ಹುಬ್ಬಳ್ಳಿ: ರೈತ ಸಣ್ಣಪ್ಪ ಸಾವಿನ ವಿಷಯಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ಹಿನ್ನೆಲೆಯಲ್ಲಿ ಟ್ವೀಟ್ ಹಿಂಪಡೆದರೂ ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸರನ್ನು ಹೆದರಿಸಿ, ಬೆದರಿಸಿ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ರೈತನೊಬ್ಬ ತನ್ನ ಜಮೀನಿನ ಕಂದಾಯ ದಾಖಲೆಗಳಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಿಸಲಾಗಿದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಟ್ವೀಟ್ ಮಾಡಿದ್ದೆ, ನಂತರ ಪೋಲಿಸ್ ವರಿಷ್ಠಾಧಿಕಾರಿ ಸ್ಪಷ್ಟನೆ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ತಾವು ಟ್ವೀಟ್ ಡಿಲೀಟ್ ಮಾಡಿ ಘಟನೆಯ ಸೂಕ್ತ ತನಿಖೆ ಆಗಬೇಕೆಂದು ಹೇಳಿದ್ದರೂ, ತಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.
ಜನರ ಕ್ಷಮೆ ಕೇಳಬೇಕು
ತಾವು ಟ್ವೀಟ್ ಡಿಲೀಟ್ ಮಾಡಿದ ನಂತರವೂ, ಸಂಸದ ತೇಜಸ್ವಿ ಸೂರ್ಯ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿದೆ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮಾಡಲು ಏನು ಕೆಲಸ ಇಲ್ಲದೆ, ಇಂತಹ ವಿಚಾರಗಳನ್ನೇ ಕೆದಕಿ ಎಫ್‌ಐಆರ್ ದಾಖಲಾಗುವಂತೆ ಮಾಡುತ್ತಿದ್ದಾರೆ, ಇದಕ್ಕಾಗಿ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ವಕ್ಫ್ ತಿದ್ದುಪಡಿ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಂಬಿಕಾ ಪಾಲ್ ಅವರನ್ನು ಭೇಟಿ ಮಾಡಿದ ಹಾವೇರಿಯ ರೈತ ಕುಟುಂಬವೊಂದು ತಮ್ಮ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವ ಸಂಗತಿಯನ್ನು ಹೇಳಿಕೊಂಡಿದ್ದು, ಕನ್ನಡದ ಆನ್ಲೈನ್ ಸುದ್ದಿವಾಹಿನಿಯೊಂದು ಸುದ್ದಿಯನ್ನೂ ಬಿತ್ತರ ಮಾಡಿತ್ತು ಎಂದರು.