ಸಂಪುಟದಿಂದ ಸಚಿವ ಜಮೀರ್ ಅಹಮದ್ ವಜಾಕ್ಕೆ ಆಗ್ರಹ
ಬೆಂಗಳೂರು:ರೈತರು ಹಾಗೂ ನಾಗರಿಕರ ಜಮೀನುಗಳನ್ನು ವಕ್ಫ್ ಬೋರ್ಡ್‌ಗೆ ಹಸ್ತಾಂತರ ಮಾಡುವ ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಯತ್ನ ಖಂಡನೀಯ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಇಂದಿಲ್ಲಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ಹೆಸರಿನಲ್ಲಿ ನೋಟಿಸ್ ನೀಡುವ ಹಾಗೂ ಪಹಣಿ ಮಾಡಿಕೊಡುವ ಮೂಲಕ ಜನರ ಮತ್ತು ರೈತರ ಆಸ್ತಿ ಹಕ್ಕು ಮೊಟಕುಗೊಳಿಸುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ.
ಜಮೀರ್ ಅಹಮದ್ ಅಧಿಕಾರ ದುರ್ಬಳಕೆ
ವಕ್ಫ್ ಆಸ್ತಿ ಎಂಬ ಗೆಜೆಟ್ ಪ್ರಕಟಣೆಯನ್ನೇ ರದ್ದು ಮಾಡಬೇಕು, ಅಧಿಕಾರ ದುರ್ಬಳಕೆ ಮಾಡುತ್ತಿರುವ ಸಚಿವ ಜಮೀರ್ ಅಹಮದ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದರು.
ಸಾರ್ವಜನಿಕರ ಆಸ್ತಿ ವಕ್ಫ್ ಬೋರ್ಡ್ ಹೆಸರಿಗೆ ಮಾಡುತ್ತಿರುವ ವಿರುದ್ಧ ರಾಜ್ಯಾದ್ಯಂತ ನವೆಂಬರ್ 4ರಂದು ಬಿಜೆಪಿ ಹೋರಾಟ ನಡೆಸಲಿದೆ, ಎಲ್ಲೆಲ್ಲಿ ಪಹಣಿಯಲ್ಲಿ ವಕ್ಫ್ ಹೆಸರು ಘೋಷಿಸಲಾಗಿದೆಯೋ, ಅವೆಲ್ಲವನ್ನೂ ಸಂಪೂರ್ಣ ಹಿಂಪಡೆಯಬೇಕು, ಕೇವಲ ನೋಟಿಸ್ ಹಿಂಪಡೆದರೆ ಸಾಲದು ಎಂದು ಎಚ್ಚರಿಸಿದರು.
ರೈತರ ಜಮೀನು ಕಬಳಿಕೆ
ವಿಜಯಪುರ ಜಿಲ್ಲೆಯಲ್ಲಿ ರೈತರ ಹೆಸರಿನಲ್ಲಿದ್ದ ಪಹಣಿಗಳನ್ನು ವಕ್ಫ್ ಬೋರ್ಡ್ ಹೆಸರಿಗೆ ಬದಲಿಸಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮತ್ತು ಬೆಂಬಲ ಇದೆ ಎಂದ ಮಾತ್ರಕ್ಕೆ ಬಹುಸಂಖ್ಯಾತರು ಮತ್ತು ರೈತರ ಜಮೀನುಗಳನ್ನು ಕಬಳಿಸಲಾಗುತ್ತಿದೆ, ಅದಾಲತ್ ಮೂಲಕ ವಕ್ಫ್ ಆಸ್ತಿ ಎಂದು ಘೋಷಿಸಲು ಜಮೀರ್ ಹೊರಟಿದ್ದಾರೆ ಎಂದು ದೂರಿದರು.
ಗ್ಯಾರಂಟಿ ಯೋಜನೆಗಳನ್ನು ನೇರವಾಗಿ ಹಿಂಪಡೆಯುವ ಬದಲು ರಾಜ್ಯ ಸರ್ಕಾರ ಬಡಜನರ ಬಿಪಿಎಲ್ ಕಾರ್ಡ್‌ಗಳನ್ನು ಹಿಂಪಡೆಯುತ್ತಿದೆ, ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುತ್ತಿದೆ, ಶಕ್ತಿ ಯೋಜನೆ ಹಿಂಪಡೆಯುವುದಾಗಿ ಉಪಮುಖ್ಯಮಂತ್ರಿ ಹೇಳಿದ್ದರೆ, ಅದಕ್ಕೆ ವಿರುದ್ಧವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ, ಸರ್ಕಾರದಲ್ಲೇ ಗೊಂದಲಗಳಿವೆ ಎಂದು ಟೀಕಿಸಿದರು.