ಬೆಂಗಳೂರು:ಬಡವರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ, ಅವರಿಗೇ ಮತ್ತೆ ನೀಡುತ್ತೇವೆ, ಅರ್ಹರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ನಮ್ಮ ಸರ್ಕಾರ ಇರುವುದೇ ಬಡವರಿಗಾಗಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಅಭಯ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರ ಕೆಲವು ಮಾನದಂಡ ನಿಗದಿಪಡಿಸಿದೆ, ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ, ಅರ್ಹರ ಕಾರ್ಡ್ ರದ್ದಾಗಿದ್ದರೆ, ಅವರಿಂದ ಮತ್ತೆ ಅರ್ಜಿ ಪಡೆದು, ಪುನಃ ಬಿಪಿಎಲ್ ಕಾರ್ಡ್‌ನ್ನೇ ನೀಡಲಾಗುವುದು ಎಂದರು.
ಬಡವರು ಗಾಬರಿಯಾಗುವ ಅಗತ್ಯವಿಲ್ಲ, ಕೆಲವು ಕಡೆ ಲೋಪವಾಗಿದ್ದು, ಸಮಸ್ಯೆಗಳನ್ನು ಪರಿಹರಿಸಲಾಗುವುದು, ದಯಮಾಡಿ ಸಹಕಾರ ನೀಡಿ, ಸರ್ಕಾರಿ ನೌಕರರು, ಸಹಕಾರಿ ಸಂಘಗಳ ಅಧಿಕಾರಿಗಳು, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್ ಹೊಂದಿರುವ ಹಿನ್ನೆಲೆಯಲ್ಲಿ ಪರಿಷ್ಕರಣೆ ಮಾಡಲಾಗುತ್ತಿದೆ.
ಮುಖ್ಯಮಂತ್ರಿ ನಿರ್ದೇಶನ
ಕಾರ್ಡ್ ನೀಡುವಾಗ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಕಾರ್ಡ್ ರದ್ದು ಮಾಡುವಾಗಲೂ ಮನೆಗಳಿಗೆ ಭೇಟಿ ನೀಡುವ ವಿಚಾರವಾಗಿ ಮುಖ್ಯಮಂತ್ರಿ ಅವರು ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಿ ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ.
ಬಿಪಿಎಲ್ ಕಾರ್ಡ್ ರದ್ದಾದವರ ಪಟ್ಟಿಯನ್ನು ಆಯಾ ಕ್ಷೇತ್ರದ ಶಾಸಕರಿಗೆ ರವಾನಿಸಲಾಗುವುದು, ಶಾಸಕರು ಒಂದು ತಂಡ ರಚಿಸಿ, ಯಾವ ಅರ್ಹರಿಗೆ ಕಾರ್ಡ್ ರದ್ದಾಗಿದೆ ಎಂಬುದನ್ನು ಪರಿಶೀಲಿಸುತ್ತಾರೆ.
ಗ್ಯಾರಂಟಿ ಅನುಷ್ಠಾನ ಸಮಿತಿ ತಂಡದವರಿಗೂ ಮನೆ ಮನೆಗೆ ತೆರಳಿ, ಯಾರಿಗಾದರೂ ಅನ್ಯಾಯ ಆಗಿದ್ದರೆ ಅದನ್ನು ಸರಿಪಡಿಸುವಂತೆ ಜವಾಬ್ದಾರಿ ನೀಡಲಾಗುವುದು.
ಸಚಿವ ಸ್ಥಾನ ಬೇಡಿಕೆ
ಕೆಲವು ಶಾಸಕರ ಸಚಿವ ಸ್ಥಾನ ಬೇಡಿಕೆ ವಿಚಾರವನ್ನು ಮುಖ್ಯಮಂತ್ರಿ ನೋಡಿಕೊಳ್ಳುವರು ಎಂದರು.
ನಂದಿನಿ ಹಾಲು ಮಾರುಕಟ್ಟೆ ವಿಸ್ತರಣೆ ಮೂಲಕ ರೈತರಿಗೆ ನೆರವು ಕಲ್ಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ, ದೆಹಲಿ ಭೇಟಿಗೂ ರಾಜಕೀಯಕ್ಕೂ ಸಂಬಂಧವಿಲ್ಲ, ನಾನೂ ಜೊತೆಯಲ್ಲಿ ತೆರಳಬೇಕಿತ್ತು, ಆದರೆ, ಮೀನುಗಾರರ ದಿನ ಕಾರ್ಯಕ್ರಮಕ್ಕಾಗಿ ಮುರುಡೇಶ್ವರಕ್ಕೆ ಭೇಟಿ ನೀಡಬೇಕಿದೆ.
ನಕ್ಸಲ್ ನಾಯಕ ವಿಕ್ರಂಗೌಡ ಎನ್‌ಕೌಂಟರ್ ಖಂಡಿಸಿ ಎಡಪಂಥೀಯರ ವಿರೋಧಕ್ಕೆ ಸಂಬಂಧಿಸಿದಂತೆ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಲಿದ್ದಾರೆ ಎಂದರು.