ಬೆಂಗಳೂರು:ಪ್ರಭಾವೀ ರಾಜಕಾರಣಿಗಳ ಕುಟುಂಬಗಳವರು ಕಣದಲ್ಲಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.
ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆದಿದ್ದು, ನಾಳೆ ಈ ಕ್ಷೇತ್ರಗಳ ಮತಎಣಿಕೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ.
ನಾಳೆ ಮಧ್ಯಾನ್ಹ ಫಲಿತಾಂಶ
ನಾಳೆ ಮಧ್ಯಾನ್ಹದ ವೇಳೆಗೆ ಮೂರು ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದ್ದು, ಕಣದಲ್ಲಿರುವ ಒಟ್ಟು 45 ಅಭ್ಯರ್ಥಿಗಳ ರಾಜಕೀಯ ಹಣೆಬರಹ ನಿರ್ಧಾರವಾಗಲಿದೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಇ.ತುಕಾರಾಂ ಅವರು ಲೋಕಸಭೆಗೆ ಆಯ್ಕೆಗೊಂಡಿದ್ದರಿಂದ ಈ ಕ್ಷೇತ್ರಗಳು ತೆರವಾಗಿದ್ದವು.
ತಮ್ಮಿಂದ ತೆರವಾದ ಕ್ಷೇತ್ರಗಳಲ್ಲಿ ಮೂರೂ ಮಂದಿಯೂ ವಿವಿಧ ಪಕ್ಷಗಳಿಂದ ತಮ್ಮ ಕುಟುಂಬದವರನ್ನೇ ಕಣಕ್ಕಿಳಿಸಿದ್ದಾರೆ.
ಚನ್ನಪಟ್ಟಣ ಕಣ
ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಎನ್‌ಡಿಎ ಅಭ್ಯರ್ಥಿಯಾಗಿ ಚನ್ನಪಟ್ಟಣದಲ್ಲಿ ಕಣಕ್ಕಿಳಿಸಿದ್ದರೆ, ಅವರ ಪ್ರತಿಸ್ಪರ್ಧಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸಿ.ಪಿ.ಯೋಗೇಶ್ವರ್ ಕಣದಲ್ಲಿದ್ದಾರೆ.
ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಿದ್ದರೆ, ಸಂಡೂರಿನಲ್ಲಿ ತಮ್ಮ ಪತ್ನಿ ಅನ್ನಪೂರ್ಣ ಅವರನ್ನು ಕಣಕ್ಕಿಳಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಚುನಾವಣೆ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಮತ್ತು ಎನ್‌ಡಿಎ ತಮ್ಮ ವಿರೋಧಿಗಳನ್ನು ಮಣಿಸಲು ಉಪಚುನಾವಣೆಯನ್ನು ಅಸ್ತ್ರವಾಗಿ ಬಳಕೆ ಮಾಡಿಕೊಂಡಿವೆ.
ರಾಜಕೀಯ ಪಕ್ಷಗಳ ಪ್ರತಿಷ್ಠೆ
ರಾಜಕೀಯ ಪಕ್ಷಗಳ ಪ್ರತಿಷ್ಠೆಗೆ ಇಲ್ಲಿನ ಮತದಾರರೂ ಸ್ಪಂದಿಸಿ, ಶೇಕಡ 88ಕ್ಕೂ ಹೆಚ್ಚು ದಾಖಲೆ ಮಾತದಾನ ಮಾಡಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಚುನಾವಣೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಮತದಾನವಾಗಿದೆ.
ಕಾಂಗ್ರೆಸ್ ಹಾಗೂ ಎನ್‌ಡಿಎ ಅಭ್ಯರ್ಥಿ ಇಬ್ಬರೂ ಗೆಲುವು ತಮ್ಮದು ಎನ್ನುತ್ತಿದ್ದಾರೆ, ಆದರೆ, ಮತದಾರ ಪ್ರಭುಗಳು ಯಾರಿಗೆ ವಿಜಯಮಾಲೆ ಹಾಕುತ್ತಾರೆ ಎಂಬುದು ನಾಳೆ ಸ್ಪಷ್ಟವಾಗಲಿದೆ.
ಅತ್ಯಂತ ಬಿಗಿ ಬಂದೋಬಸ್ತ್‌ನಲ್ಲಿ ಮತಎಣಿಕೆ ನಡೆಯಲಿದ್ದು, ನಾಳೆ ಬೆಳಗ್ಗೆ 6-45ಕ್ಕೆ ಸ್ಟ್ರಾಂಗ್ ರೂಂ ತೆರೆದು ಮತಯಂತ್ರಗಳನ್ನು ಎಣಿಕೆ ಸ್ಥಳಕ್ಕೆ ರವಾನಿಸಲಿದ್ದು, ಎಣಿಕೆ ಕಾರ್ಯ 8 ಗಂಟೆಗೆ ಆರಂಭವಾಗಿ ಮಧ್ಯಾನ್ಹದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.