ಹುಬ್ಬಳ್ಳಿ:ವಕ್ಫ್ ವಿವಾದ ಬಿಜೆಪಿ ಸೃಷ್ಟಿ, ನಮ್ಮ ಸರ್ಕಾರ ರೈತರನ್ನು ರಕ್ಷಿಸಲು ಬದ್ಧವಾಗಿದ್ದು, ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ತಿದ್ದುಪಡಿ ಮಸೂದೆ ಸಂಬಂಧ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಾಂಬಿಕ ಪಾಲ್ ಕರ್ನಾಟಕಕ್ಕೆ ಭೇಟಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವಿವಾದ ಸೃಷ್ಟಿಸಿದೆ, ಸಾರ್ವಜನಿಕರ ಆಸ್ತಿಗಳಲ್ಲಿ ವಕ್ಫ್ ಹೆಸರು ರಾಜ್ಯಕ್ಕೆ ಸಂಬಂಧಿಸಿದ ವಿಚಾರ, ಧಾರವಾಡ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವೇ ವಕ್ಫ್ ಹೆಸರಿನಲ್ಲಿ ನೋಟಿಸ್ ನೀಡಿದೆ, ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ, ಬಿಜೆಪಿಗೆ ಜನ ಶಾಂತಿಯುತವಾಗಿ ಬದುಕುವುದು ಬೇಕಿಲ್ಲ ಎಂದರು.
ಅನಗತ್ಯ ಗೊಂದಲ ಸೃಷ್ಟಿ
ಮಹಾರಾಷ್ಟ್ರ ಹಾಗೂ ರಾಜ್ಯದ ಉಪಚುನಾವಣೆ ಸಮಯದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ, ಜನ ಬುದ್ಧಿವಂತರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ, ನಾವು ದಾಖಲೆಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿ ರೈತರನ್ನು ರಕ್ಷಣೆ ಮಾಡುತ್ತೇವೆ, ಈ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದ ವಿಚಾರಕ್ಕೆ ಭೇಟಿ ನೀಡುವ ಅಧಿಕಾರ ಜೆಪಿಸಿಗಿಲ್ಲ, ಭೇಟಿ ನೀಡುವುದಾದರೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು, ಸಮಿತಿಯ ಪೂರ್ಣ ತಂಡ ಭೇಟಿ ನೀಡಬೇಕು, ಕೇವಲ ಸಮಿತಿ ಅಧ್ಯಕ್ಷರು ಬಂದಿದ್ದಾರೆಂದರೆ, ಪಕ್ಷದ ಕೆಲಸಕ್ಕಾಗಿ ಬಂದಿದ್ದಾರೆ.
ಜೆಪಿಸಿಗೆ ಅಧಿಕೃತ ಮಾನ್ಯತೆ ಇಲ್ಲ
ಸಂಸದರಾದ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಜೊತೆ ಬಂದಿದ್ದಾರೆ, ಇವರಿಬ್ಬರು ಜೆಪಿಸಿ ಸದಸ್ಯರಲ್ಲ, ಭೇಟಿ ನೀಡಿರುವವರು ಕೇವಲ ಬಿಜೆಪಿ ಸದಸ್ಯರು, ರಾಜಕೀಯ ಉದ್ದೇಶದಿಂದ ಭೇಟಿ ನೀಡುತ್ತಿದ್ದಾರೆ, ಸಮಿತಿಗೆ ಅಧಿಕೃತ ಮಾನ್ಯತೆ ಇಲ್ಲ, ಅವರು ಏನಾದರೂ ರಾಜಕೀಯ ಮಾಡಲಿ, ಸತ್ಯಾಂಶವೇ ಬೇರೆ ಎಂದರು.
ನಾನು ಆರ್.ಅಶೋಕ್ ವಿಚಾರ ಮಾತನಾಡಿಲ್ಲ, ಜಯನಗರ ಕ್ಷೇತ್ರದ ಅನುದಾನ ಕುರಿತಂತೆ ಸಂಸದ ಸೂರ್ಯ ಜೊತೆ ಚರ್ಚೆ ಮಾಡಿದ್ದೇನೆ, ಅಲ್ಲಿನ ಶಾಸಕರು, ನಾನು ಸಚಿವನಾದ ನಂತರ ಬೆಂಗಳೂರು ಸ್ಥಿತಿ ಅಧೋಗತಿಯಾಗಿದೆ ಎಂದಿದ್ದಾರೆ, ಬೆಂಗಳೂರು ಎಲ್ಲಿ ಅಧೋಗತಿಯಾಗಿದೆ ಎಂದು ಪ್ರಶ್ನಿಸಿದರು.
ಅಶೋಕ್ ಅವರು ಸಂವಿಧಾನಿಕ ಸಂಸ್ಥೆ ಲೋಕಾಯುಕ್ತದ ಬಗ್ಗೆ ಮ್ಯಾಚ್ ಫಿಕ್ಸಿಂಗ್ ಎಂದು ಹೇಳುವ ಮೂಲಕ ಅಪಮಾನ ಮಾಡಿದ್ದಾರೆ, ಎಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ನೀಡಿರುವ ಹೇಳಿಕೆ ಮ್ಯಾಚ್ ಫಿಕ್ಸಿಂಗಾ ಎಂದರು.