ ಬಿಡುಗಡೆ ಮಾಡಿದೆವು, ಅದು ಬಿಜೆಪಿ ಸರ್ಕಾರ ಮಾಡಿದ್ದೇ ಹೊರತು ಯೋಗೇಶ್ವರ್ ಅಲ್ಲ.
ಗೆಲುವಿಗೆ ಶ್ರಮಿಸುತ್ತೇವೆ
ಈ ವ್ಯಕ್ತಿಯ ಬಣ್ಣ ಕ್ಷೇತ್ರದ ಜನತೆಗೂ ಗೊತ್ತಿದೆ, ನಿಖಿಲ್ ಕುಮಾರಸ್ವಾಮಿ ಯಾವುದೇ ಸಂಶಯವಿಲ್ಲದೆ ಗೆದ್ದೇ ಗೆಲ್ಲುತ್ತಾರೆ, ನಾವು ಜೆಡಿಎಸ್ ಕಾರ್ಯಕರ್ತರ ಜೊತೆಗೂಡಿ ಅವರ ಗೆಲುವಿಗೆ ಶ್ರಮಿಸುತ್ತೇವೆ.
ನಿಖಿಲ್ ಜೆಡಿಎಸ್ ಅಭ್ಯರ್ಥಿ ಅಲ್ಲ, ಎನ್‌ಡಿಎ ಅಭ್ಯರ್ಥಿ ಅವರನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದರು.