ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಫಲಿತಾಂಶ
ಬೆಂಗಳೂರು : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ ಹಾಗೂ ಎನ್‌ಡಿಎ ದಿಗ್ಗಜ ನಾಯಕರ ವರ್ಚಸ್ಸಿನ ಮೇಲೆ ಪರಿಣಾಮ ಬೀರಲಿದೆ.
ರಾಜ್ಯದ ಇತಿಹಾಸದಲ್ಲೇ ಉಪಚುನಾವಣೆಯೊಂದನ್ನು ಯಾವುದೇ ರಾಜಕೀಯ ಪಕ್ಷ ಹಾಗೂ ನಾಯಕರು ಈ ಮಟ್ಟಕ್ಕೆ ತಮ್ಮ ವರ್ಚಸ್ಸನ್ನು ಪಣಕ್ಕಿಟ್ಟು ಹೋರಾಟ ನಡೆಸಿರಲಿಲ್ಲ. ಚುನಾವಣೆ ಫಲಿತಾಂಶದಿಂದ ವಿರೋಧಿಗಳಿಗೆ ಪಾಠ ಕಲಿಸಬೇಕೆಂಬ ಛಲದಿಂದ ಈ ನಾಯಕರು ಹೋರಾಟ ನಡೆಸಿದ್ದರು.ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರುಗಳಿಗಿಂತಲೂ ಇವರ ಪರವಾಗಿ ಪ್ರಚಾರ ಮಾಡಿದ ನಾಯಕರುಗಳದೇ ಹೆಚ್ಚಿನ ಪ್ರತಿಷ್ಠೆಯಾಗಿತ್ತು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎನ್‌ಡಿಎ ಕೂಟದಲ್ಲಿ ತಮ್ಮ ವರ್ಚಸ್ಸು ಉಳಿಸಿಕೊಳ್ಳುವ ಪ್ರಶ್ನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ವಿರೋಧಿಗಳೆಲ್ಲರೂ ಒಂದಾಗಿ ಚನ್ನಪಟ್ಟಣ ಕ್ಷೇತ್ರದಲ್ಲೇ ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಹಣಿಯಲು ಪ್ರಯತ್ನ ನಡೆದಿತ್ತು.
ಇದೇ ಕಾರಣಕ್ಕೆ ತಮ್ಮ ಪಕ್ಷಕ್ಕೆ ಅಸ್ಥಿತ್ವ ಇಲ್ಲದಿದ್ದರೂ ಬಿಜೆಪಿಯಿಂದ ಯೋಗೇಶ್ವರ್ ಅವರನ್ನೇ ಹೈಜಾಕ್ ಮಾಡಿ, ಹಸ್ತದ ಚಿನ್ಹೆಯಡಿ ಕಣಕ್ಕಿಳಿಸಿದ್ದರು. ಇನ್ನು ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ತಾವು ಅಧಿಕಾರದಿಂದ ಕೆಳಗಿಳಿಯುವಲ್ಲಿ ಯೋಗೇಶ್ವರ್ ಅವರ ಹಿಂಬಾಗಿಲಿನ ರಾಜಕೀಯ ತಂತ್ರಕ್ಕೆ ತಕ್ಕ ಪಾಠ ಕಲಿಸುವ ಪಣತೊಟ್ಟಿದ್ದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ತಮ್ಮ ಕುಟುಂಬದ ಮೂರನೇ ತಲೆಮಾರಿನ ಕುಡಿಯನ್ನು ರಾಜಕೀಯವಾಗಿ ಮೇಲೆತ್ತಿ, ತಮ್ಮ ಪುತ್ರ ಕುಮಾರಸ್ವಾಮಿಯನ್ನು ದೆಹಲಿ ರಾಜಕೀಯದಲ್ಲಿ ಮತ್ತಷ್ಟು ಮೇಲೇರಿಸಲು, ಇಳಿವಯಸ್ಸಿನಲ್ಲೂ ಸತತ ೮ ದಿನಗಳ ಕಾಲ ಪ್ರಚಾರ ನಡೆಸಿದರು.
ಕ್ಷೇತ್ರದಲ್ಲಿ ಮತದಾನ ಮುಗಿದಿದೆ, ನವೆಂಬರ್ ೨೩ಕ್ಕೆ ಫಲಿತಾಂಶ ಹೊರಬೀಳಲಿದೆ, ಮುಖಂಡರುಗಳು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಕ್ಷೇತ್ರ ಬಿಟ್ಟು ಹೋದ ನಂತರ ಸಾರ್ವಜನಿಕ ವಲಯದಲ್ಲಿ ಗೆಲ್ಲುವ ಕುದುರೆ ಯಾರೆಂಬ ಭಾರೀ ಬೆಟ್ಟಿಂಗ್‌ನಲ್ಲಿ ನಿರತರಾಗಿದ್ದಾರೆ. ಚನ್ನಪಟ್ಟಣ ಮತದಾರರು ಯಾವ ಮುಖಂಡರ ವರ್ಚಸ್ಸನ್ನು ಉಳಿಸುತ್ತಾರೆಂಬುದನ್ನು ತಿಳಿಯಲು ಫಲಿತಾಂಶಕ್ಕೆ ಕಾಯಬೇಕು.