ವಿಚಾರಣೆಗೆ ಒಳಪಡಿಸಲು ಸರ್ಕಾರದ ಅನುಮತಿ
ಬೆಂಗಳೂರು : ಮುಖ್ಯಮಂತ್ರಿಗಳ ಕುಟುಂಬಕ್ಕೆ 14 ನಿವೇಶನಗಳ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾದ ಮಾಜಿ ಆಯುಕ್ತ ಹಾಗೂ ಸರ್ಕಾರದ ಹಿರಿಯ ಅಧಿಕಾರಿ ನಟೇಶ್ ಅವರ ಪ್ರಾಸಿಕ್ಯೂಷನ್‌ಗೆ ರಾಜ್ಯ ಸರ್ಕಾರ ಕೊನೆಗೂ ಅನುಮತಿ ನೀಡಿದೆ. ಮಾಜಿ ಆಯುಕ್ತರುಗಳಾದ ನಟೇಶ್ ಹಾಗೂ ದಿನೇಶ್ ಕುಮಾರ್ ಅವರುಗಳನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವಂತೆ ಲೋಕಾಯುಕ್ತ ಪೋಲಿಸರು ಸರ್ಕಾರದ ಮುಖ್ಯಕಾರ್ಯದರ್ಶಿ ಅವರ ಅನುಮತಿ ಕೋರಿದ್ದರು.
ಮೂರು ವಾರಗಳ ನಂತರ ಮುಖ್ಯಕಾರ್ಯದರ್ಶಿ ಅವರು ನಟೇಶ್ ವಿಚಾರಣೆಗೆ ನಿಯಮ 17 (ಎ) ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ, ಬಿಡಿ ನಿವೇಶನಗಳ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅವರ ವಿಚಾರಣೆಗೆ ಸರ್ಕಾರ ಇನ್ನೂ ಅನುಮತಿ ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ.
ಸರ್ಕಾರದ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೋಲಿಸರು, ನಟೇಶ್ ಅವರನ್ನು ವಿಚಾರಣೆಗೆ ಒಳಪಡಿಸಿ ಅಗತ್ಯ ಬಿದ್ದರೆ, ಕ್ರಿಮಿನಲ್ ದಾವೆ ಹೂಡಿ ಬಂಧಿಸಲು ಅವಕಾಶವಿದೆ. ನಿವೇಶನಗಳ ಮರುಹಂಚಿಕೆಯಲ್ಲಿ ಭಾರೀ ಭ್ರಷ್ಟಾಚಾರ ಎಸಗಿದ್ದಾರೆಂಬ ಆರೋಪ ನಟೇಶ್ ಅವರ ಮೇಲಿದೆ.
ಸರ್ಕಾರ ಅನುಮತಿ ನೀಡುತ್ತಿದ್ದಂತೆ ಮೈಸೂರು ಲೋಕಾಯುಕ್ತ ಪೋಲಿಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ಅವರು, ನಟೇಶ್ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ನಟೇಶ್ ಅವರನ್ನು ಈಗಾಗಲೇ ಇ.ಡಿ. ಅಧಿಕಾರಿಗಳು ಮೂರು ಬಾರಿ ತಮ್ಮ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿ ಕಳುಹಿಸಿಕೊಟ್ಟಿದ್ದಾರೆ.
ಇದಕ್ಕೂ ಮುನ್ನ ಇ.ಡಿ. ಅಧಿಕಾರಿಗಳು ನಟೇಶ್ ಅವರ ಮನೆ ಮತು ಕಚೇರಿ ಮೇಲೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.