ಬೆಂಗಳೂರು:ಅತಿವೃಷ್ಟಿ ಹಾಗೂ ಪ್ರವಾಹದಿಂದ ಆಗಿರುವ ಹಾನಿಗೆ ಪರಿಹಾರ ನೀಡಿ ಎಂದು ಜಿಲ್ಲಾಡಳಿತಕ್ಕೆ ಇಂದಿಲ್ಲಿ ಸರ್ಕಾರ ಆದೇಶ ಮಾಡಿದೆ.
ಇತ್ತೀಚೆಗೆ ಬಿದ್ದ ಭಾರೀ ಮಳೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮಸಹೋದ್ಯೋಗಿಗಳು ಮತ್ತು ಅಧಿಕಾರಿಗಳೊಂದಿಗೆ ಗೇಹ ಕಚೇರಿ ಕರಷ್ಣಾದಲ್ಲಿ ಜಿಲ್ಲಾಧಿಕಾರಿ ಹಾಗೂ ಕಾರ್ಯನಿರ್ವಹಣಾ ಅಧಿಕಾರಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಈ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ಹಾನಿಗೀಡಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಿಯಮಾವಳಿ ಪ್ರಕಾರ ತಕ್ಷಣ ಪರಿಹಾರ ಒದಗಿಸಿ, ಜನರಿಗೆ ಸಾಂತ್ವನ ನೀಡಿ ಎಂದಿದ್ದಾರೆ.
ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಬೇಕು
ಹಿಂಗಾರು ಅವಧಿಯಲ್ಲಿ ಮುಂದಿನ ಡಿಸೆಂಬರ್‌ವರೆಗೆ ಭಾರೀ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ, ಈ ಬಗ್ಗೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಬೇಕು, ಮನೆ ಹಾನಿ ಮತ್ತು ಪ್ರಾಣ ಹಾನಿ ಪ್ರಕರಣಗಳಲ್ಲಿ ೪೮ ಗಂಟೆಗಳ ಒಳಗೆ ಪರಿಹಾರ ಒದಗಿಸಬೇಕು.
ಹಿಂಗಾರಿನಲ್ಲಿ ಅತಿವೃಷ್ಟಿಯಿಂದಾಗಿ ಒಟ್ಟು 25 ಸಾವು ಸಂಭವಿಸಿವೆ, ಅತಿವೃಷ್ಟಿಯಿಂದಾಗಿ 19 ದೊಡ್ಡ ಜಾನುವಾರುಗಳು, 66 ಸಣ್ಣ ಜಾನುವಾರುಗಳು ಸಾವಿಗೀಡಾಗಿವೆ, ಎಸ್‌ಡಿಆರ್‌ಎಫ್ ನಿಯಮಾನುಸಾರ ದೊಡ್ಡ ಜಾನುವಾರುಗಳಿಗೆ ಒಟ್ಟು 6.84 ಲಕ್ಷ ರೂ., ಸಣ್ಣ ಜಾನುವಾರುಗಳಿಗೆ ಒಟ್ಟು 2.8 ಲಕ್ಷ ರೂ. ಸೇರಿದಂತೆ ಒಟ್ಟು 9.6 ಲಕ್ಷ ರೂ. ತುರ್ತು ಪರಿಹಾರ ಪಾವತಿಸಲಾಗಿದೆ.
ಅಧಿಕ ಮಳೆಯಿಂದಾಗಿ 84 ಮನೆಗಳು ಸಂಪೂರ್ಣ ಹಾನಿಗೀಡಾಗಿವೆ, 2077 ಮನೆಗಳು ಭಾಗಶಃ ಹಾನಿಗೀಡಾಗಿವೆ, ಪೂರ್ತಿ ಮನೆ ಹಾನಿಗೆ 1.20 ಲಕ್ಷ ರೂ. ಹಾಗೂ ಭಾಗಶಃ ಹಾನಿಗೀಡಾದ ಮನೆಗಳಿಗೆ ಮುಂಗಾರು ಹಂಗಾಮಿನಲ್ಲಿ ಸೂಚಿಸಿರುವಂತೆ 50,000 ರೂ. ಪರಿಹಾರ ನೀಡಲು ಆದೇಶಿಸಲಾಗಿದೆ.
ವಾರದೊಳಗೆ ವರದಿ ಸಲ್ಲಿಸಿ
ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಯುತ್ತಿದೆ, ಒಂದು ವಾರದೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಅತಿವೃಷ್ಟಿ ಪರಿಹಾರ ಕಾರ್ಯಗಳಿಗೆ ಸಾಕಷ್ಟು ಅನುದಾನ ಲಭ್ಯವಿದೆ, ಜಿಲ್ಲಾಧಿಕಾರಿಗಳ ಖಾತೆಯಲ್ಲಿ 551.25 ಕೋಟಿ ರೂ. ಹಾಗೂ ತಹಶೀಲ್ದಾರ್ ಖಾತೆಯಲ್ಲಿ 115.71 ಕೋಟಿ ರೂ. ಸೇರಿದಂತೆ ಒಟ್ಟು 666.96 ಕೋಟಿ ರೂ. ಲಭ್ಯವಿದ್ದು ಸಮರ್ಪಕ ಬಳಕೆ ಮಾಡುವಂತೆ ಸೂಚಿಸಿದರು.
ಉತ್ತಮ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ 895.62 ಟಿಎಂಸಿಯಲ್ಲಿ, ಪ್ರಸ್ತುತ 871.26 ಟಿಎಂಸಿ ನೀರು ಸಂಗ್ರಹವಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ 505.81 ಟಿಎಂಸಿ ಇತ್ತು.
ಜಲವಿದ್ಯುತ್‌ಗೆ ನೀರು ಲಭ್ಯ
ಈ ಬಾರಿ ಜಲವಿದ್ಯುತ್ ಉತ್ಪಾದನೆಗೆ ನೀರು ಲಭ್ಯವಿದೆ, ಕಾವೇರಿ ಕಣಿವೆ ಹಾಗೂ ಕೃಷ್ಣಾ ಕಣಿವೆಯಲ್ಲೂ ನೀರಿನ ಸಂಗ್ರಹವಿದೆ, ಕುಡಿಯುವ ನೀರಿಗೆ ಸಾಕಾಗುವಷ್ಟು ಇಟ್ಟುಕೊಂಡು ನೀರಾವರಿಗೆ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು.
ಕೆರೆಗಳ ಒತ್ತುವರಿ ತೆರವುಗೊಳಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗಡುವು ವಿಧಿಸಲಾಗಿತ್ತು, ಬೆಂಗಳೂರು ಸುತ್ತಮುತ್ತ ಬಹುತೇಕ ಕೆರೆಗಳು ಕೇವಲ ಶೇ.30ರಷ್ಟು ಮಾತ್ರ ತುಂಬಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು.
ಕೆರೆಗಳ ಒತ್ತುವರಿ ತೆರವುಗೊಳಿಸಿ, ಹೂಳೆತ್ತುವುದು ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು, ಇದಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕ ಬಳಸಿಕೊಳ್ಳಬೇಕು.
ಹೆಚ್ಚುವರಿ ಬಿತ್ತನೆ ಬೀಜ ಬೇಡಿಕೆ ಪೂರೈಸಲು ಕ್ರಮ ಕೈಗೊಳ್ಳಬೇಕು, ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಬಿತ್ತನೆ ಬೀಜ ಮತ್ತು ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಸಿಗುವಂತೆ ನೋಡಿಕೊಳ್ಳಬೇಕು ಎಂದರು.