ಬೆಂಗಳೂರು:ಕರ್ನಾಟಕ ಬಿಜೆಪಿಯ ಆಂತರಿಕ ಭಿನ್ನಾಭಿಪ್ರಾಯ ಪರಿಹರಿಸಲು ದೆಹಲಿ ವರಿಷ್ಠರು ಮಧ್ಯ ಪ್ರವೇಶ ಮಾಡಲಿದ್ದಾರೆ.
ವರಿಷ್ಠರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ಡಿಸೆಂಬರ್ 4ರಂದು ರಾಜ್ಯಕ್ಕೆ ಕಳುಹಿಸುತ್ತಿದ್ದು, ಇವರೊಂದಿಗೆ ರಾಜ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಧಾ ಮೋಹನ್ ದಾಸ್ ಅಗರವಾಲ್ ಅವರೂ ಉಪಸ್ಥಿತರಿರುವರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಹಗರಣಗಳು ಹಾಗೂ ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಲ್ಕು ತಂಡಗಳನ್ನು ರಚಿಸಿ ರಾಜ್ಯದ ನಾಲ್ಕೂ ದಿಕ್ಕಿನಿಂದ ಹೋರಾಟಕ್ಕೆ ಇಳಿದಿದ್ದಾರೆ.
ಪರ-ವಿರೋಧಿ ಬಣಗಳ ಹೋರಾಟ
ರಾಜ್ಯಾಧ್ಯಕ್ಷರ ನಿರ್ಧಾರ ಧಿಕ್ಕರಿಸಿ ಯಡಿಯೂರಪ್ಪ ವಿರೋಧಿ ಬಣದ ಬಸನಗೌಡ ಪಾಟೀಲ್ ಯತ್ನಾಳ್ ಬಣ ಪ್ರತ್ಯೇಕವಾಗಿ ವಕ್ಫ್ ವಿಚಾರವನ್ನು ಮುಂದಿಟ್ಟುಕೊಂಡು ಬೀದಿಗಿಳಿದಿದೆ.
ಯತ್ನಾಳ್ ನಿರ್ಧಾರ ವಿರೋಧಿಸಿ, ಯಡಿಯೂರಪ್ಪ ಬಣದ ಕೆಲವು ಹಿರಿಯ ಮುಖಂಡರು ಶುಕ್ರವಾರದಿಂದ ಪ್ರತ್ಯೇಕ ಯಾತ್ರೆ ಹಮ್ಮಿಕೊಂಡಿದ್ದು, ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ರಾಜ್ಯ ಬಿಜೆಪಿ ಮುಖಂಡರಲ್ಲಿನ ಭಿನ್ನಾಭಿಪ್ರಾಯವನ್ನು ಕಾಂಗ್ರೆಸ್‌ನವರು ಅಪಹಾಸ್ಯ ವಿಷಯ ಮಾಡಿಕೊಂಡಿದ್ದಾರೆ.
ದೆಹಲಿ ವರಿಷ್ಠರಿಗೆ ದೂರು
ಯತ್ನಾಳ್ ಮತ್ತವರ ಸಂಗಡಿಗರಿಂದ ಆಗುತ್ತಿರುವ ಮುಜುಗರ ತಪ್ಪಿಸುವಂತೆ ಸ್ವತಃ ವಿಜಯೇಂದ್ರ ಅವರೇ ದೆಹಲಿಗೆ ತೆರಳಿ ವರಿಷ್ಠರಿಗೆ ದೂರು ನೀಡಿದ್ದರು.
ವರಿಷ್ಠರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷರು, ಡಿಸೆಂಬರ್‌ನಲ್ಲಿ ನಮ್ಮಲ್ಲಿನ ಎಲ್ಲಾ ಗೊಂದಲ ಬಗೆಹರಿದು, ಐದು ಬಾಗಿಲುಗಳು ಮುಚ್ಚಲಿವೆ ಎಂದು ಮಾರ್ಮಿಕವಾಗಿ ನುಡಿದಿದ್ದರು.
ವರಿಷ್ಠರು ಕಳುಹಿಸುತ್ತಿರುವ ಈ ಮುಖಂಡರು ಕರ್ನಾಟಕದ ಬಿಜೆಪಿ ಕೋರ್ ಕಮಿಟಿ ಸದಸ್ಯರು, ಹಿರಿಯ ನಾಯಕರು ಹಾಗೂ ಪರ-ವಿರೋಧಿ ಬಣದ ನಾಯಕರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಲಿದಾರೆಂದು ಉನ್ನತ ಮೂಲಗಳು ತಿಳಿಸಿವೆ.
ವೈಮನಸ್ಸು ವಿಷಾದಕರ
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಬ್ಬಾಗಿಲೆಂದೇ ಪರಿಗಣಿಸಿರುವ ಕರ್ನಾಟಕದಲ್ಲಿ ನಾಯಕರ ವೈಮನಸ್ಸು ಬೀದಿಗೆ ಬಂದಿರುವುದು ವಿಷಾದಕರ ಎಂದಿದ್ದಾರೆ.
ಕೇಂದ್ರದಲ್ಲಿ ಸಚಿವರಾಗಿದ್ದವರು, ಸಂಸದರು, ಮಾಜಿ ಮಂತ್ರಿಗಳೇ ಒಂದು ವಿಷಯಕ್ಕೆ ತದ್ವಿರುದ್ಧವಾಗಿ ಹೋರಾಟಕ್ಕೆ ಮುಂದಾಗಿರುವುದು ವಿಪರ್ಯಾಸ.
ಸಿದ್ದರಾಮಯ್ಯ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವಲ್ಲಿ ರಾಜ್ಯ ಬಿಜೆಪಿ ವಿಫಲವಾಗಿದೆ, ಈ ಸರ್ಕಾರದ ಹಗರಣಗಳು ಎಷ್ಟವೆಯೆಂದರೆ, ಪ್ರತಿನಿತ್ಯವೂ ಒಂದು ಹೋರಾಟ ನಡೆಸಬಹುದಾಗಿದೆ.
ಕರ್ನಾಟಕದಲ್ಲಿ ಇದೇ ಮೊದಲು
ಆದರೆ, ಇದನ್ನು ಬಿಟ್ಟು ಪ್ರತ್ಯೇಕ ಗುಂಪುಗಳಾಗಿ ಹೋರಾಟ ನಡೆಸುತ್ತಿರುವುದು ಕರ್ನಾಟಕದಲ್ಲಿ ಇದೇ ಮೊದಲು.
ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ವರಿಷ್ಠರು ನೇಮಕ ಮಾಡಿದ ನಂತರ ಅದಕ್ಕೆ ಎಲ್ಲರೂ ತೆಲೆಬಾಗಲೇಬೇಕು, ಅದನ್ನು ಬಿಟ್ಟು ಅವರ ವಿರುದ್ಧವೇ ಹೋರಾಟ ನಡೆಸಿದರೆ, ಪಕ್ಷದ ವರಿಷ್ಠರ ನಿರ್ಧಾರವನ್ನೇ ಪ್ರಶ್ನಿಸಿದಂತೆ ಎಂದು ಕಿಡಿಕಾರಿದರು.
ಇಷ್ಟೆಲ್ಲಾ ಆಗುತ್ತಿದ್ದರೂ ವರಿಷ್ಠರು ಮಧ್ಯೆ ಪ್ರವೇಶಿಸದಿರುವುದಕ್ಕೆ ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದರು.