ಬೆಂಗಳೂರು:ನವೆಂಬರ್ 20 ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ ಆಗಲಿದೆ.
ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇಕಡ 20 ಲಾಭಾಂಶ ನೀಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್ ಮಾಡಲು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ನಿರ್ಧರಿಸಿದೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಸೋಸಿಯೇಷನ್ ಪ್ರಧಾನಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ ಹಾಗೂ ಅಧ್ಯಕ್ಷ ಎಸ್.ಗುರುಸ್ವಾಮಿ, ಸಿಲ್-2ರಲ್ಲಿ ಮದ್ಯ ಸೇರಿಸಲು ಅವಕಾಶ ಮಾಡಿಕೊಡಬೇಕು, ಸಿಎಲ್-6ರಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನು ಶುಲ್ಕ ವಿಧಿಸಿ ನೀಡುವಂತೆ, ಮದ್ಯ-ಬಿಯರ್ ಪಾರ್ಸೆಲ್‌ಗೆ ಅನುಮತಿ ನೀಡುವಂತೆ ಒತ್ತಾಯಿಸಿ ಒಂದು ದಿನದ ಸಾಂಕೇತಿಕ ಮದ್ಯ ಮಾರಾಟ ಬಂದ್ ಮಾಡುತ್ತಿರುವುದಾಗಿ ತಿಳಿಸಿದರು.
ಭ್ರಷ್ಟಾಚಾರ ನಿಗ್ರಹ
ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ನಿಗ್ರಹ ಹಾಗೂ ಈ ಇಲಾಖೆಯನ್ನು ಹಣಕಾಸು ಸಚಿವರೇ ನಿರ್ವಹಣೆ ಮಾಡಬೇಕೆಂಬ ಬೇಡಿಕೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ಕರೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.
ಅಧಿಕಾರಿಗಳು ವರ್ಗಾವಣೆ ಮತ್ತು ಬಡ್ತಿಗಾಗಿ ಮೇಲಿನವರಿಗೆ ಲಂಚ ನೀಡಿದ್ದೇವೆಂದು ನಮ್ಮ ಬಳಿ ವಸೂಲಿಗೆ ನಿಂತಿದ್ದಾರೆ.
ಲೈಸೆನ್ಸ್ ನವೀಕರಣಕ್ಕೆ ಲಂಚ ನೀಡುವಂತೆ ತುಂಬಾ ಒತ್ತಾಯ ಮಾಡುತ್ತಾರೆ, ಆರ್ಥಿಕ ನಿರ್ವಹಣೆ ಮಾಡುವವರೇ ಇಲಾಖೆ ನಿರ್ವಹಣೆ ಮಾಡಿದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು.
ಲಂಚದ ಬಗ್ಗೆ ಮಾತನಾಡಿಲ್ಲ
ನಾವು ಎಲ್ಲಿಯೂ 500 ರಿಂದ 700 ಕೋಟಿ ರೂ. ಲಂಚದ ಬಗ್ಗೆ ಮಾತನಾಡಿಲ್ಲ, ಆದರೆ, ಮಾನ್ಯ ಪ್ರಧಾನಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರೆಂಬ ಬಗ್ಗೆ ತಿಳಿಯದು, ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ 15-16 ವರ್ಷಗಳಿಂದ ಅಬಕಾರಿ ಸಚಿವರುಗಳು ವರ್ಗಾವಣೆ ಮತ್ತು ಬಡ್ತಿಗಾಗಿ ಅಧಿಕಾರಿಗಳಿಂದ ವಸೂಲಿ ಮಾಡುತ್ತಾರೆನ್ನುವುದು ಎಲ್ಲರಿಗೂ ತಿಳಿದಿದೆ, ಹಾಲಿ ಸಚಿವರೂ ಇದಕ್ಕೆ ಹೊರತಾಗಿಲ್ಲ ಎಂದು ಆರೋಪಿಸಿದರು.