ಬೆಂಗಳೂರು:ಕೃಷ್ಣರಾಜ ಜಲಾಶಯಕ್ಕೆ ಸಮಾನಾಂತರವಾಗಿ ಮೇಕೆದಾಟು ಸಮೀಪ ಅಣೆಕಟ್ಟೆ ನಿರ್ಮಾಣ, ಮಹದಾಯಿ ಕಳಸಾ-ಬಂಡೂರಿ ಯೋಜನೆಗಳಿಗೆ ಅನುಮತಿ ದೊರೆಕಿಸಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಕರ್ನಾಟಕ ಅತ್ಯಂತ ವೇಗವಾಗಿ ನಗರೀಕರಣಗೊಳ್ಳುತ್ತಿರುವ ರಾಜ್ಯವಾಗಿದ್ದು, 13 ನಗರಪಾಲಿಕೆಗಳನ್ನು ಹೊರತುಪಡಿಸಿ 2ನೇ ಸ್ಥರದ ನಗರಗಳ ಅಭಿವೃದ್ಧಿಗೆ ಹೆಚ್ಚಿನ ಬಂಡವಾಳ ನೀಡಿ ಎಂದು ಕೋರಿದ್ದಾರೆ.
ಕೇಂದ್ರದಿಂದ ಬರಬೇಕಿರುವ ಅನುದಾನ ಸೇರಿದಂತೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನೇ ದೆಹಲಿಯಲ್ಲಿಂದು ಪ್ರಧಾನಿ ಅವರಿಗೆ ಉಭಯ ನಾಯಕರು ಸಲ್ಲಿಸಿ, ಕುಡಿಯುವ ನೀರಿನ ಯೋಜನೆಗೆ ಅಗತ್ಯವಿರುವ ಮೇಕೆದಾಟು ಹಾಗೂ ಕಳಸಾ-ಬಂಡೂರಿಗೆ ಜಲಸಂಪನ್ಮೂಲ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಿ ಎಂದು ಮನವಿಯಲ್ಲಿ ಕೋರಿದ್ದಾರೆ.
ಅನುದಾನ ಸಾಕಾಗುವುದಿಲ್ಲ
ರಾಜ್ಯ ಸರ್ಕಾರ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಮುಂದಿನ ಮೂರು ವರ್ಷಗಳ ಅವಧಿಗೆ 2,000 ಕೋಟಿ ರೂ. ತೆಗೆದಿರಿಸಿದೆ, ಆದರೆ, ಈ ನಗರಗಳಿಗೆ ಸಮಗ್ರ ಮೂಲಸೌಕರ್ಯ ಕಲ್ಪಿಸಲು ಅನುದಾನ ಸಾಕಾಗುವುದಿಲ್ಲ.
ಆದ್ದರಿಂದ ಅಮೃತ್ ಅಥವಾ ಇನ್ನಾವುದೇ ಯೋಜನೆಯಡಿ ಕರ್ನಾಟಕಕ್ಕೆ 10,000 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ತಾವು ನಿರ್ದೇಶನ ನೀಡಬೇಕು.
15ನೇ ಹಣಕಾಸು ಆಯೋಗ ಕರ್ನಾಟಕ ರಾಜ್ಯಕ್ಕೆ ಸರಿಯಾದ ನ್ಯಾಯ ಒದಗಿಸುತ್ತಿಲ್ಲ ಎಂಬುದಾಗಿ ನಾವು ನಿರಂತರವಾಗಿ ಪ್ರಸ್ತಾಪಿಸುತ್ತಾ ಬಂದಿದ್ದೇವೆ, ತೆರಿಗೆ ಹಂಚಿಕೆಯಲ್ಲಿ ರಾಜ್ಯದ ಪಾಲನ್ನು ಶೇ.೧ರಷ್ಟು ಕಡಿಮೆ ಮಾಡಿರುವ ಶಿಫಾರಸ್ಸನ್ನು ಹಣಕಾಸು ಇಲಾಖೆ ಸರಿಪಡಿಸಬೇಕಾಗಿದೆ.
6,000 ಕೋಟಿ ರೂ. ಶಿಫಾರಸು
ಹಣಕಾಸು ಆಯೋಗ ರಾಜ್ಯಕ್ಕೆ ಹಂಚಿಕೆ ಕಡಿಮೆಯಾಗಿರುವುದಕ್ಕೆ ಪರಿಹಾರವಾಗಿ 5,495 ಕೋಟಿ ರೂ. ಅನುದಾನ ಬಿಡುಗಡೆಗೆ ಮತ್ತು ಪೆರಿಫೆರಲ್ ರಿಂಗ್ ರಸ್ತೆ ಮತ್ತು ನೀರಿನ ಮೂಲಗಳ ಪುನರುಜ್ಜೀವಕ್ಕೆ 6,000 ಕೋಟಿ ರೂ. ವಿಶೇಷ ಅನುದಾನ ನೀಡುವ ಬಗ್ಗೆ ಶಿಫಾರಸು ಮಾಡಿದೆ, ಹಣಕಾಸು ಆಯೋಗ ಕನಿಷ್ಟ ಈ ಎರಡು ಶಿಫಾರಸ್ಸುಗಳನ್ನು ಒಪ್ಪಿಕೊಳ್ಳಬೇಕಾಗಿದೆ.
ನಾವು ಇನ್ನೂ 15ನೇ ಹಣಕಾಸು ಆಯೋಗದ ಅವಧಿಯಲ್ಲಿರುವುದರಿಂದ ರಾಜ್ಯಕ್ಕೆ ಹೆಚ್ಚುವರಿ ಅನುದಾನ ಒದಗಿಸಲು ಹಣಕಾಸು ಇಲಾಖೆಗೆ ನಿರ್ದೇಶನ ನೀಡುವಂತೆ ಪುನಃ ನಾನು ಮನವಿ ಮಾಡುತ್ತೇನೆ.
ಅಲ್ಪಾವಧಿ ಬೆಳೆ ಸಾಲ ವಿತರಣೆಗೆ ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ ಒದಗಿಸಿರುವ ನಬಾರ್ಡ್ ನೆರವು ಕಡಿತಗೊಳಿಸಿರುವುದು ರೈತಾಪಿ ವರ್ಗ ಸಂಕಷ್ಟಕ್ಕೆ ಸಲುಕುವಂತೆ ಮಾಡಿದೆ, 2023-24ರ ಸಾಲಿಗೆ 5,600 ಕೋಟಿ ರೂ. ಮಂಜೂರು ಮಾಡಲಾಗಿತ್ತು, ಆದರೆ, 2024-25ರ ಸಾಲಿಗೆ 2,340 ಕೋಟಿ ರೂ. ಮಂಜೂರು ಮಾಡಲಾಗಿದೆ, ಇದರಿಂದಾಗಿ ನಬಾರ್ಡ್ ನೆರವು ಪ್ರಸಕ್ತ ಸಾಲಿಗೆ ಶೇ.58ರಷ್ಟು ಕಡಿತವಾದಂತಾಗಿದೆ.
ಆರ್ಥಿಕ ಸ್ಥಿತಿ ಮೇಲೆ ಪರಿಣಾಮ
ರಾಜ್ಯ ಹೆಚ್ಚುವರಿ ಬಡ್ಡಿ ಸಹಾಯಧನ ನೀಡದಿದ್ದರೆ ರೈತಾಪಿ ವರ್ಗದ ಆರ್ಥಿಕ ವೆಚ್ಚದ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೆ, ರಾಜ್ಯದ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಲಿದೆ, ಆದ್ದರಿಂದ ಈ ಕೂಡಲೇ ಇದನ್ನು ಪುನರ್ ಪರಿಶೀಲಿಸಿ ನಬಾರ್ಡ್ ನೆರವು ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.
ರಾಜ್ಯದ ರೈತರು ಅಲ್ಪಾವಧಿ ಬೆಳೆ ಸಾಲ ಪಡೆಯಲು ಯಾವುದೇ ತೊಂದರೆಯಾಗದಂತೆ ತಾವು ಹಣಕಾಸು ಸಚಿವಾಲಯಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡುತ್ತಿದ್ದೇನೆ.
ಈ ಮೊದಲೇ ಮನವಿ ಮಾಡಿರುವಂತೆ ಭದ್ರಾ ಮೇಲ್ದಂಡೆ ಯೋಜನೆಗೆ 2023-24ರ ಕೇಂದ್ರ ಬಜೆಟ್‌ನಲ್ಲಿ ಅನುಮೋದನೆಯಾಗಿರುವ 5,300 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಕೇಂದ್ರ ಹಣಕಾಸು ಸಚಿವರ ಭರವಸೆ ಇದುವರೆಗೆ ಈಡೇರಿಲ್ಲ, ತ್ವರಿತ ನೀರಾವರಿ ಲಾಭ ಕಾರ್ಯಕ್ರಮದಡಿ ನೆರವು ಒದಗಿಸಲು ಸಚಿವ ಸಂಪುಟದ ಟಿಪ್ಪಣಿ ಸಿದ್ಧ ಮಾಡಿರುವ ಬಗ್ಗೆ ತಿಳಿದುಬಂದಿದೆ.
ಪ್ರಸ್ತಾವನೆಗೆ ಶೀಘ್ರ ಅನುಮೋದನೆ
ಪ್ರಸಕ್ತ ಯೋಜನೆ ಶೀಘ್ರ ಅನುಮೋದನೆಗೊಂಡಲ್ಲಿ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಒಳಪಡುವ ಮಧ್ಯ ಕರ್ನಾಟಕದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ, ಆದ್ದರಿಂದ, ಈ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡಲು ತಮ್ಮಲ್ಲಿ ಮನವಿ ಮಾಡುತ್ತೇನೆ.
16ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರದ ತೆರಿಗೆ ಪಾಲಿಗೆ ಹೆಚ್ಚಿನ ದೇಣಿಗೆ ಒದಗಿಸುವ ರಾಜ್ಯಗಳಿಗೆ, ಕೇಂದ್ರದ ತೆರಿಗೆ ಪಾಲಿನಲ್ಲಿ ಭಾರೀ ಕಡಿತ ಮಾಡಿ ಶಿಕ್ಷಿಸದಂತೆ ಹಣಕಾಸು ಇಲಾಖೆ ಖಾತ್ರಿಪಡಿಸಬೇಕೆಂಬ ನಮ್ಮ ಮನವಿಗೆ ಸೂಕ್ತ ಪ್ರತಿಕ್ರಿಯೆ ದೊರಕುವ ನಿರೀಕ್ಷೆ ಇದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.