ಹೆಚ್ಚು ಪ್ಯಾಕೇಜ್‌ಗಾಗಿ ಯೋಗೇಶ್ವರ್ ಆ ಪಕ್ಷಕ್ಕೆ ಹೋಗಿದ್ದಾರೆ
ಬೆಂಗಳೂರು:ಸಿ.ಪಿ.ಯೋಗೇಶ್ವರ್ ನಂಬಿಕೊಂಡು ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಹೋಗುವ ಪರಿಸ್ಥಿತಿ ಇಲ್ಲ ಎಂದು ಯುವ ಜಾತ್ಯತೀತ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅತಿ ಹೆಚ್ಚು ಪ್ಯಾಕೇಜ್ ಸಿಗುತ್ತೆ ಅಂತ ಯೋಗೇಶ್ವರ್ ಕಾಂಗ್ರೆಸ್‌ಗೆ ಹೋಗಿದ್ದಾರೆ, ಎಷ್ಟು ದಿನ ಕಾಂಗ್ರೆಸ್‌ನಲ್ಲಿ ಉಳಿಯುತ್ತಾರೆ ಅನ್ನೋದು ಪ್ರಶ್ನೆ.
ಭಾವನಾತ್ಮಕ ಸಂಬಂಧ
ಜೆಡಿಎಸ್ ಶಾಸಕರು ಪಕ್ಷದೊಂದಿಗೆ ರಾಜಕೀಯ ಹೊರತುಪಡಿಸಿ ಭಾವನಾತ್ಮಕ ಸಂಬಂಧ ಹೊಂದುಕೊಂಡಿದ್ದಾರೆ, ನನ್ನ ಜೊತೆ ನಮ್ಮ ಶಾಸಕರು ನಿರಂತರ ಸಂಪರ್ಕದಲ್ಲಿದ್ದಾರೆ ಕ್ಷೇತ್ರದ ಅನುದಾನ ಸಮಸ್ಯೆ ಬಗ್ಗೆಯೂ ಚರ್ಚೆ ಮಾಡುತ್ತಿದ್ದಾರೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನಲ್ಲಿ ಅಸಮಾಧಾನಿತ ಶಾಸಕರಿಲ್ಲ, ಅಂತಹವರು ಕಾಂಗ್ರೆಸ್‌ನಲ್ಲಿದ್ದಾರೆ, ಅವರು 139 ಶಾಸಕರನ್ನು ಉಳಿಸಿಕೊಳ್ಳುವ ಕೆಲಸ ಮಾಡಲಿ ಎಂದರು.
ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ಒಂದು ಸಮುದಾಯದ ಓಲೈಕೆಗೆ ಮತ್ತೊಂದು ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದ್ದು ಒಕ್ಕಲಿಗ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಿಸುವುದು, ನೋಟಿಸ್ ಕೊಡುವುದನ್ನು ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಜನ ಇದಕ್ಕೆ ಉತ್ತರ ಕೊಡುತ್ತಾರೆ.
ಅಸಮಾಧಾನ ಮೊದಲಲ್ಲ
ಜಿ.ಟಿ. ದೇವೇಗೌಡರ ಅಸಮಾಧಾನ ಮೊದಲೇನೂ ಅಲ್ಲ, ಹಿಂದೆಯೂ ವೈಮನಸ್ಸು ಆದಾಗ ನಾನೇ ಸೇತುವೆಯಾಗಿ ಕೆಲಸ ಮಾಡಿದ್ದೀನಿ, ಅವರನ್ನ ಮತ್ತೆ ಪಕ್ಷಕ್ಕೆ ಕರೆತರುವಲ್ಲಿ ಪ್ರಮಾಣಿಕ ಕೆಲಸ ಮಾಡಿದ್ದೇನೆ, ಈಗಲೂ ಸಣ್ಣಪುಟ್ಟ ವೈಮನಸ್ಸು ಹೊರ ಹಾಕಿದ್ದಾರೆ, ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯ ಶಾಸಕರು ಹಾಗೂ ನಾವೆಲ್ಲರೂ ಸೇರಿ ಸರಿ ಮಾಡುತ್ತೇವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಬಲಪಡಿಸಿಕೊಳ್ಳಲು ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದಾರೆ, ಸ್ವಪಕ್ಷದವರನ್ನೇ ಸಮಾವೇಶ ಮಾಡಲಾಗುತ್ತಿದೆ.
ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರ ಗಮನ ಸೆಳೆಯಲು ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ ಅನ್ನಿಸುತ್ತದೆ, ಸಮಾವೇಶದ ಮೂಲಕ ಜೆಡಿಎಸ್ ಮತ್ತು ಬಿಜೆಪಿಗೆ ಯಾವ ಸಂದೇಶವನ್ನೂ ಕೊಡೋಕೆ ಆಗಲ್ಲ.
ಹಿನ್ನಡೆ ಪ್ರಶ್ನೆಯೇ ಇಲ್ಲ
ಯಾರು, ಎಲ್ಲಿ ಬೇಕಾದರು ಸಮಾವೇಶ ಮಾಡಬಹುದು, ಇದರಿಂದ ಜೆಡಿಎಸ್‌ಗೆ ಹಿನ್ನಡೆ ಆಗುವ ಪ್ರಶ್ನೆಯೇ ಇಲ್ಲ, ವಿಧಾನಸಭಾ ಚುನಾವಣೆಗೆ ಇನ್ನೂ ಮೂರುವರೆ ವರ್ಷ ಬಾಕಿ ಇದೆ, ಯಾವ ಪುರುಷಾರ್ಥಕ್ಕೆ ಸಮಾವೇಶ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದರು.
ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸಮಾವೇಶ ಮಾಡುತ್ತಿರಬಹುದು, ಸಾಧನೆಗಳು ಏನಿದೆ ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ, ಸರ್ಕಾರ ಭ್ರಷ್ಟಾಚಾರ ಹಗರಣಗಳಲ್ಲಿ ಮುಳುಗಿದೆ.
ಹೊಸಪೇಟೆ ಕಾಂಗ್ರೆಸ್ ಶಾಸಕರೇ ಎರಡು ಗ್ಯಾರಂಟಿ ಯೋಜನೆಗಳನ್ನು ಕಡಿಮೆ ಮಾಡಿ ಅನುದಾನ ಕೊಡಿ ಎಂದು ಒತ್ತಾಯಿಸಿದ್ದಾರೆ, ಒಂದೂವರೆ ವರ್ಷ ಆಡಳಿತದಲ್ಲಿ ಇಂತಹ ಪರಿಸ್ಥಿತಿ ಆ ಪಕ್ಷಕ್ಕೆ ಬಂದಿದೆ.
ಕಾಂಗ್ರೆಸ್ ಆಡಳಿತ ವಿರುದ್ಧವೇ ಆ ಪಕ್ಷದ ಶಾಸಕರು ಪ್ರತಿಕ್ರಿಯೆ ಕೊಡುತ್ತಿದ್ದಾರೆ, ಬೆಳಗ್ಗೆ ಹೇಳಿಕೆ ಕೊಟ್ಟು ಸಂಜೆಯೊಳಗೆ ಯೂ-ಟರ್ನ್ ಹೊಡೆಯುತ್ತಿದ್ದಾರೆ ಎಂದು ಟೀಕಿಸಿದರು.