ಬಿಜೆಪಿ ವರಿಷ್ಠರಿಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ
ಬೆಂಗಳೂರು:ಪಕ್ಷದ ತೀರ್ಮಾನ ವಿರೋಧಿಸಿ ಹೋರಾಟ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಂಡದ ವಿರುದ್ಧ ಕ್ರಮ ಜರುಗಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವರಿಷ್ಠರಿಗೆ ಮನವಿ ಮಾಡಿದ್ದಾರೆ.
ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ರಾಧಾಮೋಹನ್ ದಾಸ್ ಅವರಿಗೆ ಈ ನಾಯಕರ ನಡವಳಿಕೆ, ವರ್ತನೆ, ಹೇಳಿಕೆಗಳು ಹಾಗೂ ವಕ್ಫ್ ವಿಚಾರದಲ್ಲಿ ಪ್ರತ್ಯೇಕ ಪಾದಯಾತ್ರೆ ಕೈಗೊಂಡಿರುವುದರ ವಿರುದ್ಧ ಕಿಡಿ ಕಾರಿ ಪಕ್ಷದ ಶಿಸ್ತು ಉಳಿಸುವಂತೆ ಕೋರಿದ್ದಾರೆ.
ಎಲ್ಲೆ ಮೀರದ ವ್ಯವಸ್ಥೆ
ಇದೇ ವೇಳೆ ಕಾರ್ಯಕರ್ತರಿಗೆ ಎರಡು ಪುಟಗಳ ಪತ್ರ ಬರೆದು, ಪಕ್ಷದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶವಿದೆ, ಅದೇ ರೀತಿ ಶಿಸ್ತು, ಸಂಯಮಗಳು ಎಲ್ಲೆ ಮೀರದಂತೆ ನೋಡಿಕೊಳ್ಳುವ ವ್ಯವಸ್ಥೆಯೂ ನಮ್ಮಲ್ಲಿದೆ ಎಂದಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ತಂಡದ ಬಗ್ಗೆ ಹೆಸರು ಪ್ರಸ್ತಾಪಿಸದೆ, ಪಕ್ಷದ ಸಂಘಟನೆಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ, ಒಗ್ಗಟ್ಟಿನಿಂದ ಹೊರಗೆ ಕೆಲಸ ಮಾಡುವವರಿಗೆ ಸಹಕಾರ ಬೇಡ.
ಉಪಚುನಾವಣೆ ಫಲಿತಾಂಶಗಳು ಪಕ್ಷ ಸಂಘಟನೆ, ಸಾಮರ್ಥ್ಯ ಹಾಗೂ ಪ್ರಭಾವ ಬಿಂಬಿಸುವ ಅಳತೆಗೋಲಾಗಿರುವುದಿಲ್ಲ.
ಚುನಾವಣಾ ಫಲಿತಾಂಶ
ಸ್ಥಳೀಯ ಸಮಸ್ಯೆಗಳು ಹಾಗೂ ಸರ್ಕಾರದ ಪ್ರಭಾವವನ್ನು ಆಧರಿಸಿ ಚುನಾವಣಾ ಫಲಿತಾಂಶಗಳು ಹೊರಹೊಮ್ಮುತ್ತವೆ.
ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಪರಾಜಯಗೊಂಡ ಕಾರಣದಿಂದ ನಾವ್ಯಾರೂ ಎದೆಗುಂದಬೇಕಿಲ್ಲ.
ನಿರೀಕ್ಷೆಯಂತೆ ಆಡಳಿತ ಪಕ್ಷ ಕಾಂಗ್ರೆಸ್ ಅಧಿಕಾರ ದುರುಪಯೋಗ, ಆಮಿಷಗಳು ಮತದಾರರ ದಿಕ್ಕು ತಪ್ಪಿಸುವಲ್ಲಿ ಪರಿಣಾಮ ಬೀರಿವೆ ಎಂಬುದು ನಿಸ್ಸಂಶಯ.
ಸಕಾರಾತ್ಮಕವಾಗಿ ಸ್ವೀಕರಿಸೋಣ
ಉಪಚುನಾವಣೆ ಸೋಲನ್ನು ನಾವು ಸಕಾರಾತ್ಮಕವಾಗಿ ಸ್ವೀಕರಿಸೋಣ, ಈ ಫಲಿತಾಂಶ ಭವಿಷ್ಯತ್ತಿನಲ್ಲಿ ನಮ್ಮ ಮುಂದಿರುವ ಸವಾಲುಗಳನ್ನು ಎಚ್ಚರಿಸುವ ಸಂಕೇತವೇ ಆಗಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ಹಿಂದೆ ಸಿದ್ದರಾಮಯ್ಯ ಆಡಳಿತದಲ್ಲಿ ನಂಜನಗೂಡು ಹಾಗೂ ಗುಂಡ್ಲುಪೇಟೆಗೆ ನಡೆದ ಉಪಚುನಾಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತ್ತು, ಆ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದನ್ನು ನೋಡಿದ್ದೇವೆ.
ಅಧಿಕಾರಕ್ಕಾಗಿ ಬೆನ್ನತ್ತಿ ರಾಜಕಾರಣ ಮಾಡುವ ಪಕ್ಷ ನಮ್ಮದಲ್ಲ, ಉದಾತ್ತ ಉದ್ದೇಶ ಹಾಗೂ ಗುರಿ ಇಟ್ಟುಕೊಂಡು, ಯೋಜಿತವಾಗಿ ಬೆಳೆದು, ಕೋಟ್ಯಂತರ ಸಮರ್ಪಣಾ ಕಾರ್ಯಕರ್ತರನ್ನು ರಾಷ್ಟ್ರ ಬದ್ಧತೆಗಾಗಿ ಸಜ್ಜುಗೊಳಿಸಿದ ಪಕ್ಷ.
ಸಿದ್ದರಾಮಯ್ಯ ಸರ್ಕಾರ ಹಲವು ಭ್ರಷ್ಟಾಚಾರದಲ್ಲಿ ಮುಳುಗಿ ಆಡಳಿತ ನಡೆಸುತ್ತಿದೆ, ಮಠ, ಮಂದಿರ ಹಾಗೂ ರೈತರ ಜಮೀನನ್ನು ವಕ್ಫ್ ಹೆಸರಿನಲ್ಲಿ ಕಬಳಿಸುವ ಕೆಲಸ ನಡೆದಿದೆ, ಇದೆಲ್ಲದರ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸಲು ಹೆಜ್ಜೆ ಹಾಕೋಣ ಎಂದಿದ್ದಾರೆ.