ಅಲ್ಪಸಂಖ್ಯಾತರ ತುಷ್ಟೀಕರಣ ಕಾರ್ಯ ನಡೆಯುತ್ತಿದೆ
ಬೆಂಗಳೂರು:ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಉಪಚುನಾವಣೆಯಲ್ಲಿ ಆಯ್ಕೆಯಾದ ಬಿಜೆಪಿಯ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ವಿಧಾನಪರಿಷತ್‌ನ ನೂತನ ಸದಸ್ಯರಾಗಿ ಭಗವಂತ ಹಾಗೂ ತಾಯಿ ಭಾರತಾಂಬೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.
ವಕ್ಫ್ ಹೆಸರಲ್ಲಿ ರೈತರ ಭೂಮಿ ಕಬಳಿಕೆ
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ ಮಿತಿಮೀರಿದೆ, ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ, ವಕ್ಫ್ ಹೆಸರಿನಲ್ಲಿ ರೈತರ ಭೂಮಿಯನ್ನು ಕಬಳಿಸುವ ಕಾರ್ಯ ನಡೆಯುತ್ತಿದೆ ಎಂದರು.
ಯಾವೊಬ್ಬ ಸಣ್ಣ-ದೊಡ್ಡ ರೈತರಿಗೂ ಅನ್ಯಾಯ ಆಗಲು ಬಿಜೆಪಿ ಬಿಡುವುದಿಲ್ಲ, ವಕ್ಫ್ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ದೇಶದಲ್ಲಿ ಒಂದು ಸಮುದಾಯದಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವ ಪ್ರಯತ್ನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.
ಸಚಿವ ಜಮೀರ್ ಅಹ್ಮದ್ ಷಡ್ಯಂತ್ರ
ಶಾಸಕ ಹರೀಶ್ ಪೂಂಜ ಮಾತನಾಡಿ, ವಕ್ಫ್ ಸಮಸ್ಯೆ ಸಂಬಂಧ ವಿಜಯಪುರಕ್ಕೆ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ್ ನೇತೃತ್ವದ ನಿಯೋಗ ಭೇಟಿ ಕೊಟ್ಟಿದೆ, ನಿಯೋಗ ನಡೆಸಿದ ಸಮೀಕ್ಷೆಯಿಂದ ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್ ಮತ್ತು ಅವರ ಸಂಗಡಿಗರ ಷಡ್ಯಂತ್ರ ಬಹಿರಂಗವಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಸಚಿವ ಜಮೀರ್ ಅಹ್ಮದ್ ಜಿಲ್ಲಾವಾರು ಅದಾಲತ್ ನಡೆಸಿ, 1974ರ ವಕ್ಫ್ ಗೆಜೆಟ್ ಅಧಿಸೂಚನೆಯಲ್ಲಿರುವ ಸರ್ವೇ ನಂಬರ್‌ಗಳಿಗೆ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸುವ ಕಾರ್ಯ ನಡೆದಿರುವುದು ಜಿಲ್ಲಾಧಿಕಾರಿಗಳ ಸಭಾ ನಡಾವಳಿಯಿಂದ ಗೊತ್ತಾಗಿದೆ.
ಸಚಿವ ಜಮೀರ್ ಅಹ್ಮದ್ ಭೂ ಮಾಫಿಯಾಗಳ ಜೊತೆ ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು.