2047ರ ವೇಳೆಗೆ ವಿಕಸಿತ ಭಾರತ ಗುರಿ
ಬೆಂಗಳೂರು:ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು, ಬಜೆಟ್‌ನಲ್ಲಿ ಯುವಜನರ ಕೌಶಲ್ಯ ವೃದ್ಧಿಗೆ 3 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಪ್ರಧಾನಮಂತ್ರಿ ಉದ್ಯೋಗ ಮೇಳ 2ನೇ ಹಂತದ ಕಾರ್ಯಕ್ರಮದಲ್ಲಿ 25 ಯುವಜನರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ 12 ಇಲಾಖೆಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ, 2047ರ ವೇಳೆಗೆ ವಿಕಸಿತ ಭಾರತ ಗುರಿ ಮುಟ್ಟುವ ಛಲದೊಂದಿಗೆ ಮೋದಿ ಅವರು ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ಹೆಚ್ಚು ಉತ್ತೇಜನ ನೀಡುತ್ತಿದ್ದಾರೆ ಎಂದರು.
ಭಾರತ 3ನೇ ಆರ್ಥಿಕ ಶಕ್ತಿ
ಬಜೆಟ್‌ನಲ್ಲಿ ಮೀಸಲಿಟ್ಟ ಹಣ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ನೇರವಾಗಿ ಬಿಡುಗಡೆ ಆಗುತ್ತದೆ, ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ್ ಭಾರತ್ ಪರಿಕಲ್ಪನೆಗಳಡಿ ಉತ್ಪಾದನಾ ಸಂಪರ್ಕ ಉತ್ತೇಜನ ಯೋಜನೆ ಮೂಲಕವೂ ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಮುನ್ನಡೆ ಸಾಧಿಸಲಾಗುತ್ತಿದೆ, ಭಾರತವನ್ನು 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ರೂಪಿಸಲು ಸಹಕಾರಿ ಆಗುತ್ತದೆ.
ಮೊದಲ ಹಂತದ ಉದ್ಯೋಗ ಮೇಳದಲ್ಲಿ 30,000 ಯುವಜನರಿಗೆ, ಎರಡನೇ ಹಂತದಲ್ಲಿ 20,000 ಮಂದಿಗೆ ಉದ್ಯೋಗ ನೀಡಲಾಗಿದೆ ಎಂದರು.