ರಾಹುಲ್, ಸೋನಿಯಾ ಗಾಂಧಿ ಮಾಡಲಾಗದ ಕಾರ್ಯ !
ನವದೆಹಲಿ:ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿಷಯದಲ್ಲಿ ಆ ಪಕ್ಷದ ಅಧಿನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮಾಡಲಾಗದ ಕೆಲಸವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿದ್ದಾರೆ ಎಂದು ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅನುಭವಿ ರಾಜಕಾರಣಿಯಾಗಿದ್ದು, ಗ್ಯಾರಂಟಿ ಯೋಜನೆಗಳ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳನ್ನು ತರಾಟೆಗೆ ತೆಗೆದುಕೊಂಡಿರುವುದು ಸರಿಯಾಗಿದೆ ಎಂದಿದ್ದಾರೆ.
ಗ್ಯಾರಂಟಿ ಯೋಜನೆ: ಸರ್ಕಾರದ ಹೆಣಗಾಟ
ಗ್ಯಾರಂಟಿ ಯೋಜನೆಗಳನ್ನು ಜಾರಿಯಲ್ಲಿಡಲು ಸಿದ್ದರಾಮಯ್ಯ ಸರ್ಕಾರ ಹೆಣಗಾಡುತ್ತಿದೆ, ಸರ್ಕಾರದ ತೊಳಲಾಟ ಮತ್ತು ವೇದನೆ ಅದುಮಿಟ್ಟುಕೊಳ್ಳಲಾರದೆ ಗ್ಯಾರಂಟಿ ಯೋಜನೆಗಳಿಂದ ಆಗುತ್ತಿರುವ ನೋವನ್ನು ಮಾರ್ಮಿಕವಾಗಿ ಹೊರಹಾಕಿದ ಡಿ.ಕೆ. ಶಿವಕುಮಾರ್ ಅವರನ್ನೂ ಅಭಿನಂದಿಸುವುದಾಗಿ ಕೇಂದ್ರ ಸಚಿವ ಸೋಮಣ್ಣ ಹೇಳಿದರು.
ಕರ್ನಾಟಕ ಸಂಘದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಆರ್ಥಿಕ ಸ್ಥಿತಿ, ರಾಜ್ಯದ ಪಾಲುದಾರಿಕೆ ಮತ್ತು ಇತಿಮಿತಿ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರಗಳನ್ನು ನಡೆಸಬೇಕಾಗುತ್ತದೆ, ಚುನಾವಣೆ ಸಮಯದಲ್ಲಿ ಅಧಿಕಾರಕ್ಕೆ ಬರುವ ಲಾಲಸೆಯಿಂದ ರಣೋತ್ಸಾಹದಲ್ಲಿ ಜನರಿಗೆ ಆಶ್ವಾಸನೆ ನೀಡುವ ಮೊದಲು ಹತ್ತು ಬಾರಿ ಯೋಚಿಸಬೇಕು ಎಂದರು.
ದೆಹಲಿಯಲ್ಲಿ ತಾಯಿ ಕನ್ನಡಾಂಬೆ ಪೂಜೆ ಮತ್ತು ಧ್ವಜಾರೋಹಣ ಮಾಡುವ ಸದವಕಾಶ ಲಭ್ಯವಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.
ಕನ್ನಡ ಅಸ್ತಿತ್ವ ಕಾಯ್ದುಕೊಳ್ಳಲು ಕರೆ
ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹನಿಯರ ವ್ಯಕ್ತಿತ್ವ ರಾಷ್ಟ್ರ ಮಟ್ಟದಲ್ಲಿ ಪರಿಚಯಿಸುವಲ್ಲಿ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಕಟಣೆಗಳನ್ನು ಹೊರತರಬೇಕು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನ್ನಡ ಮತ್ತು ಕನ್ನಡ ಸಂಘಟನೆಗಳ ಅಸ್ತಿತ್ವ ಕಾಯ್ದುಕೊಳ್ಳಲು ದೆಹಲಿ ಕನ್ನಡಿಗರೆಲ್ಲರೂ ಒಗಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಸಮಸ್ತ ಕರ್ನಾಟಕದ ಜನತೆಗೆ 69ನೇ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಶುಭಾಶಯವನ್ನು ಸಚಿವ ಸೋಮಣ್ಣ ಕೋರಿದರು.