ಬೆಂಗಳೂರು:ರಾಜ್ಯದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಭರ್ಜರಿ ಜಯಗಳಿಸಿದರೆ, ಎನ್‌ಡಿಎ ಕೂಟ ಭಾರಿ ಮುಖಭಂಗಕ್ಕೆ ಒಳಗಾಗಿದೆ.
ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಭಾರೀ ಅಂತರದಲ್ಲಿ ಸೋಲುಂಡಿದ್ದಾರೆ.
ನಿಖಿಲ್ ಪರಾಭವ
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣದಲ್ಲಿ ತಮ್ಮ ಪ್ರತಿಸ್ಪರ್ಧಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರನ್ನು 25,413 ಮತಗಳ ಅಂತರದಿಂದ ಪರಾಭವಗೊಳಿಸಿ ಆರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.
ಯೋಗೇಶ್ವರ್ ಅವರಿಗೆ 1,12,642 ಮತಗಳು, ಪ್ರತಿಸ್ಪರ್ಧಿ ನಿಖಿಲ್ ಕುಮಾರಸ್ವಾಮಿಗೆ 87,229 ಮತ ಚಲಾವಣೆಯಾಗಿವೆ.
ಸಂಡೂರಿನಲ್ಲಿ ಕಾಂಗ್ರೆಸ್‌ನ ಇ.ಅನ್ನಪೂರ್ಣ 93,616 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಬಂಗಾರು ಹನುಮಂತು ಅವರನ್ನು 9,649 ಮತಗಳಿಂದ ಸೋಲಿಸಿದ್ದಾರೆ. ಹನುಮಂತು ಅವರಿಗೆ 83,967 ಮತಗಳು ಲಭಿಸಿವೆ.
ಪಠಾಣ್ ವಿಧಾನಸಭೆಗೆ
ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ನ ಯಾಸಿರ್ ಖಾನ್ ಪಠಾಣ್ 1,00756 ಮತ ಪಡೆದು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಭರತ್ ಬೊಮ್ಮಾಯಿ ಅವರನ್ನು 13,448 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಭರತ್ ಅವರಿಗೆ 87,308 ಮತ ಲಭ್ಯವಾಗಿವೆ.
ಉಪಚುನಾವಣೆ ಫಲಿತಾಂಶದಿಂದ ವಿಧಾನಸಭೆಯಲ್ಲಿ 136 ಸ್ಥಾನದಲ್ಲಿದ್ದ ಕಾಂಗ್ರೆಸ್ ತನ್ನ ಸಂಖ್ಯಾಬಲವನ್ನು 138ಕ್ಕೆ ಹೆಚ್ಚಿಸಿಕೊಂಡಿದೆ, ಬಿಜೆಪಿ-ಜೆಡಿಎಸ್ ತಲಾ ಒಂದೊಂದು ಸ್ಥಾನ ಕಳೆದುಕೊಂಡಿವೆ.
ಮಾಜಿ ಮುಖ್ಯಮಂತ್ರಿಗಳು ವಿಫಲ
ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮಿಂದ ತೆರವಾದ ಸ್ಥಾನಗಳಿಗೆ ಪುತ್ರರನ್ನು ಕಣಕ್ಕಿಳಿಸಿ, ವಿಧಾನಸಭೆಗೆ ಪ್ರವೇಶ ಮಾಡಿಸುವಲ್ಲಿ ವಿಫಲರಾಗಿದ್ದಾರೆ.
ಸಿ.ಪಿ.ಯೋಗೇಶ್ವರ್ ಆರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರೆ, ಯಾಸಿರ್ ಹಾಗೂ ಅನ್ನಪೂರ್ಣ ಅವರು ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿಗೆ ಸತತ ಮೂರನೇ ಬಾರಿಗೆ ಸೋಲು ಕಂಡಿದ್ದು, ಈ ಮೊದಲು ಮಂಡ್ಯ ಲೋಕಸಭಾ ಕಣದಲ್ಲಿ, ನಂತರ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲನುಭಸಿದ್ದರು, ಇದೀಗ ಚನ್ನಪಟ್ಟಣದಲ್ಲೂ ಅವರು ಪರಾಭವಗೊಂಡಿದ್ದಾರೆ.
ಪ್ರತಿಷ್ಠೆ ಹೋರಾಟ
ಉಪಚುನಾವಣೆಯನ್ನು ಆಡಳಿತಾರೂಢ ಕಾಂಗ್ರೆಸ್ ಹಾಗೂ ಎನ್‌ಡಿಎ ಮೈತ್ರಿಕೂಟ ಭಾರೀ ಪ್ರತಿಷ್ಠೆಯಾಗಿ ತೆಗೆದುಕೊಂಡು ಹೋರಾಟ ನಡೆಸಿದ್ದವು.
ಉಪಚುನಾವಣಾ ಸಂದರ್ಭದಲ್ಲೇ ವಕ್ಫ್ ವಿವಾದ, ಬಿಪಿಎಲ್ ಕಾರ್ಡ್ ರದ್ದತಿ ಹಾಗೂ ಶಕ್ತಿ ಯೋಜನೆ ಹಿಂಪಡೆಯುವ ವಿಚಾರಗಳನ್ನು ಎನ್‌ಡಿಎ ಮೈತ್ರಿಕೂಟ ಮುಂದಿಟ್ಟಕೊಂಡು ಹೋರಾಟ ನಡೆಸಿದರೂ ಮತದಾರರು ಮೈತ್ರಿಕೂಟ ಅಭ್ಯರ್ಥಿಗಳ ಕೈಹಿಡಿಯಲಿಲ್ಲ.
ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಚುನಾವಣಾ ಪೂರ್ವ ಸಿದ್ಧತೆ ಹಾಗೂ ಕಾರ್ಯತಂತ್ರ ಕೈಹಿಡಿಯಿತು.