ಸಿದ್ದರಾಮಯ್ಯ, ಶಿವಕುಮಾರ್‌ಗೆ ಕಾಂಗ್ರೆಸ್ ವರಿಷ್ಠರ ಸೂಚನೆ
ಬೆಂಗಳೂರು:ಜಿಲ್ಲಾ, ತಾಲ್ಲೂಕು ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಸಿ ಎಂದು ಕಾಂಗ್ರೆಸ್ ವರಿಷ್ಠರು ರಾಜ್ಯ ಮುಖಂಡರಿಗೆ ಸೂಚಿಸಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆ ಮುಗಿಯುವವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದುವರೆಯಲಿ, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.
ಹೊಸ ಅಧ್ಯಕ್ಷರ ನೇಮಕ ಬೇಡ
ಕೋರ್ಟ್ ಆದೇಶದನ್ವಯ ಯಾವುದೇ ಸಮಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ಗಳಿಗೆ ಚುನಾವಣೆ ಘೋಷಣೆಯಾಗಬಹುದು, ಸದ್ಯದ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಹೊಸ ಅಧ್ಯಕ್ಷರ ನೇಮಕವಾದರೆ ಕಾರ್ಯತಂತ್ರ ರೂಪಿಸುವುದು ಕಷ್ಟವಾಗಲಿದೆ.
ಉಪಚುನಾವಣೆಯಲ್ಲಿ ಪಕ್ಷಕ್ಕೆ ಒಳ್ಳೆಯ ಗೆಲುವು ತಂದು ಕೊಟ್ಟಿದ್ದೀರಿ, ಇದೇ ಹುಮ್ಮಸ್ಸಿನಲ್ಲಿ, ನೀವು ಸ್ಥಳೀಯ ಕಾರ್ಯಕರ್ತರಿಗೆ ಅಧಿಕಾರ ನೀಡಲು ಮತ್ತು ಪಕ್ಷ ಸಂಘಟಿಸಲು ಚುನಾವಣೆಗಳನ್ನು ನಡೆಸಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಅವರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಸೂಚಿಸಿದ್ದಾರೆ.
ದೆಹಲಿಯಲ್ಲಿ ನಿನ್ನೆ ನಡೆದ ಎಐಸಿಸಿ ಕಾರ್ಯಕಾರಿಣಿ ಸಭೆಯಲ್ಲೇ ವರಿಷ್ಠರು ರಾಜ್ಯ ಚುನಾವಣಾ ಫಲಿತಾಂಶದ ಬಗ್ಗೆ ಮೆಚ್ಚುಗೆ ಸೂಚಿಸಿ, ಕಾರ್ಯಕರ್ತರಿಗೂ ಅಧಿಕಾರ ನೀಡಿ ಎಂದಿದ್ದಾರೆ.
ರಾಜಕೀಯ ನಿರ್ಧಾರ
ಸ್ಥಳೀಯ ಸಂಸ್ಥೆ ಚುನಾವಣೆಗಳು ಮುಗಿಯುವವರೆಗೆ ಯಾವುದೇ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುವುದು ಬೇಡ, ತುಂಬಾ ಅವಶ್ಯವಿದ್ದರೆ, ನಮ್ಮ ಗಮನಕ್ಕೆ ತಂದು ಮಾಡಿ.
ಕರ್ನಾಟಕದಲ್ಲಿ ಕಾಂಗ್ರೆಸ್ ಶಕ್ತಿ ಹೆಚ್ಚುತ್ತಿದೆ, ಪ್ರತಿಪಕ್ಷ ಬಿಜೆಪಿಯಲ್ಲಿ ಆಂತರಿಕ ಕಲಹ ಕಾಡುತ್ತಿದೆ, ಇಂತಹ ಸನ್ನಿವೇಶವನ್ನು ನೀವು ರಾಜಕೀಯವಾಗಿ ಬಳಸಿಕೊಳ್ಳಿ ಎಂದಿದ್ದಾರೆ.
ಈ ಚುನಾವಣೆಯಲ್ಲಿ ಪಕ್ಷಕ್ಕೆ ಯಶಸ್ಸು ಕಾಣುತ್ತದೆ, ಇದರಿಂದ ನಿಮಗೂ ಮತ್ತು ಕಾಂಗ್ರೆಸ್‌ಗೂ ಮತ್ತಷ್ಟು ಬಲ ಬರುತ್ತದೆ.
ಸಾರ್ವಜನಿಕ ಸೇವೆ ಮಾಡಲಿ
ನಿಗಮ-ಮಂಡಳಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ ಮಾಡುವ ಮೂಲಕ ಕಾರ್ಯಕರ್ತರನ್ನು ಸಂಪೂರ್ಣವಾಗಿ ತೃಪ್ತಿಪಡಿಸಲಾಗದು, ಅವರೂ ಜನರಿಂದ ಆಯ್ಕೆಗೊಂಡು ಸಾರ್ವಜನಿಕ ಸೇವೆ ಮಾಡಲಿ, ಇದರಿಂದ ಆಡಳಿತ ವಿಕೇಂದ್ರೀಕರಣವಾಗಿ ಮತ್ತಷ್ಟು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.
ವಿಧಾನಮಂಡಲದ ಅಧಿವೇಶನ ಪೂರ್ಣಗೊಳ್ಳುವವರೆಗೂ ಅಬಕಾರಿ ಸಚಿವರ ಖಾತೆ ಬದಲಾವಣೆ ಮಾಡಬೇಡಿ ಎಂದು ಮುಖ್ಯಮಂತ್ರಿ ಅವರಿಗೆ ಖರ್ಗೆ ಅವರು ಸಭೆಯಲ್ಲೇ ತಿಳಿಸಿದ್ದಾರೆ.
ಖಾತೆ ಬದಲಾವಣೆ ಮಾಡಿ ಸದನ ಎದುರಿಸುವುದು ಅಷ್ಟು ಸುಲಭವಲ್ಲ, ಇದರಿಂದ ಅವರು ಆರೋಪಿ ಎಂಬುದು ಸಾಬೀತಾಗುತ್ತದೆ, ನೀವೇ ಇಕ್ಕಟ್ಟಿಗೆ ಸಿಲುಕುತ್ತೀರ ಎಂಬ ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡಿ, ಬಿ.ನಾಗೇಂದ್ರ ಅವರಿಗೆ ಭರವಸೆ ನೀಡಿದ್ದೇನೆ, ಅವರೊಬ್ಬರನ್ನು ಖಾಲಿ ಇರುವ ಸಚಿವ ಸ್ಥಾನಕ್ಕೆ ಭರ್ತಿ ಮಾಡಿಕೊಳ್ಳು ವುದಾಗಿ ಹೇಳಿದಾಗ, ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ.