ತನಿಖೆ ನಡೆಸಿ, ಜನರಿಗೆ ಸತ್ಯಾಸತ್ಯತೆ ತಿಳಿಯಲಿ
ಬೆಂಗಳೂರು:ಸರ್ಕಾರ ಉರುಳಿಸಲು ನಮ್ಮ ಶಾಸಕರನ್ನು ಎನ್‌ಡಿಎ ಖರೀದಿ ಮಾಡಲು ಯತ್ನಿಸಿತ್ತು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ವಾಕ್ ಸಮರಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಮುಖಂಡರು ಅಲ್ಲಗಳೆದಿರುವುದಲ್ಲದೆ, ಸಿದ್ದರಾಮಯ್ಯ ಕಪೋಲಕಲ್ಪಿತ ಆರೋಪ ಮಾಡುತ್ತಿದ್ದಾರೆಂದು ಕಿಡಿ ಕಾರಿದ್ದಾರೆ.
ವಿಜೇಯೇಂದ್ರ ಆಗ್ರಹ
ಶಾಸಕರ ಖರೀದಿ ವಿಚಾರವನ್ನು ಸರ್ಕಾರದ ಉನ್ನತ ಮಟ್ಟದ ಸಂಸ್ಥೆಗಳಿಂದ ತನಿಖೆ ನಡೆಸುವಂತೆ ವಿಜೇಯೇಂದ್ರ ಆಗ್ರಹಿಸಿದ್ದಾರೆ.
ಆದರೆ, ಮುಖ್ಯಮಂತ್ರಿ ಅವರು ತಮ್ಮ ಹೇಳಿಕೆಯನ್ನು ಇಂದೂ ಸಮರ್ಥನೆ ಮಾಡಿಕೊಂಡಿರುವುದಲ್ಲದೆ, ತಲಾ 50 ಕೋಟಿ ರೂ.ನಂತೆ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಖರೀದಿಸಲು ಹೊರಟಿತ್ತು.
ಹಣದ ಆಮಿಷಕ್ಕೆ ನಮ್ಮವರು ಬಲಿಯಾಗಲಿಲ್ಲ, ಆದ್ದರಿಂದ ನನ್ನನ್ನು ಅಧಿಕಾರದಿಂದ ಕೆಳಗಿಸಲು ಸಿಬಿಐ ಮತ್ತು ಇ.ಡಿ. ಸಂಸ್ಥೆಗಳನ್ನು ಛೂ ಬಿಟ್ಟಿದ್ದಾರೆ ಎಂದು ಸುದ್ದಿಗಾರರ ಬಳಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಶಾಸಕರು 50 ಕೋಟಿ ರೂ.ಗೆ ಮಾರಾಟ
ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ವಿಜಯೇಂದ್ರ, ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರ ಮೇಲೆ ವಿಶ್ವಾಸ ಕಳೆದುಕೊಂಡಂತಿದೆ, ಅದಕ್ಕಾಗಿಯೇ 50 ಕೋಟಿ ರೂ.ಗೆ ಅವರು ಮಾರಾಟವಾಗುತ್ತಿದ್ದಾರೆಂದು ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಶಾಸಕರನ್ನು ಮಾರಾಟದ ವಸ್ತುಗಳಂತೆ ವ್ಯಾಖ್ಯಾನಿಸುವ ಮೂಲಕ ನಮ್ಮ ಜನಪ್ರತಿನಿಧಿಗಳನ್ನು ಅಪಮಾನಿಸುತ್ತಿದ್ದಾರೆ.
ಶಾಸಕರನ್ನು ಅಂಕೆಯಲ್ಲಿ ಇಟ್ಟುಕೊಳ್ಳಲು ಆಗುತ್ತಿಲ್ಲ ಹಾಗೂ ನಿಮ್ಮನ್ನು ಸುತ್ತುವರೆದಿರುವ ಭ್ರಷ್ಟಾಚಾರದ ಹಗರಣಗಳನ್ನು ಮುಚ್ಚಿಕೊಳ್ಳಲು ಹೆಣೆದಿರುವ ಸುಳ್ಳಿನ ಕಂತೆ ಇದು ಎಂಬುದನ್ನು ಸಾಮಾನ್ಯ ಜನರೂ ಅರ್ಥ ಮಾಡಿಕೊಳ್ಳಬಲ್ಲರು.
ಸುಳ್ಳು, ಭಂಡತನದ ಸುದ್ದಿ
ಸುಳ್ಳು, ಭಂಡತನ, ಕಪೋಲಕಲ್ಪಿತ ಸುದ್ದಿಗಳನ್ನು ಹರಿಬಿಡುವುದು, ನಿಮ್ಮ ಹಾಗೂ ನಿಮ್ಮ ಪಕ್ಷದ ನಿತ್ಯ ಮಂತ್ರವಾಗಿದೆ.
ನೀವು ನಡೆಸಿರುವ ಸರಣಿ ಹಗರಣಗಳ ಉರುಳು ದಿನೇ ದಿನೇ ಬಿಗಿಯಾಗುತ್ತಿರುವಷ್ಟೂ, ನಿದ್ದೆಗೆಡುತ್ತಿರುವ ನಿಮ್ಮ ಮನಸ್ಸು ಅಸ್ಥಿರಗೊಂಡು ಇಂತಹ ಹೇಳಿಕೆಗಳು ನಿಮ್ಮ ಬಾಯಲ್ಲಿ ಪುಂಖಾನು ಪುಂಖವಾಗಿ ಬರುತ್ತಿವೆ.
ಮುಖ್ಯಮಂತ್ರಿಯಂತಹ ಜವಾಬ್ದಾರಿ ಸ್ಥಾನದಲ್ಲಿ ಕುಳಿತಿರುವ ನೀವು, ಅದರ ಘನತೆ ಕುಗ್ಗಿಸುವಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನಿಲ್ಲಿಸಿ, ಐವತ್ತು ಕೋಟಿ ರೂ. ಆಮಿಷಕ್ಕೆ ಸಂಬಂಧಿಸಿದಂತೆ, ನಿಮ್ಮ ಅಧೀನದಲ್ಲಿ ಬರುವ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಿ, ಜನರಿಗೆ ಸತ್ಯಾಸತ್ಯತೆ ತಿಳಿಯಲಿ ಎಂದು ಸವಾಲು ಹಾಕಿದ್ದಾರೆ.
ಜನಪ್ರತಿನಿಧಿಗಳಿಗೆ ಕಪ್ಪು ಮಸಿ
ಒಂದು ಕಡೆ ನಿಮ್ಮ ಪುತ್ರ ನ್ಯಾಯಾಂಗ ವ್ಯವಸ್ಥೆಯನ್ನೇ ಅಪಮಾನಿಸುವ ಆರೋಪ ಮಾಡಿದರೆ, ಮತ್ತೊಂದೆಡೆ ನೀವು ಜನಪ್ರತಿನಿಧಿಗಳಿಗೆ ಕಪ್ಪು ಮಸಿ ಬಳಿಯುವ ಕೆಲಸ ಮಾಡುತ್ತಿದ್ದೀರಿ.
ಭ್ರಷ್ಟಾಚಾರದ ಪಿತಾಮಹಾ ಆಗಿರುವ ನಿಮ್ಮ ಬಗ್ಗೆ ಜನ, ಹಾದಿ-ಬೀದಿಯಲ್ಲಿ ಆಡಿಕೊಳ್ಳುತ್ತಿದ್ದಾರೆ, ಈ ಬಗ್ಗೆ ನಿಮ್ಮ ಗುಪ್ತಚರ ಇಲಾಖೆ ನಿಮಗೆ ಮಾಹಿತಿ ನೀಡಿಲ್ಲವೇ ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯರನ್ನು ಮುಟ್ಟಲು ಸಾಧ್ಯವೇ
ಈ ಮಧ್ಯೆ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಟ್ಟಲು ಯಾರಿಗಾದರೂ ಸಾಧ್ಯವೇ ಎಂದು ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿ ಅವರನ್ನು ಮುಟ್ಟಿದರೆ, ಪೋಲಿಸರು ಒಂದರಿಂದ 10 ಮೊಕದ್ದವೆಗಳನ್ನು ಹೂಡಿ ಒಳಗೆ ಹಾಕುತ್ತಾರೆ, ಎರಡನೇ ಬಾರಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಅವರಿಗೆ ಇದರ ಪರಿಜ್ಞಾನ ಇಲ್ಲವೆ.
ಉನ್ನತ ಸ್ಥಾನದಲ್ಲಿದ್ದು, ಜನರನ್ನು ಪ್ರಚೋಧಿಸುವಂತಹ ಹೇಳಿಕೆಗಳು ನಿಮ್ಮಂತಹವರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.