ಯಡಿಯೂರಪ್ಪಗೆ ಅಧಿಕಾರ ಹಸ್ತಾಂತರ ತಪ್ಪಿಸಿದ್ದು ನಾನೇ
ಬೆಂಗಳೂರು:ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಹಾಲಿ ಶಾಸಕ ಜಿ.ಟಿ.ದೇವೇಗೌಡ ಮತ್ತು ಅವರ ಮಗ ಹರೀಶ್ ಜೈಲಿಗೆ ಹೋಗುವುದನ್ನು ಎಚ್.ಡಿ.ಕುಮಾರಸ್ವಾಮಿ ಒಂದೇ ಗುಟುರು ಹಾಕಿ ತಪ್ಪಿಸಿದ್ದರು, ಅದನ್ನು ಅವರು ಸದಾ ಸ್ಮರಿಸಬೇಕು ಎಂದು ಜೆಡಿಎಸ್ ಹಿರಿಯ ನಾಯಕ ಎಚ್.ಡಿ.ರೇವಣ್ಣ ಇಂದಿಲ್ಲಿ ಬಾಂಬ್ ಸಿಡಿಸಿದ್ದಾರೆ.
ಬಹಳ ದಿನಗಳ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಂದೆ ಅಧಿಕಾರದಲ್ಲಿ ಇದ್ದ ವೇಳೆ 2018ರಲ್ಲಿ ಜಿ.ಟಿ. ಮತ್ತು ಅವರ ಮಗನನ್ನು ಜೈಲಿಗೆ ಕಳುಹಿಸುವ ಸುದ್ದಿಯನ್ನು ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ನನಗೆ ನೀಡಿದರು.
ತಕ್ಷಣವೇ ಇದನ್ನು ಕುಮಾರಸ್ವಾಮಿ ಗಮನಕ್ಕೆ ತಂದೆ, ಅವರು ಬಂಧಿಸಲು ಹೊರಟಿದ್ದ ಅಧಿಕಾರಿಗಳನ್ನು ಸಂಪರ್ಕಿಸಿ ಗುಟುರು ಹಾಕಿದರು.
ಜೈಲಿನಲ್ಲಿ ಇರಬೇಕಿತ್ತು
ಅವರ ಗುಟುರಿಗೆ ಹೆದರಿ, ಪೋಲಿಸರು ಜಿ.ಟಿ. ಮತ್ತು ಮಗನನ್ನು ಬಂಧಿಸದೆ ಹಿಂತಿರುಗಿದರು, ಕುಮಾರಸ್ವಾಮಿ ಮಧ್ಯೆ ಪ್ರವೇಶ ಮಾಡದಿದ್ದರೆ, ನಾನು, ನನ್ನ ಮಕ್ಕಳು ಜೈಲಿನಲ್ಲಿ ಇದ್ದಂತೆ ಜಿ.ಟಿ. ಮತ್ತು ಅವರ ಮಗ ಅಂದೇ ಜೈಲಿನಲ್ಲಿ ಇರಬೇಕಿತ್ತು.
ಜಿ.ಟಿ.ಗೆ ಮನಸ್ತಾಪ ಇರಬಹುದು ಅದನ್ನು ನಾನು ಸರಿಪಡಿಸುತ್ತೇನೆ, ಅವರು ಹೇಳಿದಂತೆ ನಾನು ಕೇಳಿಕೊಂಡು ಬಂದಿದ್ದೇನೆ, ಸಾ.ರಾ.ಮಹೇಶ್ ಅವರ ಬಗ್ಗೆ ಇದ್ದ ತಪ್ಪು ಕಲ್ಪನೆಯ ಹಿಂದಿನ ಸತ್ಯ ಏನೆಂಬುದನ್ನು ಮಾಧ್ಯಮದ ಮುಂದೆ ತಿಳಿಸಿದ್ದಾರೆ.
ಜಿ.ಟಿ.ಯನ್ನು ಸರಿ ಮಾಡುವುದು ನಮಗೆ ಗೊತ್ತು, ಅವರು ಎಲ್ಲಿಯೂ ಹೋಗುವುದಿಲ್ಲ, ದೇವೇಗೌಡರು ಮತ್ತು ಕುಮಾರಸ್ವಾಮಿಯೇ ನಮ್ಮ ನಾಯಕರು.
ಬೇರ್ಪಡಿಸಲು ಸಾಧ್ಯವಿಲ್ಲ
ಕುಮಾರಸ್ವಾಮಿ ಮತ್ತು ನಮ್ಮನ್ನು ಯಾರೂ, ಎಂದೂ ಬೇರ್ಪಡಿಸಲು ಸಾಧ್ಯವಿಲ್ಲ, ಕೆಲವರು ಕಟ್ಟು ಕಥೆ ಹೇಳುವುದನ್ನು ನಿಲ್ಲಿಸಲಿ ಎಂದರು.
ಕುಮಾರಸ್ವಾಮಿ ಅಂದು ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡದಿರುವುದಕ್ಕೆ ನಾನೇ ಕಾರಣ, ನನ್ನಿಂದ ದೊಡ್ಡ ತಪ್ಪು ಆಗಿದೆ ಎಂದು ಇದೇ ವೇಳೆ ರೇವಣ್ಣ ಸತ್ಯ ನುಡಿದಿದ್ದಾರೆ.
ಮೊದಲ ಬಾರಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 20 ತಿಂಗಳ ಆಡಳಿತದ ನಂತರ ಬಿಜೆಪಿ ಜೊತೆ ಮಾಡಿಕೊಂಡ ಒಪ್ಪಂದದಂತೆ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಲು ಮುಂದಾಗಿದ್ದರು.
ಕ್ಷಮೆ ಯಾಚಿಸುತ್ತೇನೆ
ಆದರೆ, ನಾನು ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡುವುದನ್ನು ತಪ್ಪಿಸಿದ್ದು ನಾನೇ, ನನ್ನಿಂದ ದೊಡ್ಡ ತಪ್ಪಾಗಿದೆ, ಕ್ಷಮೆ ಯಾಚಿಸುತ್ತೇನೆ.
ಅಧಿಕಾರ ಹಸ್ತಾಂತರ ತಪ್ಪಿಸಿದ ಸತ್ಯ ಯಾರಿಗೂ ತಿಳಿದಿಲ್ಲ, ಆ ಆರೋಪಕ್ಕೆ ಯಾರ‍್ಯಾರನ್ನೋ ಗುರಿ ಮಾಡಲಾಯಿತು, ಇದೀಗ ಸತ್ಯ ಹೇಳುತ್ತಿದ್ದೇನೆ, ದೇವರು ಮುಂದೆಯೂ ಹೇಳುತ್ತೇನೆ ಎಂದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿ ಗತಿಯಿಲ್ಲದೆ, ಸಿ.ಪಿ.ಯೋಗೇಶ್ವರ್ ಅವರನ್ನು ವಿಮಾನದಲ್ಲಿ ಕರೆದುಕೊಂಡು ಹೋಗಿ ರಾಜೀನಾಮೆ ಕೊಡಿಸಿ, ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದರು.
ಈಗ ಅವರು ಶಾಸಕರಾಗಿದ್ದಾರೆ, ಸಿದ್ದರಾಮಯ್ಯ ಅವರನ್ನು ಮಂತ್ರಿ ಮಾಡಲಿ, ಅವರು ಸಚಿವರಾದರೆ ನಮ್ಮ ಜಿಲ್ಲೆ ಮತ್ತು ಕ್ಷೇತ್ರಕ್ಕೆ ಕೆಲಸ ಮಾಡಿಸಿಕೊಳ್ಳುತ್ತೇನೆ ಎಂದರು.