ಬೆಂಗಳೂರು:ರದ್ದಾದ ಅರ್ಹರ ಬಿಪಿಎಲ್ ಪಡಿತರ ಚೀಟಿ ಹಿಂತಿರುಗಿಸುವಂತೆ ಸರ್ಕಾರ ಆದೇಶಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಬಡತನ ರೇಖೆಗಿಂತ ಕೆಳಗಿನ ಕುಟುಂಬದವರ ಬಿಪಿಎಲ್ ಚೀಟಿಯನ್ನು ಎಪಿಎಲ್‌ಗೆ ಪರಿವರ್ತಿಸಿದ್ದರೆ, ಅಂತಹ ಕಾರ್ಡ್‌ಗಳನ್ನು ಪುನರ್ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪಡಿತರ ಚೀಟಿ ನೀಡಿಕೆ ಮಾನದಂಡದ ಅನ್ವಯ ಪರಿಶೀಲನೆ ವೇಳೆ ಅನರ್ಹವೆಂದು ಕಂಡುಬಂದ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ.
ಪತ್ತೆ ಹಚ್ಚಿ ಎಪಿಎಲ್‌ಗೆ ಪರಿವರ್ತನೆ
ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರೂ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿದ್ದರು, ಅಂತಹವರನ್ನು ಪತ್ತೆ ಹಚ್ಚಿ ಎಪಿಎಲ್‌ಗೆ ಪರಿವರ್ತಿಸಲಾಗಿದೆ.
ಇಂತಹ ಸಂದರ್ಭದಲ್ಲಿ ಅರ್ಹರ ಬಿಪಿಎಲ್ ಚೀಟಿ ಪರಿವರ್ತನೆಗೊಂಡಿದ್ದರೆ, ಅಂತಹವರಿಗೆ ಮತ್ತೆ ಬಿಪಿಎಲ್ ಚೀಟಿಗಳನ್ನು ತ್ವರಿತವಾಗಿ ವಿತರಿಸಲಾಗುವುದು.
2011ರ ಜನಗಣತಿ ಪ್ರಕಾರ ಕರ್ನಾಟಕ ನಗರ ಮತ್ತು ಗ್ರಾಮೀಣ ಜನಸಂಖ್ಯೆ ಸೇರಿ ಶೇಕಡ 65.96ರಷ್ಟು ಬಿಪಿಎಲ್ ಕಾರ್ಡ್‌ಗಳು ವಿತರಣೆಯಾಗಿವೆ.
ಎಚ್‌ಆರ್‌ಎಂಎಸ್ ತಂತ್ರಾಂಶ
ಇದರಲ್ಲಿ ಅನರ್ಹರು ದೊಡ್ಡ ಪ್ರಮಾಣದಲ್ಲಿ ಬಿಪಿಎಲ್ ಚೀಟಿಗಳನ್ನು ಪಡೆದಿರುವುದು ನಮ್ಮ ಎಚ್‌ಆರ್‌ಎಂಎಸ್ ತಂತ್ರಾಂಶದಿಂದ ತಿಳಿದು ಬಂದಿದೆ.
ಇದೇ ಮಾನದಂಡವನ್ನು ಆಧಾರವಾಗಿಟ್ಟುಕೊಂಡು ನಾವು ಅನರ್ಹರ ಕಾರ್ಡ್‌ಗಳನ್ನು ಪರಿವರ್ತನೆ ಮಾಡುತ್ತಿದ್ದೇವೆ.
ಕೇಂದ್ರ ಸರ್ಕಾರ ಕೂಡ ಕರ್ನಾಟಕದಲ್ಲಿ ಆದಾಯ ಮಿತಿ ಹೆಚ್ಚಿದೆ, ಇಷ್ಟಾದರೂ ನೀವು ಬಿಪಿಎಲ್ ಕಾರ್ಡ್‌ಗಳನ್ನು ಯಥೇಚ್ಛವಾಗಿ ನೀಡಿದ್ದು, ಅದನ್ನು ಪುನರ್ ಪರಿಶೀಲಿಸಬೇಕು ಮತ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.
ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಗಿಂದಾಗ್ಯೆ ಪತ್ರ ಬರೆದು ಎಚ್ಚರಿಸುತ್ತಿದೆ, ನಾವು ಈ ಎಲ್ಲಾ ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ಅನರ್ಹರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿರುವುದಾಗಿ ತಿಳಿಸಿದರು.