ಜಮೀರ್ ಜೊತೆ ರಾಜಕೀಯ ಬಿಟ್ಟು ಯಾವ ಸಲಿಗೆಯೂ ಇರಲಿಲ್ಲ
ಮೈಸೂರು:ಸರ್ಕಾರ ಉರುಳಿಸಲು ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂ. ನೀಡುವ ಆಮಿಷ ಒಡ್ಡಿದ್ದಾರೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚಿಸಿ ತನಿಖೆ ನಡೆಸುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ತಮ್ಮನ್ನು ’ಕರಿಯಾ’ ಎಂದು ಹೀಯಾಳಿಸಿದ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಮೊಕದ್ದಮೆ ಹೂಡಿ ಜೈಲಿಗೆ ಏಕೆ ಹಾಕಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ನಾನು ಎಂದೂ ’ಕುಳ್ಳ’ ಎಂಬುದಾಗಿ ಜಮೀರ್ ಅವರನ್ನು ಕರೆದಿಲ್ಲ, ನಾನು ಅಂತಹ ವಾತಾವರಣದಿಂದಲೂ ಬಂದಿಲ್ಲ, ನಮ್ಮಿಬ್ಬರ ನಡುವೆ ರಾಜಕೀಯ ಸ್ನೇಹವಷ್ಟೇ ಇತ್ತು, ಬೇರೆ ಯಾವ ಸಲಿಗೆಯೂ ಇರಲಿಲ್ಲ.
ವರ್ಣಭೇದ, ಜನಾಂಗೀಯ ನಿಂದನೆ
ತಮ್ಮ ಬಗ್ಗೆ ಸಚಿವ ಜಮೀರ್ ಅಹಮದ್ ವರ್ಣಭೇದ ಹಾಗೂ ಜನಾಂಗೀಯ ನಿಂದನೆ ಮಾಡಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಸಣ್ಣ ಸಣ್ಣ ವಿಷಯಕ್ಕೂ ಕೇಸು ಹಾಕಿ ಜೈಲಿಗೆ ಹಾಕುವ ಸಿದ್ದರಾಮಯ್ಯ ಸರ್ಕಾರ ಈಗೇಕೆ ಸುಮ್ಮನಿದೆ ಎಂದು ಪ್ರಶ್ನಿಸಿದ್ದಾರೆ.
ಪ್ರತಿ ವಿಷಯಕ್ಕೂ ಪ್ರತಿಪಕ್ಷ ನಾಯಕರ ಕಾರ್ಯಕರ್ತರ ವಿರುದ್ಧ ವಿನಾಕಾರಣ ಕೇಸುಗಳನ್ನು ಹಾಕಲಾಗುತ್ತಿದೆ, ರಾಜ್ಯಪಾಲರ ಕಚೇರಿಯನ್ನೇ ಶೋಧ ಮಾಡುತ್ತೇನೆ ಎಂದು ಹೊರಟಿದ್ದ ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ.
ಅದರ ಬಗ್ಗೆ ಹೇಳಿಕೆ ನೀಡಿದ ನಿಖಿಲ್ ಕುಮಾರಸ್ವಾಮಿ ಮೇಲೆ ಹಾಗೂ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ವಿರುದ್ಧವೂ ಎಫ್‌ಐಆರ್ ಹಾಕಲಾಗಿದೆ, ನಮ್ಮ ಕಾರ್ಯಕರ್ತರು ಜಾಲತಾಣಗಳಲ್ಲಿ ಯಾರೋ ಹೇಳಿದ್ದನ್ನು ಫಾರ್ವರ್ಡ್ ಮಾಡಿದರೆಂಬ ಕಾರಣಕ್ಕೆ ಕೇಸ್ ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷದವರಿಗೆ ಒಂದು ಕಾನೂನು
ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿರುವ ಸಚಿವರೊಬ್ಬರು ನನ್ನ ಬಗ್ಗೆ ಅತ್ಯಂತ ಕೀಳಾಗಿ ವರ್ಣಭೇದ ಮಾಡಿ, ಜನಾಂಗೀಯ ನಿಂದನೆ ಮಾಡಿ, ದೇವೇಗೌಡರ ಖಾನ್ ದಾನ್ ಖರೀದಿ ಮಾಡುತ್ತೇನೆ ಎಂದರೂ ಸರ್ಕಾರ ಸುಮ್ಮನಿದೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಒಂದು ಕಾನೂನು, ಜೆಡಿಎಸ್‌ನವರಿಗೆ ಇನ್ನೊಂದು ಕಾನೂನು ಜಾರಿಯಲ್ಲಿದೆಯೇ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೆಟ್ಟ ಹೇಳಿಕೆ ಕೊಟ್ಟ ಸಚಿವರ ಮಾತುಗಳನ್ನು ಸಮರ್ಥನೆ ಮಾಡಿಕೊಂಡಿದ್ದಾರೆ, ಇದು ನಾಚಿಕೆಗೇಡು, ಇದನ್ನು ನಾಗರಿಕ ಸರ್ಕಾರ ಎಂದು ಕರೆಯಲು ಸಾಧ್ಯವೇ, ಸರ್ಕಾರ ಏಕೆ ಸುಮ್ಮನಿದೆ.
ಚಾಮುಂಡಿ ತಾಯಿ ಮುಂದೆ ನಿಂತು ಹೇಳುತ್ತಿದ್ದೇನೆ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಿಂದೊಮ್ಮೆ ನನ್ನನ್ನು ಕೇವಲ ’ಕುಮಾರ’ ಎಂದು ಕರೆದಿದ್ದಕ್ಕೆ ಅವರನ್ನು ಹೊಡೆಯಲು ಹೋದ ಗಿರಾಕಿ ಇವರು, ಹೊರಟ್ಟಿ ಅವರು ಈಗಲೂ ಇದ್ದಾರೆ, ಅವರನ್ನೇ ಕೇಳಿ ಬೇಕಾದರೆ, ಅವತ್ತು ಅವರನ್ನು ಹೊಡೆಯಲು ಇವರು ಹೋಗಿರಲಿಲ್ಲವೇ .
ಮುಖ್ಯಮಂತ್ರಿಗೆ ದೇವೇಗೌಡರು ಗರ್ವಭಂಗ ಮಾಡುತ್ತೇನೆ, ಸೊಕ್ಕು ಮುರಿಯುತ್ತೇನೆ ಎನ್ನುವುದು ಮಾನಹಾನಿ ಪ್ರಕರಣವೇ ಎಂದರು.
ಎಲ್ಲಾ ವಿಚಾರ ತಿಳಿದಿರಬಹುದು
ಶಾಸಕರ ಖರೀದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೇಳಿಕೆಯನ್ನು ಖಂಡಿಸಿ, ಅವರು 50 ಶಾಸಕರು, 50 ಕೋಟಿ ರೂ. ಎಂದು ನಿಖರವಾಗಿ ಹೇಳುತ್ತಿರುವುದರಿಂದ ಎಲ್ಲಾ ವಿಚಾರ ತಿಳಿದಿರಬಹುದು.
ಅವರ ಸರ್ಕಾರ ಬಂದ ದಿನದಿಂದಲೂ ಎಸ್‌ಐಟಿಗಳನ್ನು ರಚನೆ ಮಾಡಿ ತನಿಖೆ ಮಾಡಿಸುತ್ತಲೇ ಇದ್ದಾರೆ, ಇಡೀ ರಾಷ್ಟ್ರದಲ್ಲಿ ಇಷ್ಟೊಂದು ಎಸ್‌ಐಟಿಗಳು ರಚಿನೆಯಾಗಿಲ್ಲ, ಇದಕ್ಕೂ ಒಂದು ಎಸ್‌ಐಟಿ ರಚಿಸಿ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.
ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಜಮೀರ್ ಹೇಳಿಕೆಯಿಂದ ಮತದಾರರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
ಮಾತಿನ ಸುರಿಮಳೆ
ಮತದಾನ ಮುಗಿದ ನಂತರ ಅಭ್ಯರ್ಥಿ ಸೇರಿದಂತೆ ಈಗ ಕೆಲವು ಕಾಂಗ್ರೆಸ್ ನಾಯಕರು ಜಮೀರ್ ಅವರನ್ನು ಮುಂದಿಟ್ಟುಕೊಂಡು ಮಾತಿನ ಸುರಿಮಳೆ ಮಾಡುತ್ತಿದ್ದಾರೆ.
ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಈ ಬಾರಿ ಕ್ಷೇತ್ರದ ಮತದಾರರ ಆಶೀರ್ವಾದ ದೊರೆತಿದೆ.
ನಿಖಿಲ್ ಭಾರೀ ಅಂತರದಲ್ಲಿ ಗೆಲ್ಲಲಿದ್ದಾರೆ, ಏನೇನೋ ರಾಜಕೀಯ ನಡೆದಿದೆ ಎಂಬುದಾಗಿ ಯೋಗೇಶ್ವರ್ ವಿಮರ್ಶೆ ಮಾಡಿಕೊಳ್ಳುತ್ತಿದ್ದಾರೆ ಎಂದರು.