ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ
ಬೆಂಗಳೂರು:ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರಿಗೆ ಶೇಕಡ 4ರಷ್ಟು ಮೀಸಲಾತಿ ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ.
ಮುಖ್ಯಮಂತ್ರಿ ಅವರ ಆದೇಶದ ಮೇರೆಗೆ ಅಕ್ಟೋಬರ್ 19ರಂದು ಸರ್ಕಾರ ಗುತ್ತಿಗೆ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದ ಪ್ರವರ್ಗ 2ಬಿಗೆ ಶೇಕಡ ೪ರಷ್ಟು ಮೀಸಲಾತಿ ಕಲ್ಪಿಸಲು ಕೆಟಿಪಿಪಿ ಕಾಯಿದೆ 1999ರ 6ನೇ ಪ್ರಕರಣಕ್ಕೆ ತಿದ್ದುಪಡಿಗೆ ಸೂಚಿಸಿದ್ದಾರೆ.
ಟೆಂಡರ್ ನೀಡಲು ಸೂಚನೆ
ಟೆಂಡರ್ ಆಹ್ವಾನ ಪ್ರಾಧಿಕಾರವು ಅಧಿಸೂಚಿತ ಇಲಾಖೆಗಳಲ್ಲಿ ನಿಯಮಿಸಿದ ಪ್ರಕ್ರಿಯೆಗಳನ್ನು ಅನುಸರಿಸುವ ಮೂಲಕ ಕೈಗೊಳ್ಳಬೇಕಾದ ಅಗತ್ಯ ನೋಟಿಸ್, ಪತ್ರ ವ್ಯವಹಾರಗಳು ಮತ್ತು ಪ್ರಕಟಣೆಗಳನ್ನು ಹೊರಡಿಸುವಾಗ ನಿರ್ಮಾಣ ಕಾಮಗಾರಿಗಳ ಮೌಲ್ಯ ಒಂದು ಕೋಟಿ ರೂ.ಗಳಿಗೆ ಮೀರದ ಒಟ್ಟು ಕಾಮಗಾರಿ ಸಂಖ್ಯೆಯ ಶೇಕಡ 4ರಷ್ಟನ್ನು ಪ್ರವರ್ಗ ೨ಬಿಯಲ್ಲಿ ನಿರ್ದಿಷ್ಟ ಪಡಿಸಿದ ಅಲ್ಪಸಂಖ್ಯಾತರ ಸಮಯದಾಯಕ್ಕೆ ಸೇರಿದ ಗುತ್ತಿಗೆದಾರರಿಗೆ ಮಾತ್ರ ಟೆಂಡರ್ ನೀಡತಕ್ಕದ್ದು.
ಅದು ಅಲ್ಲದೆ, ಮೀಸಲಾತಿ ಹೊರತುಪಡಿಸಿ, ಸಾರ್ವಜನಿಕ ಟೆಂಡರ್‌ಗಳಲ್ಲಿಯೂ ಅಲ್ಪಸಂಖ್ಯಾತ ಸಮುದಾಯ ಭಾಗವಹಿಸಿದಲ್ಲಿ, ಅಲ್ಲಿಯೂ ಅರ್ಹತೆ ಆಧಾರದ ಮೇಲೆ ಗುತ್ತಿಗೆ ನೀಡಬಹುದಾಗಿದೆ ಎಂದು ಸೂಚಿಸಲಾಗಿದೆ.
ಈ ಮೂಲಕ ಅಲ್ಪಸಂಖ್ಯಾತರು ಮೀಸಲಾತಿ ವರ್ಗದಲ್ಲಿ ಅಲ್ಲದೆ, ಸಾಮಾನ್ಯ ವರ್ಗದಲ್ಲಿಯೂ ಅರ್ಹತೆ ಮೇಲೆ ಟೆಂಡರ್‌ಗಳನ್ನು ಪಡೆಯಬಹುದಾಗಿದೆ.
ಎಸ್‌ಸಿ, ಎಸ್‌ಟಿ ಬೇಡಿಕೆ
ಎಸ್.ಸಿ., ಎಸ್.ಟಿ. ಸಮುದಾಯಕ್ಕೆ ಕಾಮಗಾರಿಗಳಲ್ಲಿ ಒಂದು ಕೋಟಿ ರೂ.ವರೆಗೆ ಗುತ್ತಿಗೆ ಪಡೆಯಲು ಸರ್ಕಾರ ಈಗಾಗಲೇ ಮೀಸಲಾತಿ ಕಲ್ಪಿಸಿದೆ, ಅದನ್ನು ಎರಡು ಕೋಟಿ ರೂ.ವರೆಗೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ.
ಇದರ ನಡುವೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಚಿವರಾದ ಜಮೀರ್ ಅಹಮದ್ ಖಾನ್, ರಹೀಂ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ತನ್ವೀರ್ ಸೇಠ್, ಸಲೀಂ ಅಹಮದ್, ಅಬ್ದುಲ್ ಜಬ್ಬಾರ್, ಎನ್.ಎ.ಹ್ಯಾರಿಸ್ ಸೇರಿದಂತೆ ಸಮುದಾಯದ ಎಲ್ಲಾ ಜನಪ್ರತಿನಿಧಿಗಳು ಮುಖ್ಯಮಂತ್ರಿ ಅವರಿಗೆ ಅಲ್ಪಸಂಖ್ಯಾತರಿಗೆ ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲೂ ಮೀಸಲಾತಿ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದರು.
ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ, ಶೇಕಡ 4ರಷ್ಟು ಮೀಸಲಾತಿ ಕಲ್ಪಿಸಲು ಅನುಮೋದನೆ ನೀಡಿದ್ದಲ್ಲದೆ, ಈ ಸಂಬಂಧ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಗೆ ತಿದ್ದುಪಡಿ ತರಲು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಗೆ ಸೂಚನೆ ನೀಡಿದ್ದಾರೆ.