ಹಾವೇರಿ(ಶಿಗ್ಗಾವಿ):ರಾಜ್ಯ ಸರ್ಕಾರ ಹದಿನೈದು ದಿನದಿಂದ ವಿಧಾನಸೌಧಕ್ಕೆ ಕೀಲಿ ಹಾಕಿ ಹಣದ ಚೀಲ ತೆಗೆದುಕೊಂಡು ಬಂದು ಚುನಾವಣೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಆರೋಪಿಸಿದ್ದಾರೆ.
ಶಿಗ್ಗಾವಿಯಲ್ಲಿ ಮತದಾನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ ಸರ್ಕಾರಿ ಕೆಲಸಗಳನ್ನು ನಿಲ್ಲಿಸಿ ಚುನಾವಣೆ ನಡೆಸಿದ್ದಾರೆ, ಈ ಮೂಲಕ ತಮ್ಮ ರಾಜಕೀಯ ಅಧಃಪತನ ತೋರಿಸಿದ್ದಾರೆ ಎಂದರು.
ನವೆಂಬರ್ 23ರಂದು ಉತ್ತರ
ಕಾಂಗ್ರೆಸ್ ಆರೋಪಗಳಿಗೆ ನವೆಂಬರ್ 23ರಂದು ಉತ್ತರ ದೊರೆಯಲಿದೆ, ಕಾಂಗ್ರೆಸ್ ಅಭ್ಯರ್ಥಿಯ ರೌಡಿಶೀಟರ್ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ ಎಂಬುದಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯೇ ಹೇಳಿ, ಎರಡು ತಾಸಿನಲ್ಲಿ ಉಲ್ಟಾ ಹೊಡೆದರು.
ಉಪಚುನಾವಣೆಯಲ್ಲಿ ಪೊಲೀಸ್ ಅಧಿಕಾರ ದುರುಪಯೋಗ ಮಾಡಿಕೊಂಡ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ.
ಸೋಲಿನ ಭಯದಲ್ಲಿ ಕಾಂಗ್ರೆಸ್ ತುಷ್ಟೀಕರಣ ಮಾಡುತ್ತಿದೆ, ರಾಗದ್ವೇಷ ಇಲ್ಲದೆ ಕೆಲಸ ಮಾಡುವ ಪ್ರಮಾಣವಚನ ಸ್ವೀಕರಿಸಿ, ಚುನಾವಣೆ ಗೆಲ್ಲಲು ತುಷ್ಟೀಕರಣ ಮಾಡುತ್ತಿದೆ ಎಂದರು.