ಬೆಂಗಳೂರು:ಜಾಗತಿಕ ಆರ್ಥಿಕ ಶಕ್ತಿಯಾಗುವ ದಿಕ್ಕಿನಲ್ಲಿ ದಾಪುಗಾಲು ಇಟ್ಟಿರುವ ಭಾರತದ ಪ್ರಗತಿಯಲ್ಲಿ ಉಕ್ಕು ಉದ್ಯಮ ಮಹತ್ತರ ಪಾತ್ರ ನಿರ್ವಹಿಸುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ಭಾರತೀಯ ಲೋಹ ಸಂಸ್ಥೆಯ ಲೋಹಶಾಸ್ತ್ರಜ್ಞ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಜಗತ್ತಿನ 6ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, 5ನೇ ಸ್ಥಾನಕ್ಕೇರುವಲ್ಲಿ ಉಕ್ಕು ಉದ್ಯಮ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದರು.
ಎಲ್ಲ ಅಗತ್ಯ ಉಪಕ್ರಮ
ಭಾರತ 5 ಟ್ರಿಲಿಯನ್ ಆರ್ಥಿಕ ಶಕ್ತಿಯಾಗುವಲ್ಲಿ ಉಕ್ಕು ಕ್ಷೇತ್ರ ನಿರ್ಣಾಯಕ ಪಾತ್ರ ವಹಿಸುತ್ತಿದೆ, ಉದ್ಯಮಕ್ಕೆ ರಾಷ್ಟ್ರೀಯ ಉಕ್ಕು ನೀತಿ ಬಲ ನೀಡುತ್ತಿದೆ, ಸ್ಪೆಷಾಲಿಟಿ ಸ್ಟೀಲ್ ಹಾಗೂ ಗ್ರೀನ್ ಸ್ಟೀಲ್ ತಯಾರಿಕೆಯಲ್ಲಿ ಮುಂಚೂಣಿಗೆ ಬರುವಲ್ಲಿ ಎಲ್ಲ ಅಗತ್ಯ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.
ಉತ್ಪಾದನಾ ಸಂಪರ್ಕ ಉಪಕ್ರಮ ಸೇರಿದಂತೆ ಹಲವು ಪರಿಣಾಮಕಾರಿ ಕಾರ್ಯಕ್ರಮ ಜಾರಿ ಮಾಡಲಾಗಿದೆ, ಭಾರತದ ಉಕ್ಕು ಉದ್ಯಮ ಸಶಕ್ತವಾಗಿ ಹೊರಹೊಮ್ಮುತ್ತಿದೆ, ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ.
ಸಂಶೋಧನೆಗೆ ಪ್ರಾಮುಖ್ಯತೆ
ಉಕ್ಕು ಕ್ಷೇತ್ರದ ಸುಸ್ಥಿರ ಹಾಗೂ ಚಲನಶೀಲ ಅಭಿವೃದ್ಧಿಗೆ ಕೇಂದ್ರ ಬದ್ಧವಾಗಿದ್ದು, ನಿರ್ದಿಷ್ಟ ಪೂರಕ ಕಾರ್ಯಸೂಚಿ ಮೇರೆಗೆ ಕೆಲಸ ಮಾಡುತ್ತಿದೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ಜೊತೆಗೆ ಉಕ್ಕು ಉತ್ಪಾದನೆ ಪ್ರಕ್ರಿಯೆಯಲ್ಲಿನ ವಾಯುಮಾಲಿನ್ಯವನ್ನು ಶೂನ್ಯ ಮಟ್ಟಕ್ಕೆ ತರುವ ಗುರಿ ಹೊಂದಿದ್ದು, ಗುರಿ ಸಾಧನೆ ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಜಾಗತಿಕ ಪರಿಸರ ಸಮತೋಲನ ಹಿನ್ನೆಲೆಯಲ್ಲಿ ಸುಸ್ಥಿರ ಉಕ್ಕು ಉತ್ಪಾದನೆಗೆ ಹೈಡ್ರೋಜನ್ ಆಧಾರಿತ ತಯಾರಿಕೆ ಮತ್ತು ಮರುಬಳಕೆ ಉತ್ತೇಜಿಸಲಾಗುತ್ತಿದೆ ಎಂದರು.