ಬೆಂಗಳೂರು:ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು, ಧರ್ಮಪತ್ನಿ ಸುದೇಶ್ ಧನಕರ್ ಅವರೊಂದಿಗೆ ಇಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಬೆಳಗ್ಗೆ 9 ಗಂಟೆಗೆ ಆಗಮಿಸಿದ ಉಪರಾಷ್ಟ್ರಪತಿ ಒಂದು ಗಂಟೆಗೂ ಹೆಚ್ಚು ಕಾಲ ಇದ್ದು, ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.
ಚನ್ನಮ್ಮ ಚೇತರಿಕೆಗೆ ಹಾರೈಕೆ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚನ್ನಮ್ಮ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ ಉಪರಾಷ್ಟ್ರಪತಿಗಳು, ನಂತರ ಅವರನ್ನು ದೆಹಲಿಗೆ ಕರೆದುಕೊಂಡು ಬನ್ನಿ ಎಂದು ದೇವೇಗೌಡರಿಗೆ ತಿಳಿಸಿದರು.
ಉಪರಾಷ್ಟ್ರಪತಿಗಳ ಮಾತಿಗೆ ಸಮ್ಮತಿಸಿದ ದೇವೇಗೌಡ ಅವರು, ತಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ಹೃದಯ ತುಂಬಿ ಬಂದಿದೆ, ತಮ್ಮ ಆಗಮನ ನಮ್ಮ ಇಡೀ ಕುಟುಂಬಕ್ಕೆ ಬಹಳ ಸಂತೋಷ ಉಂಟು ಮಾಡಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಉಪರಾಷ್ಟ್ರಪತಿ ಜಗದೀಪ್ ಧನಕರ್ ದಂಪತಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಜತೆ ಉಪಹಾರ ಸೇವಿಸಿದರು.
ಸದಸ್ಯರ ಕುಶಲೋಪರಿ
ಕುಟುಂಬದ ಎಲ್ಲಾ ಸದಸ್ಯರ ಕುಶಲೋಪರಿ ವಿಚಾರಿಸಿ, ಪುಟ್ಟ ಮಕ್ಕಳೊಂದಿಗೆ ಉಪರಾಷ್ಟ್ರಪತಿಗಳು ಕೆಲ ಕಾಲ ಕಳೆದರು.
ಇದಕ್ಕೂ ಮುನ್ನ ನಿವಾಸಕ್ಕೆ ಆಗಮಿಸಿದ ಉಪರಾಷ್ಟ್ರಪತಿ ಅವರನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಬರಮಾಡಿಕೊಂಡರು.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಬೀಳ್ಕೊಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಉಪರಾಷ್ಟ್ರಪತಿ ಹಾಗೂ ದೇವೇಗೌಡರ ನಡುವೆ ಸ್ನೇಹಪೂರ್ವಕ ಬಾಂಧವ್ಯ ಇದೆ, ಇಬ್ಬರೂ ಪರಸ್ಪರ ಗೌರವಭಾವ ಇರಿಸಿಕೊಂಡಿದ್ದಾರೆ ಎಂದರು.
ರಾಷ್ಟ್ರದ ಅಭಿವೃದ್ಧಿ ಚರ್ಚೆ
ಇಬ್ಬರೂ ರೈತ ಕುಟುಂಬದ ಹಿನ್ನೆಲೆಯಿಂದ ಬಂದವರು, ಹೀಗಾಗಿ ಇಬ್ಬರ ಚರ್ಚೆ ಬಹುತೇಕ ಕೃಷಿ ಕೇಂದ್ರಿತವಾಗಿತ್ತು, ರೈತರ ಹಾಗೂ ರಾಷ್ಟ್ರದ ಅಭಿವೃದ್ಧಿ ಬಗ್ಗೆ ಅನೇಕ ಮಹತ್ವದ ವಿಚಾರಗಳನ್ನು ಹಂಚಿಕೊಂಡರು.
ಉಪರಾಷ್ಟ್ರಪತಿಗಳು ಹಲವು ಬಾರಿ ಬೆಂಗಳೂರಿಗೆ ಬಂದಾಗ ದೇವೇಗೌಡರ ನಿವಾಸಕ್ಕೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದರು, ಇಂದು ಭೇಟಿ ನೀಡಿದ್ದು, ನಮ್ಮ ತಾಯಿ ಚನ್ನಮ್ಮ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು, ಅವರ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಮ್ಮ ಕುಟುಂಬ ಚಿರಋಣಿ ಆಗಿರುತ್ತದೆ ಎಂದರು.