ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ ನಿರ್ಧಾರ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಂಡದವರು ಬಿಜೆಪಿ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ ಇಂದಿಲ್ಲಿ ಟೀಕಾ ಪ್ರಹಾರ ಮಾಡಿದೆ.
ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಇಂದು ಸಭೆ ಸೇರಿದ್ದ ಬಣ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನ ದುರಾಡಳಿತ ವಿರುದ್ಧ ಹಾಗೂ ಬಿಜೆಪಿ ಸಂಘಟನೆಗೆ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿದೆ.
ಸಭೆ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿ.ಸಿ ಪಾಟೀಲ್, ಎಂ.ಪಿ. ರೇಣುಕಾಚಾರ್ಯ ಮತ್ತಿತರರು, ನವೆಂಬರ್ ೨೯ರಂದು ಪಕ್ಷದ ಉಳಿವಿಗಾಗಿ ಕೋಲಾರದ ಕುರುಡುಮಲೆ ಗಣೀಶನಿಗೆ ಪೂಜೆ ಸಲ್ಲಿಸಿ ನಂತರ ಮೈಸೂರು ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.
ಸರ್ಕಾರದ ಭ್ರಷ್ಟಾಚಾರವನ್ನು ಜನರಿಗೆ ತಿಳಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೈಬಲ ಪಡಿಸಲು, ಪಕ್ಷದ ನಿಷ್ಠರಾದ ನಾವು ರಾಜ್ಯಾದ್ಯಂತ ಸಭೆ ಮತ್ತು ಸಮಾವೇಶಗಳನ್ನು ನಡೆಸುತ್ತೇವೆ. ಯತ್ನಾಳ್ ಸೇರಿದಂತೆ ಮೂರು-ನಾಲ್ಕು ಜನರ ಗುಂಪು, ಸರ್ಕಾರದಿಂದ ತಮ್ಮ ಕೆಲಸ ಮಾಡಿಸಿಕೊಳ್ಳಲು ಸಿದ್ದರಾಮಯ್ಯ ಅವರ ತುತ್ತೂರಿಯಂತೆ ಕಾರ್ಯನಿರ್ವಹಿಸುತ್ತಿದ್ದು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷದ ರಾಷ್ಟ್ರೀಯ ನಾಯಕರನ್ನು ಹಂಗಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಮ್ಮ ರಾಜ್ಯಾಧ್ಯಕ್ಷರ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಪ್ರವಾಸ ಕೈಗೊಂಡಿದ್ದಾರೆ. ಇವರಿಗೆ ಯಾವುದೇ ಜಿಲ್ಲೆಯಲ್ಲೂ ಪಕ್ಷದ ನಾಯಕರು ಹಾಗೂ ಪಕ್ಷದ ಜಿಲ್ಲಾಧ್ಯಕ್ಷರ ಬೆಂಬಲ ಸಿಗುತ್ತಿಲ್ಲ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ವರಿಷ್ಠರನ್ನು ಒತ್ತಾಯಿಸುತ್ತೇವೆ, ನಿಷ್ಠರಾದ ನಾವೂ ರಾಜ್ಯಾಧ್ಯಕ್ಷರ ಪರವಾಗಿ ಯಾತ್ರೆ ಕೈಗೊಳ್ಳಲಿದ್ದೇವೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ಕುಮಾರಬಂಗಾರಪ್ಪ, ರಮೇಶ್ ಜಾರಕಿಹೊಳಿ ಮತ್ತಿತರರು ಪಕ್ಷದ ಅಧ್ಯಕ್ಷರ ಅನುಮತಿ ಪಡೆಯದೆ ಚಿಹ್ನೆಯನ್ನೂ ಬಳಸದೆ ಜನಜಾಗೃತಿ ಅಭಿಯಾನ ನಡೆಸುತ್ತಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ತಕ್ಷಣವೇ ವರಿಷ್ಠರು ಮಧ್ಯಪ್ರವೇಶಿಸಿ ಅಭಿಯಾನ ನಡೆಸದಂತೆ ಸ್ಪಷ್ಟ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದು ಈಗ ಪಾದಯಾತ್ರೆ ನಡೆಸುತ್ತಿರುವವರಲ್ಲ. ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್. ಯತ್ನಾಳ್ ಬಣ ಯಡಿಯೂರಪ್ಪ, ವಿಜಯೇಂದ್ರ ಅವರನ್ನು ಟೀಕಿಸಿದರೆ ಮೋದಿ ಮತ್ತು ಅಮಿತ್ ಷಾ ಅವರನ್ನು ಟೀಕಿಸಿದಂತೆ.
ಯಡಿಯೂರಪ್ಪ ರಾಜಕೀಯಕ್ಕೆ ಬಂದಾಗ ಕೆಲವರು ಇನ್ನು ಕಣ್ಣೇ ಬಿಟ್ಟಿರಲಿಲ್ಲ, ಅಂಥವರು ಕೂಡ ನಾಲ್ಕು ಮಂದಿಯನ್ನು ಕಟ್ಟಿಕೊಂಡು ಪ್ರಚಾರಕ್ಕಾಗಿ ಅಭಿಯಾನ ಮಾಡುತ್ತಿದ್ದಾರೆ, ಇದಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲ ಎಂದರು. ಯತ್ನಾಳ್, ನಿಮ್ಮ ಹೋರಾಟ ಯಾರ ವಿರುದ್ಧ, ಕಾಂಗ್ರೆಸ್ ವಿರುದ್ಧ ಇರಬೇಕು, ಮುಹಮ್ಮದ್ ಬಿನ್ ತುಘಲಕ್ ತರಹ ಪ್ರವಾಸ ಹೊರಟಿದ್ದು, ಸಿದ್ದರಾಮಯ್ಯ ಅಡಿಯಾಳಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.