ಸಂಸದರು ಸಂಸತ್ತಿನಲ್ಲಿ ಪ್ರತಿಭಟಿಸಬೇಕು: ಸಿದ್ದರಾಮಯ್ಯ
ಬೆಂಗಳೂರು:ಅನುದಾನ ನೀಡುವ ವಿಚಾರದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಭಾರೀ ತಾರತಮ್ಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕಿಡಿಕಾರಿದ್ದಾರೆ.
ಮಹಾರಾಷ್ಟ್ರ ನಂತರ ಕರ್ನಾಟಕವೇ ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಕೊಡುವ ರಾಜ್ಯ, ನಾವು 4 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ತೆರಿಗೆ ಕೊಟ್ಟರೂ ನಮಗೆ ಹಿಂತಿರುಗಿ ಬರುತ್ತಿರುವುದು ಕೇವಲ 50 ರಿಂದ 60,000 ಕೋಟಿ ರೂ. ಮಾತ್ರ.
ಒಂದು ರೂ.ಗೆ 15 ಪೈಸೆ
ಹದಿನೈದನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಆದ ಅನ್ಯಾಯವನ್ನು ಕೇಂದ್ರ ಸರ್ಕಾರ ಸರಿಪಡಿಸಿಲ್ಲ, ಒಂದು ರೂ.ಗೆ ಕೇವಲ 14ರಿಂದ 15 ಪೈಸೆ ಮಾತ್ರ ನಮಗೆ ಹಿಂತಿರುಗಿ ಬರುತ್ತಿದೆ.
ಹಸುವಿನ ಹಾಲನ್ನು ಅದರ ಕರುವಿಗೂ ಉಣಿಸದಿದ್ದರೆ, ಆ ಕರು ಹೇಗೆ ಬಲಿಷ್ಠವಾಗಲು ಸಾಧ್ಯ ಎಂದು ತಮ್ಮದೇ ದಾಟಿಯಲ್ಲಿ ವ್ಯಾಖ್ಯಾನ ಮಾಡುವ ಮೂಲಕ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಶಾಲಾ ಮಕ್ಕಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಅಂಕಿ-ಅಂಶಗಳನ್ನು ಮುಂದಿಟ್ಟು ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದರು.
ನಮ್ಮ ಹಕ್ಕನ್ನು ಕೇಳಬೇಕಿದೆ
ನಾವು ಮುಂದುವರೆದ ರಾಜ್ಯ ಎಂದು ತೆರಿಗೆ ಪಾಲಿನಲ್ಲಿ ಅನ್ಯಾಯ ಮಾಡುತ್ತಾರೆ, ಕನ್ನಡಿಗರಾದ ನಾವೆಲ್ಲರೂ, ಇವರ ಮಲತಾಯಿ ದೋರಣೆ ಅರ್ಥ ಮಾಡಿಕೊಂಡು ನಮ್ಮ ಹಕ್ಕನ್ನು ಕೇಳಬೇಕಿದೆ.
ರಾಜ್ಯದ ಎಲ್ಲಾ ಸಂಸದರು, ಸಂಸತ್ತಿನ ಉಭಯ ಸದನಗಳಲ್ಲೂ ಧ್ವನಿ ಎತ್ತಿ ಪ್ರತಿಭಟಿಸಿದರೆ, ಕನ್ನಡಿಗರಿಗೆ ನ್ಯಾಯ ಸಿಗುತ್ತದೆ ಎಂದರು.
ಈಗಲಾದರೂ ನಮ್ಮ ಸಂಸದರು, ವಿಷಯ ಪ್ರಸ್ತಾಪಿಸಿ, ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ಕೊಡಿಸುವ ಶಕ್ತಿ ಅವರಿಗೆ ಬರಲಿ ಎಂದು ಮಕ್ಕಳ ಮುಂದೆ ಹೇಳಿಕೊಂಡರು.
ಮೊದಲು ಕನ್ನಡಿಗರಾಗಿ
ಕನ್ನಡ ಭಾಷೆ ಉಳಿಸಿ, ಬೆಳೆಸಲು ಮೊದಲು ಕನ್ನಡಿಗರಾಗಿ, ಕನ್ನಡೇತರರಿಗೆ ಕನ್ನಡ ಕಲಿಸಲು ಪ್ರಯತ್ನಿಸುವ ಮೂಲಕ ಕನ್ನಡ ವಾತಾವರಣ ನಿರ್ಮಿಸಿ ಎಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಕರೆ ನೀಡಿದರು.
ಕರ್ನಾಟಕ ರಾಜ್ಯ ಏಕೀಕರಣಗೊಂಡು 68 ವರ್ಷಗಳು ಕಳೆದಿವೆ, 1953ರಲ್ಲಿ ಫಜಲ್ ಅಲಿ ಅಧ್ಯಕ್ಷತೆಯಲ್ಲಿ ರಾಜ್ಯ ಪುನರ್ವಿಂಗಡಣಾ ಆಯೋಗ ರಚನೆಯಾಯಿತು, ಆಯೋಗದ ವರದಿ ಆಧರಿಸಿ ರಾಜ್ಯಗಳನ್ನು ಭಾಷಾವಾರು ವಿಂಗಡಣೆ ಮಾಡಲಾಯಿತು,1956ರ ನವೆಂಬರ್ 1 ರಂದು ರಾಜ್ಯ ಏಕೀಕರಣಗೊಂಡು ಮೈಸೂರು ರಾಜ್ಯ ಉದಯವಾಯಿತು.
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಆಡಳಿತಾವಧಿಯಲ್ಲಿ 1973ರ ನವೆಂಬರ್ 1 ರಂದು ಮೈಸೂರು ರಾಜ್ಯ, ಕರ್ನಾಟಕವೆಂದು ಮರುನಾಮಕರಣಗೊಂಡಿತು.
ಬಿಜೆಪಿ ಸರ್ಕಾರ ಸಂಭ್ರಮಿಸಲಿಲ್ಲ
ಕರ್ನಾಟಕ ಹೆಸರು ನಾಮಕರಣಗೊಂಡು 50 ವರ್ಷಗಳು ಸಂದಿವೆ, ಈ ಸುವರ್ಣ ಸಂಭ್ರಮವನ್ನು ಬಿಜೆಪಿ ಸರ್ಕಾರ ಸಂಭ್ರಮಿಸಲಿಲ್ಲ, ಆದರೆ 2023ರ ನವೆಂಬರ್ 1 ರಂದು 51ನೇ ವರ್ಷ ಎಂದು ಕರ್ನಾಟಕ ನಾಮಕರಣಗೊಂಡ ದಿನವೆಂದು ವರ್ಷಪೂರ್ತಿ ಆಚರಿಸಲು ನಿರ್ಧರಿಸಲಾಯಿತು.
ಕನ್ನಡ ನಾಡು, ನುಡಿ, ನೆಲ, ಜಲದ ಮಹತ್ವ ಪ್ರಚುರಪಡಿಸಲು ‘ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ’ ಎಂಬ ಘೋಷವಾಕ್ಯದಡಿ ಇಡೀ ವರ್ಷ ಕನ್ನಡ ಭಾಷಾಭಿಮಾನವನ್ನು ಸಂಭ್ರಮಿಸಲಾಯಿತು.
ಮಾತೃಭಾಷೆ ಕನ್ನಡವನ್ನು ವ್ಯವಹಾರಿಕವಾಗಿ ಬಳಸುವುದರ ಜೊತೆಗೆ, ಇತರರೊಂದಿಗೂ ಕನ್ನಡದಲ್ಲಿಯೇ ಮಾತನಾಡುವಂತೆ ಶಪಥ ಮಾಡಬೇಕು, ಕನ್ನಡೇತರರಿಗೆ ಕನ್ನಡ ಕಲಿಸಲು ಪ್ರಯತ್ನಿಸಬೇಕು, ಕನ್ನಡ ರಾಜ್ಯದ ಅನ್ನ, ನೀರು, ಗಾಳಿ ಸೇವಿಸಿದ ಮೇಲೆ, ಯಾವುದೇ ಜಾತಿ, ಧರ್ಮ, ಭಾಷೆಯವರಾದರೂ ಇಲ್ಲಿ ವಾಸಿಸುವವರು ಕನ್ನಡಿಗರೇ ಆಗುತ್ತಾರೆ.
ಭಾಷೆ ಬಲಿಕೊಟ್ಟು ಉದಾರಿಗಳಾಗಬೇಡಿ
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ, ಕನ್ನಡ ಬಹಳ ಪ್ರಾಚೀನ ಭಾಷೆಯಾಗಿದೆ, ಆದ್ದರಿಂದಲೇ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆತಿದೆ, ಭಾಷೆ ಬಲಿಕೊಟ್ಟು ಉದಾರಿಗಳಾಗಬಾರದು, ಭಾಷೆ ಬಗ್ಗೆ ದುರಾಭಿಮಾನ ಬೆಳೆಸಿಕೊಳ್ಳದೇ, ಅಭಿಮಾನಗಳಾಗಬೇಕು.
ಕನ್ನಡ ಭಾಷೆ ಉಳಿಸಿ, ಬೆಳೆಸಲು ಮೊದಲು ಕನ್ನಡಿಗರಾಗಿ, ಬೇರೆ ಭಾಷೆ ಕಲಿಯಬೇಡಿ ಎನ್ನುತ್ತಿಲ್ಲ, ಬೇರೆ ಭಾಷಾ ಸಂಪತ್ತನ್ನೂ ಬೆಳೆಸಿಕೊಳ್ಳಿ, ಆದರೆ ಕನ್ನಡದಲ್ಲಿ ಮಾತನಾಡುವುದನ್ನು ಮರೆಯಬೇಡಿ, ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಉತ್ತಮ ಎಂದು ಮಹಾತ್ಮಾ ಗಾಂಧಿ ಹೇಳಿದ್ದಾರೆ.
ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ
ಇಂದು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ, ಕನ್ನಡಿಗರನ್ನು ಹಿಯ್ಯಾಳಿಸುವ ಪ್ರವೃತ್ತಿ ಕಂಡುಬರುತ್ತಿದೆ, ಇದು ನಾಡದ್ರೋಹವೆಂದು ಪರಿಗಣಿಸಿ, ಅಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ 57 ಲಕ್ಷ ಶಾಲಾ ಮಕ್ಕಳಿಗೆ ವಾರದ ಆರು ದಿನವೂ ಮೊಟ್ಟೆ ಹಾಗೂ ಚಿಕ್ಕಿ ನೀಡಲಾಗುತ್ತಿದೆ, ಮಕ್ಕಳಿಗೆ ಹಾಲಿನ ಜೊತೆ ಸಾಯಿ ಅನ್ನಪೂರ್ಣ ಸಂಸ್ಥೆ ಸಹಯೋಗದೊಂದಿಗೆ ರಾಗಿಮಾಲ್ಟ್ ಸಹಾ ನೀಡಲಾಗುತ್ತಿದೆ, ಬಡವರ ಮಕ್ಕಳು ಅಪೌಷ್ಠಿಕತೆಯಿಂದ ಬಳಲಬಾರದು, ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುದು ಸರ್ಕಾರದ ಉದ್ದೇಶ ಎಂದರು.
ಈ ಸಂದರ್ಭದಲ್ಲಿ ಕನ್ನಡ ದೀವಿಗೆ ಪುಸ್ತಕ ಬಿಡುಗಡೆ ಮಾಡಿದರು.