ಬೆಂಗಳೂರು:ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಮುಗಿಯುತ್ತಿದ್ದಂತೆ ರಾಜ್ಯ ರಾಜಕೀಯದಲ್ಲೂ ಮಹತ್ತರ ಬದಲಾವಣೆ ಆಗಲಿದೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಾದಿಯೂ ಸೇರಿದಂತೆ ಆಡಳಿತದಲ್ಲೂ ಕೆಲವು ಬದಲಾವಣೆ ಮಾಡಲು ಪಕ್ಷದ ಎಐಸಿಸಿ ವರಿಷ್ಠರು ಮುಂದಾಗಿದ್ದಾರೆ.
ಕಾರ್ಯಕರ್ತರಿಗೆ ಅಧಿಕಾರ
ಮುಖ್ಯಮಂತ್ರಿ ಈಗಾಗಲೇ ಹೇಳಿರುವಂತೆ ಮಂತ್ರಿಮಂಡಲ ವಿಸ್ತರಣೆ ಇಲ್ಲವೇ ಪುನರ್ ರಚನೆ, ಕಾರ್ಯಕರ್ತರಿಗೆ ಅಧಿಕಾರ ನೀಡುವುದಕ್ಕೂ ಚಾಲನೆ ದೊರೆಯಲಿದೆ.
ಸರ್ಕಾರ ರಚನೆ ಆದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಜೊತೆ ಅವರು ಬಯಸಿದ ಎರಡು ಪ್ರಮುಖ ಇಲಾಖೆ ಜವಾಬ್ದಾರಿ ನೀಡಿದ್ದಲ್ಲದೆ, ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲೂ ಮುಂದುವರೆಯಲು ಅವಕಾಶ ನೀಡಲಾಗಿತ್ತು.
ಲೋಕಸಭಾ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತ್ಯಜಿಸಬೇಕೆಂಬ ನಿರ್ಧಾರವಾಗಿತ್ತು.
ಶಿವಕುಮಾರ್ ಗಾದಿ
ಈ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡು ಐದು ತಿಂಗಳ ನಂತರವೂ ಶಿವಕುಮಾರ್ ಅವರೇ ಗಾದಿಯಲ್ಲಿ ಮುಂದುವರೆದಿದ್ದಾರೆ.
ಪಕ್ಷದ ವರಿಷ್ಠರಿಗೆ ಒಂದಾದ ಮೇಲೆ ಒಂದರಂತೆ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಎದುರಾಗಿದ್ದರಿಂದ ಇತ್ತ ಗಮನ ಹರಿಸಲು ಸಾಧ್ಯವಾಗಿರಲಿಲ್ಲ.
ಇದೀಗ ಕರ್ನಾಟಕದಲ್ಲಿ ಸರ್ಕಾರ ಮತ್ತಷ್ಟು ಬಿಗಿಗೊಳಿಸಿ, ಪಕ್ಷ ಸಂಘಟನೆ ದೃಷ್ಟಿಯಿಂದ ಎಐಸಿಸಿ ಕೆಲವು ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳಲು ಹೊರಟಿದೆ.
ಪಕ್ಷದ ವಿಚಾರ
ಶಿವಕುಮಾರ್, ಬೃಹತ್ ನೀರಾವರಿ ಹಾಗೂ ಬಿಬಿಎಂಪಿ ಇಲಾಖೆ ಹೊಣೆಗಾರಿಕೆ ಹೊತ್ತಿದ್ದಾರೆ, ಇವುಗಳ ಜೊತೆಗೆ ಕೆಪಿಸಿಸಿ ಗಾದಿಯಲ್ಲಿ ಮುಂದುವರೆದರೆ, ಇಲಾಖೆಗೆ ಒತ್ತು ನೀಡಲು ಸಾಧ್ಯವಿಲ್ಲ, ಮತ್ತೊಂದೆಡೆ ಪಕ್ಷದ ವಿಚಾರಗಳಿಗೂ ಗಮನ ನೀಡಲು ಆಗುವುದಿಲ್ಲ.
ಈ ಕಾರಣಕ್ಕಾಗಿ ಮತ್ತೊಂದು ಸಮುದಾಯಕ್ಕೆ ಈ ಉನ್ನತ ಹುದ್ದೆ ನೀಡಲು ವರಿಷ್ಠರು ಚಿಂತನೆ ಮಾಡಿದ್ದಾರೆ.
ಕಳೆದ ಕೆಲವು ತಿಂಗಳ ಹಿಂದೆ ಕೆಪಿಸಿಸಿ ಗಾದಿ ಪಡೆಯಲು ಕೆಲವು ಸಚಿವರೂ ಸೇರಿದಂತೆ ಪಕ್ಷ ಮುಖಂಡರು ಭಾರಿ ಕಸರತ್ತು ನಡೆಸಿದ್ದರು.
ಆದರೆ, ವರಿಷ್ಠರು ಇದಾವುದೇ ಒತ್ತಡಕ್ಕೆ ಮಣಿದಿರಲಿಲ್ಲ, ಇದೀಗ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮುಗಿದಿರುವುದರಿಂದ ಕರ್ನಾಟಕದತ್ತ ಗಮನ ಹರಿಸಿ ಕೆಲವು ರಾಜಕೀಯ ನಿರ್ಧಾರ ಕೈಗೊಳ್ಳಲಿದ್ದಾರೆ.