ಸ್ಟೇಟಸ್ ರಿಪೋರ್ಟ್ ಲೋಕಾಯುಕ್ತ ಐಜಿಗೆ ಸಲ್ಲಿಕೆ
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 14 ನಿವೇಶನಗಳ ಬಿಡಿ ಹಂಚಿಕೆಯಲ್ಲಿ ಅಧಿಕಾರಿಗಳು ಭಾರೀ ಲೋಪ ಎಸಗಿದ್ದಾರೆ ಎಂದು ಲೋಕಾಯುಕ್ತ ’ಸದ್ಯದಸ್ಥಿತಿ’ (ಸ್ಟೇಟಸ್ ರಿಪೋರ್ಟ್) ವರದಿಯಲ್ಲಿ ತಿಳಿಸಿದೆ.
ನ್ಯಾಯಾಲಯದ ಆದೇಶದಂತೆ ಬಿಡಿ ನಿವೇಶನಗಳ ಹಂಚಿಕೆ ಕುರಿತು ತನಿಖೆ ನಡೆಸುತ್ತಿರುವ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್, ಸದ್ಯದ ತನಿಖಾ ಹಂತದ ವರದಿಯನ್ನು ಕೇಂದ್ರ ಕಚೇರಿಗೆ ತಲುಪಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಲೋಕಾಯುಕ್ತ ಐಜಿ ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ಭೇಟಿ ಮಾಡಿದ ಎಸ್‌ಪಿ ಅವರು, ತನಿಖೆ ಆರಂಭದಿಂದ ಇದುವರೆಗೂ ನಡೆದಿರುವ ಎಲ್ಲಾ ಹಂತದ ತನಿಖಾ ವರದಿಯ ಮಾಹಿತಿ ಮತ್ತು ದಾಖಲೆಗಳನ್ನು ಸಲ್ಲಿಸಿದ್ದಾರೆ.
ಪ್ರಾಥಮಿಕ ತನಿಖೆ
ಆದರೆ, ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡಿರುವುದಕ್ಕೆ ಎಲ್ಲಿಯೂ ದಾಖಲೆಗಳಿಲ್ಲ, ಅವರ ಪಾತ್ರ ಇದೆ ಎಂಬುದು ಎಲ್ಲಿಯೂ ಪ್ರಾಥಮಿಕ ತನಿಖೆಯಿಂದ ಕಂಡುಬಂದಿಲ್ಲ ಎಂಬ ಸದ್ಯದಸ್ಥಿತಿ ವರದಿ ನೀಡಿದ್ದಾರೆ.
ನಿವೇಶನ ಹಂಚಿಕೆ ಪ್ರಕರಣವನ್ನು ಮೂರು ಭಾಗಗಳಾಗಿ ವಿಂಗಡಿಸಿ ತನಿಖೆ ನಡೆಸಿದ್ದು, ಈಗಾಗಲೇ ಎರಡು ಭಾಗ ಪೂರ್ಣಗೊಂಡಿದೆ, ಮೂರನೇ ಭಾಗದ ತನಿಖೆ ಯಾವ ರೀತಿ ನಡೆಸಬೇಕು ಎಂಬ ಬಗ್ಗೆ ಹಿರಿಯ ಅಧಿಕಾರಿಗಳಿಂದ ಉದೇಶ್, ಸಲಹೆ ಮತ್ತು ಮಾರ್ಗದರ್ಶನ ಪಡೆದಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ನಿವೇಶನಗಳ ಹಂಚಿಕೆ ಸಂದರ್ಭದಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ನಟೇಶ್ ಮತ್ತು ದಿನೇಶ್ ಅವರುಗಳ ವಿಚಾರಣೆ ಬಾಕಿ ಇದೆ, ಉಳಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರ ಮತ್ತು ಅಧಿಕಾರೇತರರಿಂದ ದಾಖಲೆ ಮತ್ತು ಮಾಹಿತಿ ಸಂಗ್ರಹಿಸಿರುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.
ಅನುಮತಿ ದೊರೆತಿಲ್ಲ
ಹಿರಿಯ ಅಧಿಕಾರಿಗಳ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಮುಖ್ಯಕಾರ್ಯದರ್ಶಿ ಅವರಿಗೆ ಮೂರು ವಾರಗಳ ಹಿಂದೆಯೇ ಪತ್ರ ಬರೆದಿದ್ದರೂ, ಇದುವರೆಗೂ ಅವರಿಂದ ನಮಗೆ ಅನುಮತಿ ದೊರೆತಿಲ್ಲ.
ಅನುಮತಿ ದೊರೆತ ತಕ್ಷಣವೇ ತಾವು ಹಿರಿಯ ಅಧಿಕಾರಿಗಳನ್ನು ಕರೆಸಿ ಅವರಿಂದ ತನಿಖೆಗೆ ಅಗತ್ಯ ಇರುವ ಮಾಹಿತಿ ಪಡೆದುಕೊಳ್ಳುವುದಾಗಿಯೂ ತಿಳಿಸಿದ್ದಾರೆ.
ಸ್ಟೇಟಸ್ ರಿಪೋರ್ಟ್ ವಿವರ
ವಿವಾದಿತ ಜಮೀನು ಡಿನೋಟಿಫೈಗೆ ಮೊದಲು ದೇವರಾಜು ತಂದೆಯಿಂದ ದೇವರಾಜು ಸಹೋದರನಿಗೆ ನಂತರ ದೇವರಾಜುಗೆ ಬಂದಿತ್ತು, ಆದರೆ, ಜಮೀನುಗಳನ್ನು ಕುಟುಂಬಸ್ಥರೇ ವರ್ಗಾವಣೆ ಮಾಡಿಕೊಂಡಿದ್ದರು, ಜಮೀನು ಮಾಲೀಕತ್ವ ವರ್ಗಾವಣೆ ಬಗ್ಗೆ ಸರ್ಕಾರಿ ದಾಖಲೆಯಲ್ಲಿ ನಮೂದಿಸದೇ ಇರುವುದು ಅವರ ಕುಟುಂಬಸ್ಥರು ಮಾಡಿದ್ದ ನಿರ್ಲಕ್ಷ್ಯ ಎಂಬ ಮಾಹಿತಿ ನೀಡಿದ್ದಾರೆ.
ದೇವರಾಜು ತನಗೆ ಬಂದ ಕೃಷಿ ಭೂಮಿಯನ್ನು ಮಲ್ಲಿಕಾರ್ಜುನಸ್ವಾಮಿ ಎಂಬುವರಿಗೆ ಮಾರಾಟ ಮಾಡಿದ್ದರು, ಅವರು ಜಮೀನನ್ನು ಭೂಪರಿವರ್ತನೆ ಮಾಡಿಸಿಕೊಂಡಿರುತ್ತಾರೆ.
ಮುಡಾ ಹಾಗೂ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ಭೂಪರಿವರ್ತನೆ ಬಗ್ಗೆ ಸರಿಯಾದ ಪರಿಶೀಲನೆ ಮಾಡಿಲ್ಲ, ಪರಿಶೀಲನೆ ನಡೆಸದೇ ಭೂಪರಿವರ್ತನೆ ಮಾಡಿದ್ದಾರೆ.
ಭೂಪರಿವರ್ತನೆಯಲ್ಲಿ ಮುಖ್ಯಮಂತ್ರಿ ಕುಟುಂಬ ಹಸ್ತಕ್ಷೇಪವಿಲ್ಲ ಅನ್ನೋದು ಸ್ಪಷ್ಟವಾಗಿದೆ, ಮಲ್ಲಿಕಾರ್ಜುನಸ್ವಾಮಿ ಮಾರಾಟ ಮಾಡಿದ ಮೇಲೆ ಅವರ ಕುಟುಂಬಕ್ಕೆ ಭೂಮಿ ಬಂತು.
50:50ರ ಅನುಪಾತ
ಮೈಸೂರು ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ50:50ರ ಅನುಪಾತದಲ್ಲಿ 14 ಬಿಡಿ ನಿವೇಶನಗಳನ್ನು ಮುಖ್ಯಮಂತ್ರಿ ಅವರ ಕುಟುಂಬಕ್ಕೆ ನೀಡಿ ಮುಡಾ ಅಧಿಕಾರಿಗಳು ತಪ್ಪು ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ನಿವೇಶನ ಪಡೆಯುವ ವೇಳೆ ಮುಖ್ಯಮಂತ್ರಿ ಅವರ ಕುಟುಂಬ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆಯೇ ಎಂಬ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮತ್ತಷ್ಟು ಮಾಹಿತಿ ಸಂಗ್ರಹಿಸಬೇಕಿದೆ, ಆದರೆ, ಇದುವರೆಗಿನ ತನಿಖೆಯಲ್ಲಿ ಅವರ ಕುಟುಂಬ ಹಸ್ತಕ್ಷೇಪ ಮಾಡಿರುವ ಮಾಹಿತಿ ಇಲ್ಲ.
ನಿವೇಶನಗಳ ಹಂಚಿಕೆ ಸಂದರ್ಭದಲ್ಲಿ ಮುಡಾ ಆಯುಕ್ತರಾಗಿದ್ದ ನಟೇಶ್ ಮತ್ತು ದಿನೇಶ್ ವಿಚಾರಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ, ಮುಖ್ಯಕಾರ್ಯದರ್ಶಿಯವರು ಅನುಮತಿ ನೀಡುತ್ತಿದ್ದಂತೆ ಇಬ್ಬರು ಅಧಿಕಾರಿಗಳ ವಿಚಾರಣೆ ನಡೆಸಿ ನ್ಯಾಯಾಲಯ ನೀಡಿರುವ ಗಡುವಿನೊಳಗೆ ಪೂರ್ಣ ವರದಿ ನೀಡುವುದಾಗಿ ಮೈಸೂರು ಎಸ್‌ಪಿ ಅವರು, ಎಸ್‌ಪಿ ಅವರಿಗೆ ಮಾಹಿತಿ ನೀಡಿದ್ದಾರೆ.