ರಾಜ್ಯ ಬಿಜೆಪಿಯ ವಿಜಯೇಂದ್ರ ವಿರೋಧಿ ಪಡೆಯ ನಾಯಕರು ಕಳೆದ ವಾರ ಬೆಂಗಳೂರಿನಲ್ಲಿ ರಹಸ್ಯ ಸಭೆ ನಡೆಸಿದ್ದಾರೆ, ಉಪಚುನಾವಣೆಯ ಕಣದಿಂದ ತಮ್ಮನ್ನು ದೂರ ಇಟ್ಟಿರುವ ಬಗ್ಗೆ ಈ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ, ಉಪಚುನಾವಣೆ ಮುಗಿದ ನಂತರ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪುನಃ ಹೋರಾಟ ಪ್ರಾರಂಭಿಸುವ ಒನ್‌ಲೈನ್ ಅಜೆಂಡಾ ಪಾಸು ಮಾಡಿದ್ದಾರೆ.
ಅಂದಹಾಗೆ, ಉಪಚುನಾವಣೆಗಳ ಮೇಲೆ ಪ್ರತಿಕೂಲ ಪರಿಣಾಮವಾಗಬಾರದು, ಹೀಗಾಗಿ ಅಪಸ್ವರ ಎತ್ತದೆ ಮೌನವಾಗಿರಿ, ಅಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಈ ಪಡೆಯ ಪ್ರಮುಖರಿಗೆ ಸೂಚಿಸಿದ್ದು ರಹಸ್ಯವೇನಲ್ಲ.
ಯಾವಾಗ ನಡ್ಡಾ ಅವರು ಈ ಸೂಚನೆ ನೀಡಿದರೋ, ಇದಾದ ನಂತರ ವಿಜಯೇಂದ್ರ ವಿರೋಧಿ ಪಡೆಯ ಪ್ರಮುಖರಾದ ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಮತ್ತಿತರರು ಮೌನಕ್ಕೆ ಜಾರಿದ್ದರು.
ಆದರೆ ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಯಿತಲ್ಲ, ಇದಾದ ನಂತರ ಪಕ್ಷದ ರಣತಂತ್ರ ರೂಪಿಸಲು ಮುಂದಾದ ವಿಜಯೇಂದ್ರ ಅವರು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಈ ಪಡೆಯ ಪ್ರಮುಖ ನಾಯಕರನ್ನು ಖುಲ್ಲಂ ಖುಲ್ಲಾ ದೂರವಿಟ್ಟಿದ್ದಾರೆ.
ಹೀಗೆ ತಮ್ಮನ್ನು ಉಪಚುನಾವಣೆಯ ಕಣದಿಂದ ದೂರವಿಟ್ಟ ಬೆಳವಣಿಗೆ ಸಹಜವಾಗಿಯೇ ವಿಜಯೇಂದ್ರ ವಿರೋಧಿ ಪಡೆಯ ಆಕ್ರೋಶಕ್ಕೆ ಕಾರಣವಾಗಿದೆ.
ಹೀಗಾಗಿಯೇ ಕಳೆದ ವಾರ ಬೆಂಗಳೂರಿನ ಹೋಟೆಲ್ ಒಂದರಲ್ಲಿ ರಹಸ್ಯ ಸಭೆ ನಡೆಸಿದ ಈ ಪಡೆ, ವಿಜಯೇಂದ್ರ ಹಟಾವೋ ಹೋರಾಟಕ್ಕೆ ಮರುಚಾಲನೆ ನೀಡಲು ತೀರ್ಮಾನಿಸಿದೆ.
ಈ ಪಡೆಯ ಪ್ರಕಾರ, ಡಿಸೆಂಬರ್ ಹೊತ್ತಿಗೆ ವಿಜಯೇಂದ್ರ ಪದಚ್ಯುತಿ ಆಗುವುದು ನಿಶ್ಚಿತ, ಕಾರಣ, ಈಗ ನಡೆಯುತ್ತಿರುವ ಉಪಚುನಾವಣೆಯ ಕಣದಲ್ಲಿ ವಿಜಯೇಂದ್ರ ರಣತಂತ್ರ ಯಾವ ಕ್ಷೇತ್ರದಲ್ಲೂ ವರ್ಕ್‌ಔಟ್ ಆಗುವುದಿಲ್ಲ.
ಸಂಡೂರು ವಿಧಾನಸಭಾ ಕ್ಷೇತ್ರದ ವಿಷಯಕ್ಕೆ ಬಂದರೆ ಬಿಜೆಪಿಯ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಸರಳವಾಗಿಲ್ಲ, ಕ್ಷೇತ್ರದಲ್ಲಿರುವ ಲಿಂಗಾಯತ, ವಾಲ್ಮೀಕಿ, ದಲಿತ ಸಮುದಾಯದ ಎಡಗೈ ಮತಗಳನ್ನು ಕನ್‌ಸಾಲಿಡೇಟ್ ಮಾಡಿದರೆ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು ಗೆಲುವು ಸಾಧಿಸಬಹುದು ಅಂತ ವಿಜಯೇಂದ್ರ ಪಡೆ ಲೆಕ್ಕ ಹಾಕಿದೆ, ಆದರೆ, ಅವರು ಅಂದುಕೊಂಡಂತೆ ಲಿಂಗಾಯತ, ವಾಲ್ಮೀಕಿ ಮತಗಳು ಕನ್‌ಸಾಲಿಡೇಟ್ ಆಗುವುದು ಕಷ್ಟ, ಯಾಕೆಂದರೆ ಕ್ಷೇತ್ರದ ಗಣನೀಯ ಲಿಂಗಾಯತ ಮತಗಳು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪರವಾಗಿವೆ, ಇದೇ ರೀತಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಅಸಮಾಧಾನ ವಾಲ್ಮೀಕಿ ಮತಗಳು ಕನ್‌ಸಾಲಿಡೇಟ್ ಆಗಲು ಬಿಡುವುದಿಲ್ಲ.
ವಸ್ತುಸ್ಥಿತಿ ಎಂದರೆ, ಸಂಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ತಮ್ಮ ಆಪ್ತರಾದ ದೇವೇಂದ್ರಪ್ಪ ಅವರಿಗೆ ಸಿಗಲಿ ಅಂತ ರಾಮುಲು ಬಯಸಿದ್ದರು, ಆದರೆ ಜನಾರ್ಧನ ರೆಡ್ಡಿ ಆಪ್ತ ಬಂಗಾರು ಹನುಮಂತು ಅವರಿಗೆ ಟಿಕೆಟ್ ಸಿಕ್ಕಿರುವುದು ರಾಮುಲು ಅಸಮಾಧಾನಕ್ಕೆ ಕಾರಣವಾಗಿದೆ.
ಹೀಗಾಗಿ ವಿಜಯೇಂದ್ರ ಪಡೆಯ ಲೆಕ್ಕಾಚಾರ ಏನೇ ಇದ್ದರೂ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಗೆಲ್ಲುವುದು ನಿಶ್ಚಿತ ಎಂಬುದು ಈ ವಿರೋಧಿ ಪಡೆಯ ಲೆಕ್ಕಾಚಾರ.
ಇದೇ ರೀತಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ವಿಷಯಕ್ಕೆ ಬಂದರೆ ಅಲ್ಲಿ ಪಕ್ಷದ ಕ್ಯಾಂಡಿಡೇಟ್ ಭರತ್ ಬೊಮ್ಮಾಯಿ ಗೆಲ್ಲುವ ಲಕ್ಷಣಗಳಿವೆ, ಹಾಗಂತ ಅವರ ಗೆಲುವು ಸುಲಭ ಅಂತೇನಲ್ಲ.
ಕಾಂಗ್ರೆಸ್ ಪಕ್ಷದ ಟಿಕೆಟ್ ಮುಸ್ಲಿಮರಿಗೆ ಸಿಕ್ಕಿರುವುದರಿಂದ ಹಿಂದೂ ವರ್ಸಸ್ ಮುಸ್ಲಿಂ ನೆಲೆಯಲ್ಲಿ ಕ್ಷೇತ್ರದ ಮತಬ್ಯಾಂಕ್ ವಿಭಜನೆ ಆಗುತ್ತದೆ ಎಂಬುದು ಒಂದು ಲೆಕ್ಕಾಚಾರ.
ಈ ಲೆಕ್ಕಾಚಾರದ ಮತ್ತೊಂದು ಭಾಗವೆಂದರೆ ಕಾಂಗ್ರೆಸ್ ಟಿಕೆಟ್ ತಮ್ಮ ಸಮುದಾಯಕ್ಕೆ ಸಿಗದೇ ಇರುವುದರಿಂದ ಅಲ್ಲಿರುವ ಪಂಚಮಸಾಲಿ ಲಿಂಗಾಯತ ನಾಯಕರು ತಿರುಗಿ ಬಿದ್ದಿದ್ದಾರೆ, ಇದೇ ರೀತಿ ಟಿಕೆಟ್ ತಮ್ಮ ಕೈ ತಪ್ಪಿ ಸೈಯ್ಯದ್ ಯಾಸ್ಮೀನ್ ಖಾನ್ ಪಠಾಣ್ ಅವರ ಕೈ ಸೇರಿರುವುದರಿಂದ ಅಜ್ಜಂಪುರ್ ಖಾದ್ರಿ ಮುನಿಸಿಕೊಂಡಿದ್ದಾರೆ ಎಂಬುದು.
ಹೀಗಾಗಿ ಇಂತಹ ಅಂಶಗಳೆಲ್ಲ ಸೇರಿ ಭರತ್ ಬೊಮ್ಮಾಯಿ ಗೆಲ್ಲಬಹುದು, ಆದರೆ ಇದಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾತ್ರ ನಿರ್ಣಾಯಕವೇ ಹೊರತು ವಿಜಯೇಂದ್ರ ಅವರದಲ್ಲ.
ಇನ್ನು ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ವರ್ಸಸ್ ಜೆಡಿಎಸ್ ನಡುವಣ ಪೈಪೋಟಿಯಲ್ಲಿ ವಿಜಯೇಂದ್ರ ಪಾತ್ರ ನಗಣ್ಯ, ಅಲ್ಲೇನಿದ್ದರೂ ದೇವೇಗೌಡ-ಕುಮಾರಸ್ವಾಮಿ ಅವರ ರಣತಂತ್ರ ವರ್ಕ್‌ಔಟ್ ಆಗಬೇಕು, ಇಲ್ಲವೇ ಡಿಸಿಎಂ ಡಿಕೆಶಿ ಮತ್ತು ಯೋಗೇಶ್ವರ್ ಅವರ ರಣತಂತ್ರ ವರ್ಕ್‌ಔಟ್ ಆಗಬೇಕು, ಅರ್ಥಾತ್, ಚನ್ನಪಟ್ಟಣದ ಸೋಲು-ಗೆಲುವಿನಲ್ಲಿ ವಿಜಯೇಂದ್ರ ಪಾತ್ರ ನಿರ್ಣಾಯಕವಲ್ಲ.
ಹೀಗೆ ಉಪಚುನಾವಣೆಯ ಕಣದಲ್ಲಿ ವಿಜಯೇಂದ್ರ ಪವರ್ರು ಏನು ಅನ್ನುವುದಕ್ಕಿಂತ ಅವರಿಗೆ ಪವರ್ ಇಲ್ಲ ಎಂಬುದೇ ಮುಖ್ಯವಾಗಿ ಕಾಣಿಸುತ್ತದೆ.
ಅಲ್ಲಿಗೆ ಅವರನ್ನು ಪದಚ್ಯುತಗೊಳಿಸುವ ಆಟಕ್ಕೆ ಸುಲಭವಾಗಿ ಖದರ್ ಬರುತ್ತದೆ ಎಂಬುದು ವಿರೋಧಿ ಪಡೆಯ ಲೆಕ್ಕಾಚಾರ.
ಪವರ್ ಫುಲ್ ಆಗುತ್ತಾರಾ ಸಂತೋಷ್ ?
ಇನ್ನು ವಿಜಯೇಂದ್ರ ಅವರ ವಿರುದ್ಧ ಹೋರಾಡಲು ವಿರೋಧಿ ಪಡೆ ತೀರ್ಮಾನಿಸಿದ ಬೆನ್ನಲ್ಲೇ, ಈ ಪಡೆಯ ಪ್ರಮುಖ ಬಸವನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ವಿಜಯೇಂದ್ರ ಅವರ ವಿರುದ್ಧ ಮುಗಿಬಿದ್ದಿದ್ದಾರೆ.
ಹೀಗೆ ಉಪಚುನಾವಣೆಗೂ ಮುನ್ನ ವರಿಷ್ಟರ ಮಾತನ್ನು ಉಲ್ಲಂಘಿಸಿ ಯತ್ನಾಳ್ ದಾಳಿ ಆರಂಭಿಸಿದ್ದರೂ ಉಳಿದ ನಾಯಕರು ಈಗಲೇ ಟಫ್ ಆಗಲು ಬಯಸುತ್ತಿಲ್ಲ.
ಬದಲಿಗೆ, ಮುಂದಿನ ದಿನಗಳಲ್ಲಿ ವಿಜಯೇಂದ್ರ ಹಟಾವೋ ಯೋಜನೆಗೆ ಬಲ ತುಂಬುವ ಬೆಳವಣಿಗೆ ದಿಲ್ಲಿಯಲ್ಲಿ ನಡೆಯಬಹುದು ಎಂದು ನಿರೀಕ್ಷಿಸುತ್ತಿದ್ದಾರೆ.
ಅರ್ಥಾತ್, ಡಿಸೆಂಬರ್ ತಿಂಗಳಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರು ಬರಲಿದ್ದಾರೆ, ಹಾಲಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಕೆಳಗಿಳಿಸುವ ಸಲುವಾಗಿಯೇ ಲೋಕಸಭಾ ಚುನಾವಣೆಯ ನಂತರ ಅವರನ್ನು ಕೇಂದ್ರ ಮಂತ್ರಿಮಂಡಲಕ್ಕೆ ತೆಗೆದುಕೊಳ್ಳಲಾಗಿತ್ತು.
ಆದರೆ, ರಾಷ್ಟ್ರ ರಾಜಕಾರಣದ ಹಲವು ಗೋಜಲುಗಳ ನಡುವೆ ನಡ್ಡಾ ಅವರನ್ನು ತಕ್ಷಣ ಬದಲಿಸುವ ಬದಲು ತಾತ್ಕಾಲಿಕವಾಗಿ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಸಲು ಮೋದಿ-ಅಮಿತ್ ಷಾ ಜೋಡಿ ನಿರ್ಧರಿಸಿತ್ತು.
ಅದರ ಪ್ರಕಾರ, ಡಿಸೆಂಬರ್ ಹೊತ್ತಿಗೆ ಪಕ್ಷಕ್ಕೆ ಹೊಸ ಅಧ್ಯಕ್ಷರು ಬರಬೇಕಿದೆ, ಬಿಜೆಪಿ ಮೂಲಗಳ ಪ್ರಕಾರ ಈ ಹುದ್ದೆಗೆ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್ ಮತ್ತು ಮಹಾರಾಷ್ಟ್ರದ ವಿನೋದ್ ಥಾವಡೆ ಹೆಸರುಗಳು ರೇಸಿನಲ್ಲಿವೆ.
ಆದರೆ ಈ ಮೂವರ ಜತೆ ಇನ್ನೊಂದು ಅಚ್ಚರಿಯ ಹೆಸರು ರೇಸಿನಲ್ಲಿ ಕಾಣಿಸಿಕೊಳ್ಳಲಿದೆ ಎಂಬ ಮಾತು ದಿಲ್ಲಿ ವಲಯಗಳಲ್ಲಿ ಕೇಳಿ ಬರುತ್ತಿದೆ, ಈ ಹೆಸರು ಬೇರೆ ಯಾರದೂ ಅಲ್ಲ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರದು.
ಕರ್ನಾಟಕದ ವಿಧಾನಸಭೆ ಚುನಾವಣೆಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಸಂತೋಷ್ ಬಗ್ಗೆ ಬೇಸತ್ತಿದ್ದಾರೆ ಎಂಬ ಮಾತುಗಳು ಇವೆಯಾದರೂ ನಂಬರ್ ಟೂ, ಅಮಿತ್ ಷಾ ಈಗಲೂ ಸಂತೋಷ್ ಆಪ್ತರು.
ಹೀಗಾಗಿ ಆರೆಸ್ಸೆಸ್ ವರಿಷ್ಟರನ್ನು ಮೆಚ್ಚಿಸಿದಂತೆಯೂ ಆಗುತ್ತದೆ ಮತ್ತು ಆ ಮೂಲಕ ಸಂಘ ಪರಿವಾರದ ವ್ಯಕ್ತಿಯೊಬ್ಬರಿಗೆ ಪ್ರಾಮಿನೆನ್ಸು ನೀಡಿದ ಹಾಗೂ ಆಗುತ್ತದೆ ಎಂಬ ಕಾರಣಕ್ಕೆ ಸಂತೋಷ್ ಅವರ ಹೆಸರನ್ನು ಅಮಿತ್ ಷಾ ಮುಂದೆ ತರುತ್ತಾರೆ ಎಂಬುದು ಕೆಲವರ ಮಾತು.
ಈ ಹಿನ್ನೆಲೆಯಲ್ಲಿ ವಿಜಯೇಂದ್ರ ವಿರೋಧಿ ಪಡೆ ಆ ಬೆಳವಣಿಗೆಯನ್ನು ಕುತೂಹಲದಿಂದ ನೋಡುತ್ತಿದೆ.
ನಿಖಿಲ್ ಸ್ಪರ್ಧೆಗೆ ಇವರದೇ ಒತ್ತಾಸೆ
ಈ ಮಧ್ಯೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಣ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದ್ದರೆ, ಮತ್ತೊಂದೆಡೆಯಿಂದ ಒಂದಷ್ಟು ಕುತೂಹಲಕಾರಿ ಮಾಹಿತಿಗಳು ಹೊರಬೀಳುತ್ತಿವೆ.
ಅದರ ಪ್ರಕಾರ, ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಲು ಮಾಜಿ ಸಿಎಂ ಯಡಿಯೂರಪ್ಪ ಅವರೇ ಕಾರಣ.
ಒಂದು ಹಂತದಲ್ಲಿ ಸಿ.ಪಿ.ಯೋಗೀಶ್ವರ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಕಾರ ಸೂಚಿಸಿದರಲ್ಲ, ಈ ಹಂತದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ಕುಮಾರಸ್ವಾಮಿ ಅವರ ಜತೆ ಮಾತನಾಡಿ ಕೇಸು ಸೆಟ್ಲ್ ಮಾಡಿದ್ದರಂತೆ.
ಅದರನುಸಾರ, ಸಿ.ಪಿ.ಯೋಗೇಶ್ವರ್ ಅವರು ಬಿಜೆಪಿ ವತಿಯಿಂದಲೇ ಸ್ಪರ್ಧಿಸಲಿ ಅಂತ ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದರು.
ಎಷ್ಟೇ ಆದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ತಮ್ಮ ಬಗ್ಗೆ ಅಭಿಮಾನ ತೋರಿಸುತ್ತಾರೆ, ಹೀಗಿರುವಾಗ ಒಂದು ಟಿಕೆಟ್ಟಿಗಾಗಿ ಅಷ್ಟೇಕೆ ಪಟ್ಟು ಹಿಡಿಯಬೇಕು ಅಂತ ಯೋಚಿಸಿದ ಕುಮಾರಸ್ವಾಮಿ, ’ಆಗ್ಲಿ, ಯೋಗೇಶ್ವರ್ ಬಿಜೆಪಿಯಲ್ಲಿದ್ದೇ ಎನ್.ಡಿ.ಎ. ಅಭ್ಯರ್ಥಿ ಆಗ್ಲಿ’ ಅಂತ ಹೇಳಿದ್ದರು.
ಆದರೆ ಕುಮಾರಸ್ವಾಮಿ ಇಷ್ಟು ಹೇಳುವ ಹೊತ್ತಿಗಾಗಲೇ ಕಾಂಗ್ರೆಸ್ ಜತೆ ಸೆಟ್ಲಾಗಿದ್ದ ಯೋಗೇಶ್ವರ್ ಇದಕ್ಕೆ ಒಪ್ಪಿಲ್ಲ.
ಯಾವಾಗ ಈ ಕಿರಿಕಿರಿ ನಡೆಯುತ್ತಿತ್ತೋ, ಆಗ ಕುಮಾರಸ್ವಾಮಿ ಅವರಿಗೆ ಫೋನು ಮಾಡಿದ ಬಿಜೆಪಿ ನಾಯಕ, ಮಾಜಿ ಸಿಎಂ ಯಡಿಯೂರಪ್ಪ ಅವರು, ಯಾವ ಕಾರಣಕ್ಕೂ ಯೋಗೇಶ್ವರ್‌ಗೆ ಟಿಕೆಟ್ಟು ಕೊಡುವುದು ಬೇಡ, ಬೇಕಿದ್ದರೆ ಅವರು ಕಾಂಗ್ರೆಸ್‌ಗೆ ಹೋಗಲಿ, ನಾವು ಎನ್.ಡಿ.ಎ. ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸೋಣ, ಯಾವ ಕಾರಣಕ್ಕೂ ನಿಖಿಲ್ ಅವರನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ಕೊಡುವುದು ಬೇಡ ಎಂದಿದ್ದಾರೆ.
ಯಾವಾಗ ಯಡಿಯೂರಪ್ಪನವರೇ ಫೋನು ಮಾಡಿ ಈ ವಿಷಯ ಹೇಳಿದರೋ, ಆಗ ಕುಮಾರಸ್ವಾಮಿ ಮತ್ತು ದೇವೇಗೌಡರು ಹೆಚ್ಚು ಚರ್ಚಿಸದೆ ನಿಖಿಲ್ ಸ್ಪರ್ಧೆಗೆ ಯಸ್ ಎಂದಿದ್ದಾರೆ.
ಅಂದಹಾಗೆ, ಚನ್ನಪಟ್ಟಣದಲ್ಲಿ ನಿಖಿಲ್ ಕಣಕ್ಕಿಳಿಯಲು ಒತ್ತಾಸೆ ನೀಡಿದ ಯಡಿಯೂರಪ್ಪ ನವೆಂಬರ್ ಎಂಟರ ನಂತರ ಚನ್ನಪಟ್ಟಣದ ರಣಾಂಗಣಕ್ಕೆ ಖುದ್ದಾಗಿ ಇಳಿಯಲು ನಿರ್ಧರಿಸಿದ್ದಾರೆ.
ಮೂಲಗಳ ಪ್ರಕಾರ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆಲ್ಲುವುದು ಯಡಿಯೂರಪ್ಪ ಅವರಿಗೆ ಬೇಕಿಲ್ಲ, ಹೀಗಾಗಿ ನಿಖಿಲ್ ಗೆಲುವಿಗಾಗಿ ತಾವೇ ಖುದ್ದಾಗಿ ಫೀಲ್ಡಿಗೆ ಇಳಿಯಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.
ಸಿದ್ದು ಲೇಟೆಸ್ಟ್ ತಲೆನೋವು
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೊಸ ತಲೆನೋವು ಶುರುವಾಗಿದೆಯಂತೆ.
ರಾಜ್ಯ ಮಾಹಿತಿ ಹಕ್ಕು ಆಯುಕ್ತರ ಹುದ್ದೆಗಳಿಗೆ ಎಂಟು ಮಂದಿಯನ್ನು ನೇಮಿಸುವುದೇ ಈ ತಲೆನೋವು.
ಅಂದಹಾಗೆ, ಕರ್ನಾಟಕದಲ್ಲಿ ಮುಖ್ಯ ಮಾಹಿತಿ ಹಕ್ಕು ಆಯುಕ್ತರ ಹುದ್ದೆ ಸೇರಿದಂತೆ ಒಟ್ಟು ಹನ್ನೊಂದು ಮಾಹಿತಿ ಹಕ್ಕು ಆಯುಕ್ತರ ಹುದ್ದೆಗಳಿವೆ.
ಈ ಪೈಕಿ ಖಾಲಿ ಇರುವ ಎಂಟು ಹುದ್ದೆಗಳಿಗೆ ನೇಮಕಾತಿ ಮಾಡಲು ಹಲವು ತಿಂಗಳ ಹಿಂದೆಯೇ ಸಿದ್ದರಾಮಯ್ಯ ಮುಂದಾಗಿದ್ದರು.
ಆದರೆ ಈ ಹುದ್ದೆಗಳಿಗೆ ತಮ್ಮವರನ್ನೇ ನೇಮಕ ಮಾಡುವಂತೆ ಬರುತ್ತಿರುವ ಒತ್ತಡಗಳನ್ನು ನೋಡಿ ಸಿಟ್ಟಿಗೆದ್ದ ಸಿದ್ದು, ಈಗಾಗಲೇ ಮೂರ್ನಾಲ್ಕು ಬಾರಿ ನೇಮಕಾತಿ ಸಂಬಂಧದ ಸಭೆಗಳನ್ನು ಮುಂದೂಡಿದ್ದಾರೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ಹೈಕಮಾಂಡ್‌ನ ಪ್ರಮುಖ ನಾಯಕರಾದ ಸುರ್ಜೇವಾಲ, ಜಗದೀಶ್ ಟೈಟ್ಲರ್ ಅವರಿಂದ ಹಿಡಿದು ಸಾಹಿತ್ಯ ಲೋಕದ ದಿಗ್ಗಜರವರೆಗೆ ಹಲವರು ಈ ಹುದ್ದೆಗಳಿಗೆ ತಮ್ಮ ಕ್ಯಾಂಡಿಡೇಟುಗಳನ್ನು ಸೂಚಿಸಿದ್ದಾರೆ.
ಪರಿಣಾಮ, ಮಾಹಿತಿ ಹಕ್ಕು ಆಯುಕ್ತರ ಹುದ್ದೆಗಳನ್ನು ಭರ್ತಿ ಮಾಡುವ ಬದಲು ಆ ಫೈಲನ್ನೇ ಎತ್ತಿಡಲು ಸಿದ್ದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆರ್.ಟಿ.ವಿಠ್ಠಲಮೂರ್ತಿ