ಸಿದ್ದರಾಮಯ್ಯಗೆ ರಾಜ್ಯ ಒಕ್ಕಲಿಗರ ಸಂಘ ಆಗ್ರಹ
ಬೆಂಗಳೂರು:ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ’ಕರಿಯ ಕುಮಾರಸ್ವಾಮಿ’ ಎನ್ನುವ ಮೂಲಕ ನಿಂದನಾತ್ಮಕ ಭಾಷೆ ಬಳಸಿರುವ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡುವಂತೆ ರಾಜ್ಯ ಒಕ್ಕಲಿಗರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.
ಜಮೀರ್ ಅವರು ಬಳಸಿರುವ ಭಾಷೆಯಿಂದ ಕುಮಾರಸ್ವಾಮಿ ಅವರಿಗೆ ಮಾತ್ರ ಅಪಮಾನ ಮಾಡಿಲ್ಲ, ಇಡೀ ಒಕ್ಕಲಿಗ ಜನಾಂಗಕ್ಕೆ ಮಾಡಿರುವ ಅವಹೇಳನವಾಗಿದೆ, ನಾಡಿನ ಜನರಿಗೂ ಅಪಮಾನ ಮಾಡಿದಂತೆ, ಎರಡು ಬಾರಿ ಕರ್ನಾಟಕ ಮುಖ್ಯಮಂತ್ರಿಯಾಗಿದ್ದವರ ಬಗ್ಗೆ ಆಡಿರುವ ಮಾತುಗಳು ಸಚಿವರಾದವರಿಗೆ ಶೋಭೆ ತರುವುದಿಲ್ಲ.
ಸಚಿವರಾಗಿ ಮುಂದುವರೆಯಬಾರದು
ಸಭ್ಯತೆಯ ಎಲ್ಲೆ ಮೀರಿ ಮಾತನಾಡುವ ಈ ವ್ಯಕ್ತಿ, ಸಚಿವ ಸ್ಥಾನದಲ್ಲಿ ಮುಂದುವರೆಯಬಾರದು, ಒಕ್ಕಲಿಗ ಜನಾಂಗದ ಸರ್ವೋಚ್ಚ ನಾಯಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಕುಟುಂಬದ ಬಗ್ಗೆಯೂ ಜಮೀರ್ ಲಘುವಾಗಿ ಮಾತನಾಡಿರುವುದನ್ನು ಸಂಘ ತೀವ್ರವಾಗಿ ಖಂಡಿಸಿದೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಳೆದ ಭಾನುವಾರದಂದು ಜಮೀರ್ ಅವರು, ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಉರ್ದು ಭಾಷೆಯಲ್ಲಿ ಕುಮಾರಸ್ವಾಮಿ ಅವರ ಬಣ್ಣದ ಬಗ್ಗೆ ಮಾತನಾಡಿ ಜನಾಂಗೀಯ ನಿಂದನೆ ಮಾಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ, ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದಿದೆ.
ಘನತೆಗೆ ಸರಿಯಾದುದಲ್ಲ
ಜಮೀರ್ ಅಹಮದ್ ಅವರು ರಾಜಕೀಯವಾಗಿ ಯಾರಿಗೂ ನೋವಾಗದಂತೆ ಟೀಕೆ-ಟಿಪ್ಪಣಿ ಮಾಡಲು ಅಭ್ಯಂತರವಿಲ್ಲ, ಆದರೆ, ಸಾರ್ವಜನಿಕ ಜೀವನದಲ್ಲಿ ಇದ್ದು, ವ್ಯಕ್ತಿಗತ, ಸಮಾಜದ ಹಿತಕ್ಕೆ ಧಕ್ಕೆಯಾಗುವಂತೆ, ಕೇಂದ್ರ ಸಚಿವರ ವರ್ಣದ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿರುವುದು ಸಚಿವರಾದವರ ಘನತೆಗೆ ಸರಿಯಾದುದಲ್ಲ.
ತಮ್ಮ ಹೇಳಿಕೆಯನ್ನು ಮಾಧ್ಯಮಗಳ ಮುಂದೆ ಮತ್ತೆ ಸಮರ್ಥನೆ ಮಾಡಿಕೊಂಡಿರುವುದನ್ನು ನೋಡಿದರೆ ಬಾಯಿ ತಪ್ಪಿನಿಂದ ಆಡಿರುವ ಮಾತಲ್ಲ, ಉದ್ದೇಶ ಪೂರ್ವಕವಾಗಿ ಆಡಿರುವುದಾಗಿದೆ ಎಂದೆನಿಸುತ್ತದೆ.
ಕ್ಷಮೆ ಯಾಚಿಸಬೇಕು
ನಮ್ಮ ಜನಾಂಗದ ನಾಯಕರಾದ ಕುಮಾರಸ್ವಾಮಿ ಹಾಗೂ ದೇವೇಗೌಡ ಅವರ ಕುಟುಂಬದ ಬಗ್ಗೆ ಅವಮಾನಕರ ಭಾಷೆ ಬಳಸಿರುವುದಕ್ಕೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಹಾಗೂ ಇನ್ನು ಮುಂದೆ ಮಾತನಾಡುವಾಗ ಸೌಜನ್ಯದ ಎಲ್ಲೆ ಮೀರದಂತೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದೆ.
ಜಮೀರ್ ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಮಸ್ತ ಒಕ್ಕಲಿಗ ಜನಾಂಗದ ಪರವಾಗಿ ಒತ್ತಾಯಿಸುವುದಾಗಿ ಸಂಘ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.