ಬೆಂಗಳೂರು:ವಿಧಾನಸಭಾ ಉಪಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಜೆಡಿಎಸ್ ಅನ್ನು ಒಡೆಯಲು ಕಾಂಗ್ರೆಸ್ ಮುಂದಾಗಿದೆ.
ಜೆಡಿಎಸ್‌ನ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಹಾಲಿ ಶಾಸಕ ಜಿ.ಟಿ.ದೇವೇಗೌಡರ ನಾಯಕತ್ವದಲ್ಲೇ ಪಕ್ಷ ಮತ್ತು ಶಾಸಕರನ್ನು ಒಡೆಯಲು ವೇದಿಕೆ ಸಿದ್ಧಗೊಂಡಿದೆ.
ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ಪಕ್ಷದ ವಿರುದ್ಧ ತಿರುಗಿಬಿದ್ದು ಸಿದ್ದರಾಮಯ್ಯ ಪರ ನಿಲ್ಲುತ್ತಿರುವ ಈ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ಆದರೆ, ಪ್ರತ್ಯೇಕ ಬಣವಾಗಿ ಗುರುತಿಸಿಕೊಂಡು ತಮ್ಮದೇ ನೈಜ ಜೆಡಿಎಸ್ ಎಂದು ಬಿಂಬಿಸಿಕೊಳ್ಳಲಿದ್ದಾರೆ.
ಸಿದ್ದರಾಮಯ್ಯ ಭೇಟಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೆರೆಮರೆಯಲ್ಲಿ ಜೆಡಿಎಸ್‌ನ ಕೆಲವು ಶಾಸಕರು ಮತ್ತು ಮುಖಂಡರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಜೆಡಿಎಸ್ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆದುಕೊಳ್ಳುವ ಉದ್ದೇಶದಿಂದಲೇ ಮುಖ್ಯಮಂತ್ರಿಗಳ ಅಭಿಮಾನಿಗಳ ಹೆಸರಿನಲ್ಲಿ ಡಿಸೆಂಬರ್ 5ರಂದು ಹಾಸನದಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದಾರೆ.
ಇದಕ್ಕೂ ಮುನ್ನ ತುಮಕೂರಿನಲ್ಲಿ ಸರ್ಕಾರದ ವತಿಯಿಂದ ಡಿಸೆಂಬರ್ 2ರಂದು ಸಾಧನಾ ಸಮಾವೇಶವನ್ನು ಮುಖ್ಯಮಂತ್ರಿಯವರೇ ಆಯೋಜಿಸಿದ್ದಾರೆ.
ಸಾಧನಾ ಸಮಾವೇಶ
ಗೃಹ ಇಲಾಖೆ ಹೊಣೆ ಹೊತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಸಾಧನಾ ಸಮಾವೇಶ ನಡೆಸಲು ಭಾರೀ ಸಿದ್ಧತೆ ಮಾಡಿಕೊಂಡಿದ್ದಾರೆ.
ಸರ್ಕಾರಿ ಸಮಾವೇಶದಲ್ಲೇ ಜಿ.ಟಿ.ದೇವೇಗೌಡ ಸೇರಿದಂತೆ ಕೆಲವು ಜೆಡಿಎಸ್ ಶಾಸಕರು ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.
ಆ ನಂತರ, ಹಾಸನದಲ್ಲಿ ನಡೆಯುವ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ಟೀಕಾಸ್ತ್ರಗಳನ್ನು ಸಿಡಿಸಿ, ಕೋಮುವಾದಿ ಪಕ್ಷದ ಜೊತೆ ಜೆಡಿಎಸ್ ಕೈಜೋಡಿಸಿದ್ದು ಇದನ್ನು ವಿರೋಧಿಸಿ ಆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೊರಬನ್ನಿ ಎಂದು ಸಾರ್ವಜನಿಕವಾಗಿ ಕರೆ ನೀಡಲಿದ್ದಾರಂತೆ.
ದೇವೇಗೌಡರ ಟೀಕೆ
ಚನ್ನಪಟ್ಟಣ ವಿಧಾನಸಭಾ ಉಪಚುನಾವಣಾ ಪ್ರಚಾರ ಸಂದರ್ಭದಲ್ಲಿ ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ಮಾಡಿದ ಟೀಕೆ ಮತ್ತು ಈ ಸರ್ಕಾರವನ್ನು ಕಿತ್ತೊಗೆಯುವವರೆಗೂ ವಿಶ್ರಮಿಸುವುದಿಲ್ಲ ಎಂಬ ಹೇಳಿಕೆ ಮುಖ್ಯಮಂತ್ರಿ ಅವರ ನಿದ್ದೆಗೆಡಿಸಿದೆ.
ಅವರ ಹೇಳಿಕೆಯನ್ನೇ ಸವಾಲಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ, ಗೌಡರ ನೆಲದಲ್ಲೇ ಅವರಿಗೆ ಉತ್ತರ ನೀಡುವುದಲ್ಲದೆ, ಆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ವೇದಿಕೆ ಸಿದ್ಧಪಡಿಸಲಿದ್ದಾರೆ.
ಹಾಸನ ಸಮಾವೇಶದ ನಂತರ, ಜೆಡಿಎಸ್ ಬಲಿಷ್ಠವಾಗಿರುವ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಇಂತಹ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿದ್ದಾರೆ.
ಜಯಭೇರಿ ಸಮಾವೇಶ
ಇದಕ್ಕೂ ಮೊದಲು ಚನ್ನಪಟ್ಟಣ ಸೇರಿದಂತೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸಮಾವೇಶಗಳು ನಡೆಯಲಿವೆ.
ಮುಡಾ ಹಾಗೂ ಮಹರ್ಷಿ ವಾಲ್ಮೀಕಿ ಹಗರಣವನ್ನು ಮುಂದಿಟ್ಟುಕೊಂಡು ತಮ್ಮ ಕುಟುಂಬದ ತೇಜೋವಧೆ ಮಾಡುತ್ತಿರುವುದಲ್ಲದೆ, ಸರ್ಕಾರ ಉರುಳಿಸಲು ಹೊರಟಿರುವ ಎನ್‌ಡಿಎ ಮೈತ್ರಿ ಪಕ್ಷಗಳಿಗೆ ಈ ಸಮಾವೇಶಗಳಲ್ಲಿ ಎಚ್ಚರಿಕೆ ನೀಡುವುದೂ ಸೇರಿದೆ.
ಉಪಚುನಾವಣೆಯಲ್ಲಿ ಸರ್ಕಾರಕ್ಕೆ ಜನರ ಬೆಂಬಲ ದೊರೆತಿರುವುದರಿಂದ ಮುಖ್ಯಮಂತ್ರಿ ಅವರು ಇದೀಗ ಸಾರ್ವಜನಿಕವಾಗಿ ಹೋರಾಟಕ್ಕಿಳಿಯುತ್ತಿದ್ದಾರೆ.