ಸಂಡೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೊಡ್ಡು ಬೆದರಿಕೆಗಳಿಗೆ ಬಗ್ಗುವುದೂ ಇಲ್ಲ, ಜಗ್ಗುವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಕಿಡಿ ಕಾರಿದ್ದಾರೆ.
ನನ್ನ ಆಡಳಿತಾವಧಿಯಲ್ಲಿ ಯಾವುದೇ ತಪ್ಪುಗಳು ನಡೆದಿಲ್ಲ, ಎಲ್ಲಾ ಕಾನೂನಾತ್ಮಕವಾಗಿಯೇ ಆಗಿದೆ, ಯಾವುದೇ ತನಿಖೆಗಳನ್ನಾದರೂ ನಡೆಸಲಿ.
ಹೆದರಿಸುವ ಪ್ರಯತ್ನ
ತಮ್ಮ ವಿರೋಧಿಗಳನ್ನು ಬಗ್ಗುಬಡಿಯಲು ತಮಗೆ ಬೇಕಾದಂತೆ ಆಯೋಗ ಮತ್ತು ತನಿಖಾ ಸಂಸ್ಥೆಗಳನ್ನು ನೇಮಕ ಮಾಡಿ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇದರಿಂದ ಅವರಿಗೂ ಲಾಭವಿಲ್ಲ, ಪ್ರಯೋಜನವೂ ಆಗುವುದಿಲ್ಲ, ನಮಗೂ ಕಾನೂನು ಮತ್ತು ನ್ಯಾಯಾಲಯ ಇದೆ, ಹೋರಾಟ ಮಾಡುತ್ತೇವೆ ಎಂದು ಗುಡುಗಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಅಧಿಕಾರದ ಬುಡ ಅಲ್ಲಾಡುತ್ತಿದೆ, ಭ್ರಷ್ಟಾಚಾರದ ಆರೋಪಗಳು ಅವರನ್ನು ಸುತ್ತುವರೆದಿವೆ, ಒಂದರ ಮೇಲೊಂದು ತನಿಖೆ ನಡೆಯುತ್ತಿದೆ, ಇದರಿಂದ ಹತಾಶರಾಗಿ ಇಂತಹ ತನಿಖೆಗಳನ್ನು ಮಾಡಿ ನಮ್ಮನ್ನು ಹೆದರಿಸಲು ಹೊರಟಿದ್ದಾರೆ.
ವಿರೋಧಿಗಳ ಮೇಲೆ ಸೇಡು
ಉಪಚುನಾವಣೆ ನಂತರ ಅಧಿಕಾರದಿಂದ ಕೆಳಗಿಳಿಯಬೇಕೆಂಬುದು ಮುಖ್ಯಮಂತ್ರಿ ಅವರಿಗೂ ಗೊತ್ತಿದೆ, ಹೀಗಾಗಿ ವಿರೋಧ ಪಕ್ಷಗಳ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ.
ಅವರು ಮಾಡಿರುವ ತಪ್ಪುಗಳು ನ್ಯಾಯಾಲಯ ಮತ್ತು ಜನರ ಕಣ್ಣ ಮುಂದೆ ಇವೆ, ಅದರಿಂದ ಮೊದಲು ಹೊರಬರಲಿ, ಹಳೆಯದನ್ನು ಕೆದಕಿ ವಿರೋಧಿಗಳನ್ನು ಕಟ್ಟಿಹಾಕುವ ಪ್ರಯತ್ನ ಫಲ ಕೊಡುವುದಿಲ್ಲ ಎಂದು ಕಿವಿಮಾತು ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವ ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡು ಎನ್‌ಡಿಎ ಮೈತ್ರಿಕೂಟ ಜಯಭೇರಿ ಬಾರಿಸಲಿದೆ.
ಇದರ ಮನವರಿಕೆ ಆಗುತ್ತಿದ್ದಂತೆ ಸಿದ್ದರಾಮಯ್ಯ, ತಾವೂ ಸೇರಿದಂತೆ ತಮ್ಮ ಪಕ್ಷದ ಶಾಸಕರು, ಮುಖಂಡರನ್ನು ಚುನಾವಣೆಗೆ ನಿಯೋಜಿಸಿ ಆಡಳಿತ ಸ್ತಬ್ಧವಾಗುವಂತೆ ಮಾಡಿದ್ದಾರೆ, ಸೋಲಿನ ಭೀತಿಯಿಂದ ವಿರೋಧಿಗಳನ್ನು ಕಟ್ಟಿಹಾಕುವ ಯತ್ನ ಮಾಡುತ್ತಿದ್ದಾರೆ ಎಂದರು.