ಬೆಂಗಳೂರು:ಕರ್ನಾಟಕ ರಾಜಕೀಯವನ್ನೇ ಅಸ್ತ್ರವಾಗಿಟ್ಟುಕೊಂಡು ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣಾ ಹೋರಾಟ ನಡೆಸಿವೆ.
ಕರ್ನಾಟಕದ ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಜನರಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರು ದೂರಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದ ಚುನಾವಣಾ ಪ್ರಚಾರದಲ್ಲಿ ಆಪರೇಷನ್ ಕಮಲವನ್ನೇ ಅಸ್ತ್ರವಾಗಿ ಬಳಕೆ ಮಾಡಿಕೊಂಡಿದ್ದಾರೆ.
ಪ್ರಚಾರಕ್ಕೆ ತೆರಳುವುದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಲಾ 50 ಕೋಟಿ ರೂ.ಗೆ ಕಾಂಗ್ರೆಸ್‌ನ 50 ಶಾಸಕರನ್ನು ಖರೀದಿ ಮಾಡಲು ಎನ್‌ಡಿಎ ಮುಂದಾಗಿದೆ ಎಂದು ಬಾಂಬ್ ಸಿಡಿಸಿದ್ದರು.
ಸರ್ಕಾರ ಉರುಳಿಸುವುದೇ ಕೆಲಸ
ಮಹಾರಾಷ್ಟ್ರದ ಚುನಾವಣಾ ಪ್ರಚಾರದಲ್ಲೂ ಇದನ್ನೇ ಅಸ್ತ್ರ ಮಾಡಿಕೊಂಡಿರುವ ಅವರುಗಳು, ಜನರಿಂದ ಆಯ್ಕೆಗೊಂಡ ಇಂಡಿಯಾ ಒಕ್ಕೂಟದ ಸರ್ಕಾರಗಳನ್ನು ಆಪರೇಷನ್ ಕಮಲದ ಮೂಲಕ ಉರುಳಿಸುವುದೇ ಎನ್‌ಡಿಎ ಕೆಲಸ ಎಂದು ದೂರುತ್ತಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾ ’ನಾ.., ಖಾವೋಂಗಾ, ನಾ.., ಖಾನೆ ದೂಂಗ’ ಎನ್ನುತ್ತಾರೆ, ಆಪರೇಷನ್ ಕಮಲ ಮಾಡಲು ಹಣ ಎಲ್ಲಿಂದ ಬಂತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೋಟ್ಯಂತರ ರೂ. ಎಲ್ಲಿಂದ ಬಂತು
ಕರ್ನಾಟಕದಲ್ಲಿ 2008ರಲ್ಲಿ ಎಂಟು ಶಾಸಕರನ್ನು ಕೋಟ್ಯಂತರ ರೂ. ಖರ್ಚು ಮಾಡಿ ಖರೀದಿ ಮಾಡಿದರು, 2019ರಲ್ಲಿ 17 ಜನ ಶಾಸಕರನ್ನು ಖರೀದಿಸಿದರು, ಈ ಕೋಟ್ಯಂತರ ರೂ. ಬಿಜೆಪಿಗೆ ಎಲ್ಲಿಂದ ಬಂತು.
2008ನಲ್ಲಿ ಬಿ.ಎಸ್.ಯಡಿಯೂರಪ್ಪ ಆಪರೇಷನ್ ಕಮಲ ಮಾಡಿ ಮುಖ್ಯಮಂತ್ರಿಯಾದರು, 2019ರಲ್ಲಿ ಪುನಃ ಮುಖ್ಯಮಂತ್ರಿಯಾದರು, 2018ರಲ್ಲಿ ಸರ್ಕಾರ ರಚನೆಗೆ ಬೇಕಿದ್ದ ಸರಳ ಬಹುಮತ 113 ಸ್ಥಾನಗಳು, ಎರಡೂ ಬಾರಿಯೂ ಅವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು ಎಂದು ಮುಖ್ಯಮಂತ್ರಿ ವಿವರಿಸಿದರು.
ಎಲ್ಲಾ ಕಡೆ ಆಪರೇಷನ್ ಕಮಲದಿಂದ ಬಿಜೆಪಿ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದೆ, ಅನೇಕ ಕಡೆಗಳಲ್ಲಿ ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ನಿದರ್ಶನಗಳಿವೆ, ಒಮ್ಮೆಯೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬರಲಿಲ್ಲ.
ಗ್ಯಾರಂಟಿ ಯೋಜನೆಗಳ ಲೇವಡಿ
ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ, ಗ್ಯಾರಂಟಿ ಯೋಜನೆಗಳ ಬಗ್ಗೆ ಲೇವಡಿ ಮಾಡಿ ಮಾತನಾಡುತ್ತಾರೆ, ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕದಲ್ಲಿ ಘೋಷಣೆ ಮಾಡಿದಾಗ ೫ ಗ್ಯಾರಂಟಿಗಳನ್ನೂ ಜಾರಿ ಮಾಡಲಾಗುವುದಿಲ್ಲ, ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ, ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದರು, ಗ್ಯಾರಂಟಿ ಜಾರಿಯಾದ ರಾಜ್ಯಗಳು ಆರ್ಥಿಕವಾಗಿ ದಿವಾಳಿಯಾಗಿಲ್ಲ.
ಬಿಜೆಪಿ ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಹರಿಯಾಣದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ, ಅವರು ಹೇಳುವುದು ಒಂದು ಮಾಡುವುದು ಇನ್ನೊಂದು, ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು.
ಮೋದಿ, ಈ ರಾಜ್ಯಗಳಲ್ಲಿ ಗ್ಯಾರಂಟಿಗಳ ಪರ ಮಾತನಾಡಿ, ಇದರಿಂದ ಜನರ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾಧ್ಯ ಎನ್ನುತ್ತಾರೆ, ಇಂತಹ ಗೊಂದಲ ಹೇಳಿಕೆ ಕೊಡುವ ಮೂಲಕ ಈ ದೇಶದ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
3.71 ಲಕ್ಷ ಕೋಟಿ ರೂ. ಬಜೆಟ್
ಗ್ಯಾರಂಟಿ ಯೋಜನೆಗಳಿಗೆ ಕರ್ನಾಟಕದಲ್ಲಿ 56,000 ಕೋಟಿ ರೂ. ವೆಚ್ಚ ಮಾಡುತ್ತಿದ್ದು, 3 ಲಕ್ಷದ 71 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ 1.20 ಲಕ್ಷ ಕೋಟಿ ರೂ. ಅಭಿವೃದ್ಧಿಗೆ ಮೀಸಲಿಡಲಾಗಿದೆ, ಗ್ಯಾರಂಟಿ ಯೋಜನೆಗಳು ಜಾರಿಯಾದ ಯಾವ ರಾಜ್ಯದಲ್ಲಿಯೂ ಅಭಿವೃದ್ಧಿ ಕೆಲಸಗಳು ನಿಂತಿಲ್ಲ.
ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಡುವುದರಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ, ಕೇಂದ್ರಕ್ಕೆ 8 ಲಕ್ಷ 88 ಸಾವಿರ ಕೋಟಿ ರೂ. ನೀಡುತ್ತದೆ, ಆದರೆ, 1.30 ಸಾವಿರ ಕೋಟಿ ರೂ. ಮಾತ್ರ ವಾಪಸ್ ಬರುತ್ತದೆ.
ನಿಮ್ಮ ತೆರಿಗೆಯಲ್ಲಿ 15 ಪೈಸೆ ಮಾತ್ರ ವಾಪಸ್ಸು ಕೊಡುತ್ತಾರೆ, ಕರ್ನಾಟಕದಿಂದ 4.50 ಲಕ್ಷ ರೂ. ತೆರಿಗೆ ಕೊಟ್ಟರೆ 60,000 ಕೋಟಿ ರೂ. ಮಾತ್ರ ವಾಪಸ್ಸು ಬರುತ್ತದೆ, ಅಂದರೆ, ಒಂದು ರೂಪಾಯಿಗೆ 13 ರಿಂದ 14 ಪೈಸೆ ಮಾತ್ರ ವಾಪಸ್ ಬರುತ್ತದೆ, ಇದನ್ನು ವಿರೋಧ ಮಾಡಬೇಕೋ ಬೇಡವೋ ಎಂದು ಪ್ರಶ್ನಿಸಿದರು.
ತೆರಿಗೆಯಲ್ಲಿ ಮೋಸ
ಗ್ಯಾರಂಟಿಗಳಿಗೆ ಹಣ ಸಿಗಬಾರದು ಎಂಬ ಕಾರಣಕ್ಕೆ ನಮಗೆ ನ್ಯಾಯಯುತವಾಗಿ ಬರಬೇಕಾದ ತೆರಿಗೆಯಲ್ಲಿ ಮೋಸ ಮಾಡುತ್ತಿದ್ದಾರೆ, ಕರ್ನಾಟಕ, ತೆಲಂಗಾಣ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳು ಕೇಂದ್ರದ ಈ ನಿಲುವನ್ನು ವಿರೋಧಿಸಬೇಕೆಂದು ಕರೆ ನೀಡಿದರು.
ಗೃಹಲಕ್ಷ್ಮೀ ಯೋಜನೆಗೆ ಹಣವಿಲ್ಲ ಎಂದು ಜಾಹೀರಾತು ನೀಡಿದ್ದರು, ಬಿಜೆಪಿಗೆ ಸುಳ್ಳೇ ಮನೆ ದೇವರು, ಯಾವ ರಾಜ್ಯಗಳಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ನಿಲ್ಲಿಸಿಲ್ಲ.
ಈ ತೆರಿಗೆ ನೀತಿಯನ್ನು ವಿರೋಧಿಸಬೇಕೆಂದರೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ, ಮಹಾ ವಿಕಾಸ ಅಘಾಡಿ ಗೆಲ್ಲಿಸಿ ಎಂದರು.