ಬೆಂಗಳೂರು:ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಮುಂಬೈ-ಕೊಲ್ಕತಾ-ಚೆನ್ನೈ ಸಟ್ಟಾ ಬಜಾರ್‌ನಲ್ಲಿ ಭಾರೀ ಸದ್ದು ಮಾಡಿದೆ.
ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಬಾಜಿ ಜೋರಾಗಿದೆ.
60:100 ಬೆಟ್ಟಿಂಗ್
ನಿಖಿಲ್ ಗೆಲುವು-ಸೋಲಿನ ಮೇಲೆ ಅನುಪಾತ 60:100 ರಂತೆ ಬೆಟ್ಟಿಂಗ್ ಇದೆ, ಅಂದರೆ, ನಿಖಿಲ್ ಗೆಲುವು ಸಾಧಿಸಿದರೆ, ಅವರ ಪರವಾಗಿ ಬೆಟ್ಟಿಂಗ್‌ನಲ್ಲಿ 60,000 ರೂ. ಬಾಜಿ ಕಟ್ಟಿದ್ದರೆ, ಅಂತಹವರಿಗೆ ಒಂದು ಲಕ್ಷ ರೂ. ನೀಡಲಾಗುತ್ತದೆ, ಇದೇ ರೀತಿ 60 ಲಕ್ಷ ರೂ. ಬಾಜಿ ಇದ್ದರೆ, ಗೆದ್ದವರಿಗೆ ಒಂದು ಕೋಟಿ ರೂ. ಸಿಗಲಿದೆ.
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದರೂ ಸಟ್ಟಾ ಮಾರುಕಟ್ಟೆಯಲ್ಲಿ ಚನ್ನಪಟ್ಟಣ ಫಲಿತಾಂಶ ಮಾತ್ರ ಸದ್ದು ಮಾಡುತ್ತಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸೇರಿದಂತೆ ರಾಷ್ಟ್ರದ ವಿವಿಧೆಡೆಯ ಕೆಲವು ವಿಧಾನಸಭಾ ಉಪಚುನಾವಣೆಗೆ ಮತದಾನ ಮುಗಿದಿದೆ.
ಕೆಲವು ಕ್ಷೇತ್ರಗಳಿಗೂ ಬೆಟ್ಟಿಂಗ್
ಅದರಲ್ಲಿ ಆಯ್ದ ಕೆಲವು ಕ್ಷೇತ್ರಗಳಿಗೆ ಪರ-ವಿರೋಧ ಬೆಟ್ಟಿಂಗ್ ಸಹಾ ಜೋರಾಗಿದ್ದು, ಅದರಲ್ಲಿ ಚನ್ನಪಟ್ಟಣವೂ ಸೇರಿದೆ.
ಈ ಕ್ಷೇತ್ರವನ್ನು ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧಿ ಎನ್‌ಡಿಎ ಮೈತ್ರಿಕೂಟದ ಮುಖಂಡರುಗಳು ಭಾರೀ ಪ್ರತಿಷ್ಠೆಯಾಗಿ ತೆಗೆದುಕೊಂಡು ತಮ್ಮ ಅಭ್ಯರ್ಥಿಗಳ ಪರ ಹೋರಾಟ ನಡೆಸಿದ್ದರು.
ಸ್ವತಃ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದರು.
ಎಲ್ಲ ಚುನಾವಣೆಯಲ್ಲೂ ಬಾಜಿ
ಸ್ಥಳೀಯವಾಗಿ ಕ್ಷೇತ್ರದ ಚುನಾವಣೆ ಸಮಯದಲ್ಲಿ ಭಾರೀ ಬೆಟ್ಟಿಂಗ್ ನಡೆಯುತ್ತದೆ, ಈ ಬಾರಿಯೂ ಅದು ಮುಂದುವರೆದಿದೆ.
ಕಣದಲ್ಲಿರುವ ಅಭ್ಯರ್ಥಿಯೊಬ್ಬರು ಬೆಟ್ಟಿಂಗ್‌ಗೆ ಪರೋಕ್ಷ ಪ್ರೋತ್ಸಾಹ ನೀಡುತ್ತಾರೆ, ಕಳೆದ ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆದಿತ್ತು.