ಹೊಸ ಜನಗಣತಿ ಅಂಕಿ-ಅಂಶ ಬರುವವರೆಗೂ ಸಮನಾಗಿ ಹಂಚಿಕೆ
ಬೆಂಗಳೂರು:ಪರಿಶಿಷ್ಟ ಸಮಯದಾಯಗಳಿಗೆ ಇರುವ ಮೀಸಲಾತಿಯಲ್ಲಿ ಎಡಗೈ ಮತ್ತು ಬಲಗೈ ಪಂಗಡಗಳಿಗೆ ಶೇಕಡ 50ರಷ್ಟು ಮೀಸಲಾತಿಯನ್ನು ಸಮಾನವಾಗಿ ಹಂಚಿಕೆ ಮಾಡಿಕೊಳ್ಳುವ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಪರಿಶಿಷ್ಟರಿಗೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ಪೂರ್ಣಾಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಕರ್ನಾಟಕ ಸರ್ಕಾರ ಸಮಾನವಾಗಿ ಹಂಚಿಕೆ ಮಾಡಲು ಮುಂದಾಗಿದೆ.
ಮುಖಂಡರ ಸಭೆ ತೀರ್ಮಾನ
ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸದಾಶಿವ ಆಯೋಗ ವರದಿ ಬದಿಗಿರಿಸಿ ಪರಿಶಿಷ್ಟ ಸಮುದಾಯದಡಿ ಬರುವ ಪಂಗಡಗಳ ಜನಪ್ರತಿನಿಧಿಗಳು ಹಾಗೂ ಮುಖಂಡರ ಸಭೆಯಲ್ಲಿ ಈ ಸರ್ವಸಮ್ಮತ ತೀರ್ಮಾನ ಕೈಗೊಳ್ಳಲಾಗಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಈ ಸಮುದಾಯದ ಮುಖಂಡರ ಸಭೆಯಲ್ಲಿ, ಸಚಿವರು ಮಂಡಿಸಿದ ಸೂತ್ರಕ್ಕೆ ಒಕ್ಕೊರಲಿನ ಸಮ್ಮತಿ ವ್ಯಕ್ತವಾಗಿದೆ.
ಕಳೆದ 2011ರ ಜನಗಣತಿ ಆಧಾರದ ಮೇಲೆ ಒಳಮೀಸಲಾತಿ ಹಂಚಿಕೆ ಮಾಡಿದರೆ ಎಲ್ಲರಿಗೂ ನ್ಯಾಯ ದೊರೆಯುವುದಿಲ್ಲ, ಹಾಗಾಗಿ 2025-26ರಲ್ಲಿ ನಡೆಯಲಿರುವ ಜನಗಣತಿ ಅಂಶಗಳ ಆಧಾರದ ಮೇಲೆ ಮೀಸಲಾತಿ ಹಂಚಿಕೆ ಮಾಡಿಕೊಳ್ಳೋಣ.
ಹೊಸ ಜನಗಣತಿ ಅಂಕಿ-ಅಂಶ
ಹೊಸ ಜನಗಣತಿ ಅಂಕಿ-ಅಂಶ ಬರುವವರೆಗೂ ಎಡಗೈ-ಬಲಗೈ ಈಗಿನ ಮೀಸಲಾತಿಯನ್ನು ಸಮನಾಗಿ ಹಂಚಿಕೊಳ್ಳೋಣ.
ವರದಿ ಬಂದ ನಂತರ ಜನಸಂಖ್ಯೆ ಪ್ರಮಾಣದ ಆಧಾರದ ಮೇಲೆ ಹಂಚಿಕೆ ಮಾಡಿಕೊಳ್ಳೋಣ ಎಂಬ ಡಾ.ಪರಮೇಶ್ವರ್ ಸೂತ್ರಕ್ಕೆ ಸಭೆ ಒಪ್ಪಿಗೆ ಸೂಚಿಸಿದೆ.
ತದನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮುದಾಯದ ಮುಖಂಡರ ನಿರ್ಧಾರವನ್ನು ತಿಳಿಸಿ, ಸಂಪುಟ ಸಭೆ ಮುಂದಿಟ್ಟು ಸಂವಿಧಾನಾತ್ಮಕವಾಗಿ ಹಂಚಿಕೆ ಮಾಡುವಂತೆ ಮಾಡಿದ ಮನವಿಗೆ ಸಮ್ಮತಿಯೂ ದೊರೆತಿದೆ.
ಸಂವಿಧಾನ ಬದ್ಧ ಹಂಚಿಕೆ
ಕಳೆದ ಸೋಮವಾರ ನಡೆದ ಮಂತ್ರಿಮಂಡಲ ಸಭೆಯಲ್ಲಿ ವಿಷಯ ಮಂಡನೆ ಮಾಡಿ ಸಂವಿಧಾನ ಬದ್ಧವಾಗಿ ಒಳಮೀಸಲಾತಿ ಹಂಚಿಕೆ ಮಾಡುವ ಉದ್ದೇಶದಿಂದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಒಬ್ಬರ ನೇತೃತ್ವದಲ್ಲಿ ಆಯೋಗ ರಚಿಸಲಾಗಿದೆ.
ಆಯೋಗ ಮೂರು ತಿಂಗಳಲ್ಲಿ ವರದಿ ನೀಡುವಂತೆ ಸಮಯ ನಿಗದಿ ಮಾಡಲಾಗಿದ್ದು, ಸರ್ಕಾರ ಆಯೋಗಕ್ಕೆ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಲಿದೆ.
2011ರ ನಂತರ ದೇಶದಲ್ಲಿ ಜನಗಣತಿ ನಡೆದಿಲ್ಲ, ಮುಂದಿನ ವರ್ಷ ದೇಶದಲ್ಲಿ ಜನಗಣತಿ ನಡೆಸಲು ಕೇಂದ್ರ ಸರ್ಕಾರ ಸಜ್ಜಾಗಿದೆ, ಈ ವರದಿ ಬರುವವರೆಗೆ ಕಾಯುವುದು ಒಳ್ಳೆಯದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.