ಕಳೆದ ಶುಕ್ರವಾರ ರಾಜ್ಯ ಬಿಜೆಪಿಯ ಕೆಲ ನಾಯಕರು ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಹೋಗಿದ್ದಾರೆ, ಹೀಗೆ ಹೋದವರು ಪಕ್ಷದ ಭಿನ್ನಮತೀಯರು ಇಡುತ್ತಿರುವ ಹೆಜ್ಜೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
’ಏನ್ಸಾರ್, ಈ ಯತ್ನಾಳ್, ಲಿಂಬಾವಳಿ ಅವರೆಲ್ಲ ಸೇರಿ ವಕ್ಫ್ ಗೋಜಲಿನ ವಿರುದ್ಧ ಯಾತ್ರೆ ಮಾಡಲು ನಿರ್ಧರಿಸಿದ್ದಾರೆ, ಇವತ್ತು ಅಧ್ಯಕ್ಷರು ಘೋಷಿಸಿರುವ ಹೋರಾಟಕ್ಕೆ ಪ್ರತಿಯಾಗಿ ಇವರ ಹೋರಾಟ ಶುರುವಾದರೆ ಪಕ್ಷದ ಗತಿಯೇನು, ಇವರಿಗ್ಯಾರು ಹೇಳುವವರು ಕೇಳುವವರೇ ಇಲ್ಲವೇ, ಅಂತ ಈ ನಾಯಕರು ಕೇಳಿದಾಗ ಯಡಿಯೂರಪ್ಪ ಮೌನವಾಗಿದ್ದರಂತೆ.
ಆಗ ಮಾತು ಮುಂದುವರಿಸಿದ ಈ ನಾಯಕರು, ಒಂದು ಪಕ್ಷದಲ್ಲಿ ಈ ರೀತಿ ಎರಡು ಬಣಗಳು ಕಂಡರೆ ನಮ್ಮ ಹೋರಾಟಕ್ಕೆ ಅರ್ಥವೇ ಇಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ಈ ಯತ್ನಾಳ್, ಜಾರಕಿಹೊಳಿ, ಲಿಂಬಾವಳಿ ಅವರಂತವರ ಪಕ್ಷ ವಿರೋಧಿ ಚಟುವಟಿಕೆಯನ್ನು ಹತ್ತಿಕ್ಕುವ ಕೆಲಸವಾಗದಿದ್ದರೆ ನಾವು ಮುಂದುವರಿಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಮೌನಮುರಿದ ಯಡಿಯೂರಪ್ಪ, ’ನಿಜ, ಇವರದೆಲ್ಲ ಅತಿಯಾಗಿದೆ, ಹಾಗಂತ ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರಿಗೆ ಹಲವು ಬಾರಿ ಹೇಳಿದ್ದೇನೆ, ಹೀಗೆ ಅಪಸ್ವರ ಎತ್ತುತ್ತಿರುವವರಿಗೆ ವಾರ್ನ್ ಮಾಡಿ, ಇಲ್ಲವೇ ಪಕ್ಷದಿಂದ ಉಚ್ಚಾಟಿಸಿ ಅಂತ ಹೇಳಿದ್ದೇನೆ, ನಾನು ಹೇಳಿದಾಗಲೆಲ್ಲ ಅವರು ಡೋಂಟ್‌ವರಿ ನಾನು ಯತ್ನಾಳ್, ಜಾರಕಿಹೊಳಿ ಅವರಿಗೆಲ್ಲ ವಾರ್ನ್ ಮಾಡುತ್ತೇನೆ ಅನ್ನುತ್ತಾರೆ.
ಅವರು ಈ ರೀತಿ ವಾರ್ನ್ ಮಾಡಿದ ಮೇಲೆ ಇವರೂ ನಾಲ್ಕು ದಿನ ಸುಮ್ಮನಿರುತ್ತಾರೆ, ಆಮೇಲೆ ಯಥಾಪ್ರಕಾರ ಅಪಸ್ವರ ಎತ್ತುತ್ತಾರೆ, ಹೀಗಾಗಿ ಹೇಳಿ.., ಹೇಳಿ ನನಗೂ ಬೇಸತ್ತು ಹೋಗಿದೆ ಎಂದಿದ್ದಾರೆ.
ಯಡಿಯೂರಪ್ಪ ಅವರ ಮಾತಿನಲ್ಲಿದ್ದ ನೋವನ್ನು ಗಮನಿಸಿದ ಈ ನಾಯಕರ ಪಡೆ, ’ಸಾರ್, ಇದೆಲ್ಲ ಆ ಸಂಘಪರಿವಾರದ ಲೀಡರ್ ಕೊಟ್ಟಿರುವ ಕುಮ್ಮಕ್ಕು, ಇದು ಹೀಗೇ ಮುಂದುವರಿಯಲು ಬಿಟ್ಟರೆ ನಾಳೆ ಯತ್ನಾಳ್, ಜಾರಕಿಹೊಳಿ, ಲಿಂಬಾವಳಿಯವರೆಲ್ಲ ವಿಜಯೇಂದ್ರ ಅವರ ಕೈ ಕಟ್ಟಿ ಹಾಕುತ್ತಾರೆ, ಹಾಗಂತ ಈ ಆಟವನ್ನು ಎಷ್ಟು ದಿನ ಅಂತ ಸಹಿಸ್ಕೊಳ್ಳೋದು, ಹೀಗಾಗಿ ನೀವು ನಮಗೆ ಪರ್ಮಿಷನ್ ಕೊಡಿ, ನಾವು ಇಪ್ಪತ್ತೋ ಮೂವತ್ತು ಮಂದಿ ದಿಲ್ಲಿಗೆ ಹೋಗುತ್ತೇವೆ, ಹೋಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ದೂರು ಕೊಡುತ್ತೇವೆ, ಒಂದೋ ಈ ಭಿನ್ನಮತೀಯರ ಬಾಯನ್ನು ಅವರು ಮುಚ್ಚಿಸಲಿ, ಇಲ್ಲವೇ ಪಕ್ಷದಿಂದ ಉಚ್ಚಾಟನೆ ಮಾಡಲಿ’ ಎಂದಿದ್ದಾರೆ.
ಆದರೆ ಈ ನಾಯಕರ ಮಾತನ್ನು ಕೇಳಿದ ಯಡಿಯೂರಪ್ಪ ಅವರು, ನೋ.., ನೋ.., ಹಾಗೆಲ್ಲ ನಿಯೋಗದಲ್ಲಿ ಹೋಗಿ ದೂರು ಕೊಡೋದು ಸರಿಯಲ್ಲ, ಹಾಗೇನಾದ್ರೂ ಹೋದ್ರೆ ಪಕ್ಷದ ಒಳಜಗಳದ ಬಗ್ಗೆ ನಾವೇ ವಿರೋಧ ಪಕ್ಷದವರಿಗೆ ಮೆಸೇಜು ಕೊಟ್ಟಂತಾಗುತ್ತದೆ ಅಂತ ಹೇಳಿದ್ದಾರೆ.
ಯಾವಾಗ ಯಡಿಯೂರಪ್ಪ ಈ ಮಾತು ಹೇಳಿದರೋ, ಆಗ ಅಲ್ಲಿದ್ದ ನಾಯಕರಿಗೆ ಮತ್ತಷ್ಟು ಬೇಸರವಾಗಿದೆ, ಹಾಗಂತಲೇ, ’ಸಾರ್, ಈ ಭಿನ್ನಮತೀಯರನ್ನು ಈಗಲೇ ಕಂಟ್ರೋಲಿಗೆ ತರದಿದ್ದರೆ ನಾಳೆ ಬಹಿರಂಗವಾಗಿಯೇ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಅಂತ ಹೋರಾಟ ಶುರು ಮಾಡ್ತಾರೆ, ಹೀಗಾಗಿ ಅವರ ಆಟಕ್ಕೆ ಪ್ರತಿ ಹೋರಾಟ ಶುರು ಮಾಡದಿದ್ದರೆ ಕಷ್ಟ, ಅಂದ ಹಾಗೆ ಈ ಯತ್ನಾಳ್ ಅವರೆಲ್ಲ ತಮ್ಮಿಚ್ಚೆಯಂತೆ ಯಾತ್ರೆ ಶುರು ಮಾಡಿದರು ಅಂತಿಟ್ಟುಕೊಳ್ಳಿ, ಆಮೇಲೆ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ, ಒಂದು ಸಲ ಈ ಯಾತ್ರೆ ನಡೆದೇ ಹೋಯಿತು ಅಂದುಕೊಳ್ಳಿ, ಆಗ ವಿಜಯೇಂದ್ರ ಅವರ ನಾಯಕತ್ವಕ್ಕೆ ಪವರ್ರು ಇರುವುದಿಲ್ಲ ಅಂತ ಹೇಳಿದ್ದಾರೆ.
ಆಗ ಮಾತನಾಡಿದ ಯಡಿಯೂರಪ್ಪ, ’ಇಲ್ಲ.., ಇಲ್ಲ ಅವರ ಯಾತ್ರೆ ನಡೆಯುವುದಿಲ್ಲ, ನಾನು ಕೂಡಾ ನಡ್ಡಾ ಅವರಿಗೆ ಈ ಕುರಿತು ಸ್ಪಷ್ಟವಾಗಿ ಹೇಳಿದ್ದೇನೆ, ಅವರು ಕೂಡಾ ಈ ಯಾತ್ರೆ ನಡೆಯುವುದಿಲ್ಲ, ಕ್ಯಾನ್ಸಲ್ ಮಾಡಿಸುತ್ತೇನೆ ಅಂತ ಪ್ರಾಮಿಸ್ಸು ಮಾಡಿದ್ದಾರೆ’ ಅಂತ ವಿವರಿಸಿದ್ದಾರೆ.
ದಿಲ್ಲಿಗೆ ಧಾವಿಸಲಿದೆ ನಿಷ್ಟರ ಪಡೆ
ಹೀಗೆ ಭಿನ್ನಮತೀಯರ ವಿರುದ್ಧ ಆರ್ಭಟಿಸದಂತೆ ಯಡಿಯೂರಪ್ಪ ತಮ್ಮ ನಿಷ್ಠರಿಗೆ ಸೂಚಿಸಿದ್ದಾರಾದರೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲ ನಾಯಕರು ದಿಲ್ಲಿ ಯಾತ್ರೆಗೆ ಅಣಿಯಾಗತೊಡಗಿದ್ದಾರೆ.
ಒಂದು ವೇಳೆ ನಿಗದಿತ ಸಮಯಕ್ಕೆ ಯತ್ನಾಳ್ ಅಂಡ್ ಗ್ಯಾಂಗ್‌ನ ಯಾತ್ರೆ ಶುರುವಾದರೆ ದಿಲ್ಲಿಗೆ ಹೋಗಿ ವರಿಷ್ಠರಿಗೆ ದೂರು ನೀಡುವುದು ಈ ನಾಯಕರ ಲೆಕ್ಕಾಚಾರ.
ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಿದವರು ಯಡಿಯೂರಪ್ಪ, ಇಡೀ ರಾಜ್ಯ ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ.
ಇವತ್ತು ಯಡಿಯೂರಪ್ಪ ಬೇಡ, ವಿಜಯೇಂದ್ರ ಬೇಡ ಅನ್ನುತ್ತಿರುವ ಭಿನ್ನಮತೀಯರ ಪೈಕಿ ಯಾರಿಗೆ ಈ ಶಕ್ತಿ ಇದೆ, ಅದರಲ್ಲೂ ಬಹುತೇಕರಿಗೆ ತಮ್ಮ ಕ್ಷೇತ್ರದಲ್ಲೇ ಶಕ್ತಿಯಿಲ್ಲ, ಉಳಿದವರಿಗೆ ತಮ್ಮ ಕ್ಷೇತ್ರ ಬಿಟ್ಟು ಮತ್ತೊಂದು ಕಡೆ ಪವರ್ರಿಲ್ಲ, ಇಂತವರನ್ನು ತಕ್ಷಣ ತಡೆಗಟ್ಟಿ, ಇಲ್ಲವೇ ಪಕ್ಷದಿಂದ ಕಿತ್ತೆಸೆಯಿರಿ ಅಂತ ವರಿಷ್ಠರಿಗೆ ಹೇಳಲು ಈ ಪಡೆ ನಿರ್ಧರಿಸಿದೆ.
ಡಿಸೆಂಬರ್ ಎರಡನೇ ವಾರ ಪ್ರಾರಂಭವಾಗಲಿರುವ ವಿಧಾನಮಂಡಲ ಅಧಿವೇಶನದ ನಂತರ ದಿಲ್ಲಿ ಯಾತ್ರೆ ನಡೆಸುವುದು ಯಡಿಯೂರಪ್ಪ ಆಪ್ತರ ಲೆಕ್ಕಾಚಾರ.
ಹಾಗೊಂದು ವೇಳೆ ಪಕ್ಷದ ವರಿಷ್ಠರು ಯತ್ನಾಳ್ ಅಂಡ್ ಗ್ಯಾಂಗಿನ ಯಾತ್ರೆಗೆ ಬ್ರೇಕ್ ಹಾಕಿದರೆ ಯಡಿಯೂರಪ್ಪ ನಿಷ್ಠರ ದಿಲ್ಲಿ ಯಾತ್ರೆಗೂ ಬ್ರೇಕ್ ಬೀಳಲಿದೆ ಎಂಬುದು ಸದ್ಯದ ಮಾಹಿತಿ.
ಯಡಿಯೂರಪ್ಪ ಆಪ್ತರ ಅನುಮಾನ ಏನು?
ಅಂದ ಹಾಗೆ ಯತ್ನಾಳ್ ಸೇರಿದಂತೆ ಭಿನ್ನಮತೀಯರ ವಿರುದ್ಧ ಯಡಿಯೂರಪ್ಪ ಮತ್ತು ವಿಜಯೇಂದ್ರ ಹಲವು ಬಾರಿ ದೂರು ನೀಡಿರುವುದೇನೋ ಸರಿ, ಆದರೆ, ಅಷ್ಟೆಲ್ಲ ಮಾಡಿದರೂ ವರಿಷ್ಠರೇಕೆ ಸುಮ್ಮನಿದ್ದಾರೆ ಎಂಬುದು ಅವರ ಆಪ್ತರ ಅನುಮಾನ.
ಎಲ್ಲಕ್ಕಿಂತ ಮುಖ್ಯವಾಗಿ ಇಷ್ಟು ಬಾರಿ ದೂರು ನೀಡಿದ ಮೇಲೂ ಭಿನ್ನಮತೀಯರ ಧ್ವನಿ ಏನೂ ಅಡಗಿಲ್ಲ, ಬದಲಿಗೆ ವಿಜಯೇಂದ್ರ ಅವರನ್ನು ಅಧ್ಯಕ್ಷ ಪಟ್ಟದಿಂದ ಕೆಳಗಿಳಿಸುವುದೇ ತಮ್ಮ ಗುರಿ ಎಂಬ ಮೆಸೇಜನ್ನು ಭಿನ್ನರು ರವಾನಿಸುತ್ತಲೇ ಇದ್ದಾರೆ.
ಹೀಗೆ ಭಿನ್ನರು ಹೇಳಿದ ಮಾತ್ರಕ್ಕೆ ವರಿಷ್ಠರು ವಿಜಯೇಂದ್ರ ಅವರನ್ನು ತಕ್ಷಣ ಇಳಿಸುತ್ತಾರೆ ಅಂತೇನೂ ಅಲ್ಲ, ಆದರೆ, ಈಗಿನ ಸ್ಥಿತಿ ನೋಡಿದರೆ ವಿಜಯೇಂದ್ರ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯ ತನಕ ಮುಂದುವರಿಸುವುದು ಡೌಟು ಎಂಬುದು ಈ ಆಪ್ತರ ಯೋಚನೆ.
ಅಂದ ಹಾಗೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯ ಅವಧಿ ಎರಡು ವರ್ಷವಾದರೂ ತಮ್ಮನ್ನು ಎರಡನೇ ಅವಧಿಗೂ ಮುಂದುವರಿಸುತ್ತಾರೆ ಅಂತ ವಿಜಯೇಂದ್ರ ಅವರೇನೋ ನಂಬಿದ್ದಾರೆ.
ಹಾಗಂತಲೇ ರಾಜ್ಯಾದ್ಯಂತ ಯುವಕರ ಪಡೆಯನ್ನು ಬಲಿಷ್ಟಗೊಳಿಸುತ್ತಾ ಮುಂಬರುವ ವಿಧಾನಸಭಾ ಚುನಾವಣೆಯ ನೇತೃತ್ವ ತಮ್ಮದೇ ಅಂತ ನಂಬಿದ್ದಾರೆ.
ಆದರೆ, ದಿಲ್ಲಿ ಲೆವೆಲ್ಲಿನಲ್ಲಿ ವಿಜಯೇಂದ್ರ ಅವರನ್ನು ದುರ್ಬಲಗೊಳಿಸಲು ವಿರೋಧಿಗಳು ಒಂದುಗೂಡುತ್ತಿದ್ದಾರೆ.
ಹೀಗೆ ಒಂದುಗೂಡುತ್ತಿರುವವರು ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ವಿಶ್ವಾಸ ಗಿಟ್ಟಿಸುತ್ತಿರುವುದನ್ನು ನೋಡಿದರೆ ಮುಂದಿನ ಕೆಲವೇ ಕಾಲದಲ್ಲಿ ವಿಜಯೇಂದ್ರ ಅವರ ಕೈ ಬಿಗಿ ಮಾಡುವ ಕೆಲಸ ವಿದ್ಯುಕ್ತವಾಗಿಯೇ ನಡೆಯಲಿದೆ.
ಇಂತಹ ಪರಿಸ್ಥಿತಿ ನಿರ್ಮಾಣವಾಗುವುದನ್ನು ತಡೆಗಟ್ಟಲು ಈಗಲೇ ವಿಜಯೇಂದ್ರ ಮತ್ತು ಯಡಿಯೂರಪ್ಪ ಸಜ್ಜಾಗದಿದ್ದರೆ ಅಧ್ಯಕ್ಷ ಪಟ್ಟ ಬೇರೆಯವರ ಪಾಲಾದರೂ ಅಚ್ಚರಿ ಇಲ್ಲ ಎಂಬುದು ಈ ಆಪ್ತರ ಅನುಮಾನ.
ಜೆಡಿಎಸ್‌ಗೆ ನಿಖಿಲ್ ಸಾರಥಿ
ಇನ್ನು ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗುವ ಕಾಲ ಹತ್ತಿರ ಬಂದಿದೆ, ಮೂಲಗಳ ಪ್ರಕಾರ, ಉಪಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಖಿಲ್‌ಕುಮಾರಸ್ವಾಮಿ ಅವರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ.
ವಾಸ್ತವವಾಗಿ ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾದ ಸಂದರ್ಭದಲ್ಲೇ ನಿಖಿಲ್ ಅವರಿಗೆ ಪಟ್ಟ ಕಟ್ಟುವ ತೀರ್ಮಾನವಾಗಿತ್ತು.
ಆದರೆ, ಶಾಸಕರಾಗುವ ಮುನ್ನವೇ ಈ ಜಾಗಕ್ಕೆ ಅವರನ್ನು ತಂದು ಕೂರಿಸುವುದು ಸರಿಯಲ್ಲ, ಹಾಗೇನಾದರೂ ಮಾಡಿದರೆ ಪಕ್ಷದಲ್ಲಿರುವ ಕೆಲ ಹಿರಿಯ ನಾಯಕರು ಮುನಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಕುಮಾರಸ್ವಾಮಿ ಮತ್ತು ದೇವೇಗೌಡರು ಸುಮ್ಮನಾಗಿದ್ದರು.
ಆದರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆದ ನಂತರ ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಫುಲ್ಲು ನಂಬಿಕೆ ಬಂದಿದೆಯಂತೆ.
ಅರ್ಥಾತ್, ಉಪಚುನಾವಣೆಯಲ್ಲಿ ನಿಖಿಲ್ ಗೆಲ್ಲುವುದು ಪಕ್ಕಾ ಎಂಬುದು ಅವರ ನಂಬಿಕೆ, ಹೀಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟಕ್ಕೆ ಅವರನ್ನು ತಂದು ಕೂರಿಸಬಹುದು ಅಂತ ಈ ಜೋಡಿ ಭಾವಿಸಿದೆ.
ಅಂದ ಹಾಗೆ, ಈ ಮುಂಚೆ ನಿಖಿಲ್ ಅವರಿಗೆ ಪಟ್ಟ ಕಟ್ಟಿದರೆ ಅಪಸ್ವರ ಎತ್ತುವವರು ಯಾರು ಅಂತ ಊಹಿಸಿದ್ದ ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಆ ವಿಷಯದಲ್ಲಿ ಮತ್ತಷ್ಟು ಸ್ಪಷ್ಟತೆ ಬಂದಿದೆ.
ಕುತೂಹಲದ ಸಂಗತಿ ಎಂದರೆ, ಇಂತಹ ನಾಯಕರೆಲ್ಲ ಜೆಡಿಎಸ್‌ಗಿಂತ ಕಾಂಗ್ರೆಸ್ ಪಕ್ಷಕ್ಕೆ ಹತ್ತಿರದವರು ಮತ್ತು ಸದಾ ಕಾಲ ಕೈ ನಾಯಕರ ಸಂಪರ್ಕದಲ್ಲಿರುವವರು, ಇವರಿಗೆ ದೇವೇಗೌಡ, ಕುಮಾರಸ್ವಾಮಿ ಅವರಿಗಿಂತ ಕಾಂಗ್ರೆಸ್ ಪಕ್ಷದ ನಾಯಕರೇ ಆಪ್ತರು.
ಹೀಗಾಗಿ ಇಂತವರನ್ನು ಗುರುತಿಸಿರುವ ಅವರು ಉಪಚುನಾವಣೆಯ ಫಲಿತಾಂಶ ಬಂದ ನಂತರ ಪಕ್ಷದಿಂದಲೇ ಉಚ್ಚಾಟಿಸಲು ಅಣಿಯಾಗಿದ್ದಾರೆ.
ಅಲ್ಲಿಗೆ ನಿಖಿಲ್ ಪಟ್ಟಾಭಿಷೇಕಕ್ಕೂ ಮುನ್ನ ಪಕ್ಷದ ನಾಲ್ಕೈದು ಮಂದಿ ನಾಯಕರ ತಲೆದಂಡ ಆಗುವುದು ಪಕ್ಕಾ ಆದಂತಿದೆ.
ಲಾಸ್ಟ್ ಸಿಪ್
ಈ ಮಧ್ಯೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲಿ ಸಚಿವ ಜಮೀರ್ ಅಹ್ಮದ್ ಆಡಿದ ಮಾತು ಕೈ ಪಾಳಯವನ್ನು ತಲ್ಲಣಗೊಳಿಸಿದೆಯಾದರೂ ಡಿ.ಕೆ. ಬ್ರದರ್ಸ್ ಮಾತ್ರ ಯೋಗೇಶ್ವರ್ ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರಂತೆ.
ಅಂದ ಹಾಗೆ, ಚನ್ನಪಟ್ಟಣದ ಕಣಕ್ಕೆ ಮಾಜಿ ಪ್ರಧಾನಿ ದೇವೇಗೌಡರು ನುಗ್ಗಿದ ರೀತಿ ಮತ್ತು ಕುಮಾರಸ್ವಾಮಿ ಅವರನ್ನು ’ಕರಿಯ’ ಅಂತ ಜಮೀರ್ ಲೇವಡಿ ಮಾಡಿದ ವಿಷಯ ಒಕ್ಕಲಿಗ ಮತ ಬ್ಯಾಂಕಿನ ಮೇಲೆ ಪರಿಣಾಮ ಬೀರಿದ್ದು ಹೌದಾದರೂ, ಅದು ಯೋಗೇಶ್ವರ್ ಗೆಲುವಿಗೆ ಅಡ್ಡಿಯಾಗುವುದಿಲ್ಲ ಎಂಬುದು ಡಿ.ಕೆ. ಬ್ರದರ್ಸ್ ನಂಬಿಕೆ.
ಅವರ ಈ ನಂಬಿಕೆಗೆ ಕಾರಣವೂ ಇದೆ, ಅದೆಂದರೆ ಮುಸ್ಲಿಂ, ಕುರುಬ ಮತ್ತು ದಲಿತ ಮತ ಬ್ಯಾಂಕು ದೊಡ್ಡ ಮಟ್ಟದಲ್ಲಿ ಯೋಗೇಶ್ವರ್ ಪರವಾಗಿ ಕನ್‌ಸಾಲಿಡೇಟ್ ಆಗಿದೆ ಎಂಬುದು.
ಅದೇ ರೀತಿ ಒಕ್ಕಲಿಗ ಮತ ಬ್ಯಾಂಕಿನ ಮಿನಿಮಮ್ ನಲವತ್ತು ಪರ್ಸೆಂಟ್ ಷೇರು ಕಾಂಗ್ರೆಸ್‌ಗೆ ಲಭ್ಯವಾಗಿದೆ ಎಂಬುದು ಡಿ.ಕೆ. ಬ್ರದರ್ಸ್ ಲೆಕ್ಕಾಚಾರ.
ಈ ಲೆಕ್ಕಾಚಾರ ನಿಜವೇ ಆದರೆ ಯೋಗೇಶ್ವರ್ ಐದರಿಂದ ಹತ್ತು ಸಾವಿರ ಮತಗಳ ಅಂತರದಲ್ಲಿ ಗೆಲ್ಲುವುದು ಗ್ಯಾರಂಟಿ, ಆದರೆ ಒಂದು ವೇಳೆ ಈ ಲೆಕ್ಕಾಚಾರವನ್ನು ಮೀರಿ ನಿಖಿಲ್ ಕುಮಾರಸ್ವಾಮಿ ಅವರು ಗೆದ್ದರೆ ನೋ ಡೌಟ್, ಸಚಿವ ಜಮೀರ್ ಅಹ್ಮದ್ ಅವರು ಕೈ ಪಾಳಯದ ವಿಲನ್ ಪಾತ್ರಧಾರಿಯಾಗುವುದು ಗ್ಯಾರಂಟಿ.
ವಸ್ತುಸ್ಥಿತಿ ಎಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಸ್ಲಿಂ ಕೋಟಾದಡಿ ಜಮೀರ್ ಅಹ್ಮದ್ ಮತ್ತು ಎನ್.ಎ.ಹ್ಯಾರೀಸ್ ಅವರ ಪೈಕಿ ಒಬ್ಬರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಸಿದ್ದು-ಡಿಕೆಶಿ ಮಧ್ಯೆ ಜಟಾಪಟಿ ನಡೆದಿತ್ತು.
ಅವತ್ತು ಎನ್.ಎ.ಹ್ಯಾರೀಸ್ ಪರ ನಿಂತ ಡಿಕೆಶಿ, ’ಚುನಾವಣೆಯಲ್ಲಿ ಪಕ್ಷಕ್ಕಾಗಿ ಹ್ಯಾರೀಸ್ ತುಂಬ ಇನ್‌ವೆಸ್ಟ್ ಮಾಡಿದ್ದಾರೆ, ಹೀಗಾಗಿ ಅವರಿಗೇ ಮಂತ್ರಿಗಿರಿ ಸಿಗಬೇಕು ಎಂದಿದ್ದರಂತೆ.
ಆದರೆ, ಜಮೀರ್ ಅಹ್ಮದ್ ಅವರು ಮುಸ್ಲಿಂ ಮತಗಳು ಕನ್‌ಸಾಲಿಡೇಟ್ ಆಗಲು ದುಡಿದಿದ್ದಾರೆ, ಹೀಗಾಗಿ ಅವರಿಗೇ ಚಾನ್ಸು ಸಿಗಬೇಕು ಅಂತ ಸಿದ್ದು ಪಟ್ಟು ಹಿಡಿದು ಸಕ್ಸಸ್ ಆದರು.
ಆದರೆ ಚನ್ನಪಟ್ಟಣದ ಕಣದಲ್ಲೀಗ ಯೋಗೇಶ್ವರ್ ಸೋತರೆ ಜಮೀರ್ ಅವರಿಗೆ ಕಷ್ಟದ ದಿನಗಳು ಕಾದಿವೆ ಅಂತಲೇ ಅರ್ಥ.
ಆರ್.ಟಿ.ವಿಠ್ಠಲಮೂರ್ತಿ