ಬೆಂಗಳೂರು:ಸ್ವಾತಂತ್ರ್ಯ ಬಂದಾಗಿನಿಂದ ದೇಶದ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ಅನೇಕ ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿತಲ್ಲದೆ, ಸಂವಿಧಾನ ದುರುಪಯೋಗ ಪಡಿಸಿಕೊಂಡು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಹೇಯ ಕೃತ್ಯ ನಡೆಸಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದಿಲ್ಲಿ ಟೀಕಿಸಿದ್ದಾರೆ.
ಸಂವಿಧಾನ ಸನ್ಮಾನ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ನ ಈ ದುಷ್ಕೃತ್ಯವನ್ನು ದೇಶದ ಜನ ಮರೆತಿಲ್ಲ, ಈ ಹಿಂದೆ ಕಾನೂನು ದಿನವನ್ನಾಗಿ ಆಚರಿಸಲಾಗುತ್ತಿತ್ತು, ಸಂವಿಧಾನ ಸಮರ್ಪಣಾ ದಿನವಾಗಿ ಆಚರಿಸುವ ಅಭಿಲಾಷೆ ಪ್ರಧಾನಿ ನರೇಂದ್ರ ಮೋದಿ ಅವರದು ಎಂದರು.
ಕಾಂಗ್ರೆಸ್ಸಿಗರಿಂದ ಕಪಟ ನಾಟಕ
ಇಂದಿನಿಂದ ಜನವರಿ 26ರವರೆಗೆ 2 ತಿಂಗಳು ದೇಶಾದ್ಯಂತ ಸಂವಿಧಾನ ಸನ್ಮಾನ ಅಭಿಯಾನ ಆಚರಿಸಲಾಗುತ್ತಿದೆ, ಸಂವಿಧಾನ ಒಂದು ಧರ್ಮಗ್ರಂಥ, ಸಂವಿಧಾನಕ್ಕೆ ಅವಹೇಳನ ಮಾಡಿದ ಕಾಂಗ್ರೆಸ್ಸಿಗರು ಇತಿಹಾಸ ಮರೆಮಾಚುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ಹಲವು ದಶಕಗಳಿಂದ ಸಂವಿಧಾನದ ರಕ್ಷಕರು, ಸಂವಿಧಾನ ಪ್ರತಿಪಾದಕರೆಂಬ ಕಪಟ ನಾಟಕ ಆಡುತ್ತಾ ಬಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದೆ, ಸಂವಿಧಾನಕ್ಕೆ ಗೌರವ ತರುವ ದೇಶದ ಪ್ರತಿಯೊಬ್ಬ ಪ್ರಜೆ ಗೌರವದಿಂದ ಕಾಣುವ ಮತ್ತು ಪಾಲಿಸುವಂತೆ ಮಾಡುವಲ್ಲಿ ಬಿಜೆಪಿ ಶ್ರಮವಹಿಸಿದೆ, ಈ ಆಚರಣೆ ಕೇವಲ ನವೆಂಬರ್ 26ಕ್ಕೆ ಸೀಮಿತವಾಗಬಾರದು.
ಡಾ.ಅಂಬೇಡ್ಕರ್ ಅವರ ಪರಿಶ್ರಮ, ಬೆವರಿನ ಫಲಶ್ರುತಿಯ ಫಲವಾಗಿ ಸಮಾನತೆ, ಸ್ವಾವಲಂಬನೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನದ ಮೂಲಕ ಕೊಡಲಾಗಿದೆ, ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಧರ್ಮಗ್ರಂಥ ಇದ್ದಂತೆ.
ಸಂವಿಧಾನ ರಕ್ಷಿಸುವ ಕರ್ತವ್ಯ
ನಮ್ಮೆಲ್ಲರ ನೇತೃತ್ವದಲ್ಲಿ ಸಂವಿಧಾನಕ್ಕೆ ಗೌರವ ಕೊಡುವ ಕೆಲಸ ಆಗಬೇಕಿದೆ, ಸಂವಿಧಾನ ರಕ್ಷಿಸುವ ಕರ್ತವ್ಯ ಪ್ರತಿಯೊಬ್ಬ ಭಾರತೀಯರದು ಎಂದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸ್ವಾತಂತ್ರ್ಯಾನಂತರದಲ್ಲಿ ಸಂವಿಧಾನ ರಚನೆ ದೊಡ್ಡ ಸವಾಲಾಗಿತ್ತು, ಸಂವಿಧಾನ ಸಮಿತಿ ಎಲ್ಲ ಆಯಾಮಗಳಲ್ಲಿ ಚರ್ಚೆ ನಡೆಸಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮಾನವೀಯ ತತ್ವಗಳನ್ನು ಸೇರಿಸಿದ್ದರಿಂದ ನಮ್ಮ ಸಂವಿಧಾನ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಎನಿಸಿದೆ ಎಂದರು.
ವಿಧಾನಪರಿಷತ್ನಲ್ಲಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸರ್ವರಿಗೂ ಸಮಾನ ಅವಕಾಶ ನೀಡುವ ಸಂವಿಧಾನವನ್ನು ಡಾ.ಅಂಬೇಡ್ಕರ್ ನೀಡಿದ್ದು, ಸಾರ್ವಕಾಲಿಕ, ಸದಾ ಪ್ರಸ್ತುತ, ಸಂವಿಧಾನ ಕುರಿತು ಅಪಸ್ವರ ಬರಬಾರದು ಎಂದರು.