ಬೆಂಗಳೂರು:ದೇಶದ್ರೋಹಿ ಚಟುವಟಿಕೆಲ್ಲಿ ಪಾಲ್ಗೊಂಡವರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವ ಸರ್ಕಾರ ಹಿಂದೂ ಸ್ವಾಮೀಜಿಗಳಿಗೆ ಬೆದರಿಕೆ ಹಾಕಿ ನೋಟಿಸ್ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಗುಡುಗಿದ್ದಾರೆ.
ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರನ್ನು ರಕ್ಷಿಸುತ್ತೀರಿ, ಮಾಡಿದ ತಪ್ಪಿಗೆ ಆಕ್ರೋಶ ವ್ಯಕ್ತವಾದಾಗ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಮಹಾಸ್ವಾಮೀಜಿ ಕ್ಷಮೆ ಕೇಳಿದ ಮೇಲೂ ಅವರ ಮೇಲೆ ಕ್ರಮ ಜರುಗಿಸುವುದಾದರೆ, ದ್ವಿಮುಖ ನೀತಿ ನಿಮ್ಮದಲ್ಲವೆ ಎಂದು ಪ್ರಶ್ನಿಸಿದ್ದಾರೆ.
ತನಿಖೆಗೆ ಬರಲು ಒತ್ತಾಯ
ನಗರದ ಮೈಸೂರು ರಸ್ತೆ ಬಳಿ ಇರುವ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಲ್ಲಿ ಚಂದ್ರಶೇಖರನಾಥ ಮಹಾಸ್ವಾಮೀಜಿ ಅವರನ್ನು ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ವಿಚಾರದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಹೋರಾಟದಲ್ಲಿ ಸ್ವಾಮೀಜಿಗಳು, ರಾಜ್ಯ ಸರ್ಕಾರದ ನಡವಳಿಕೆ ವಿರುದ್ಧ ಆಕ್ರೋಶಭರಿತರಾಗಿ ಹೇಳಿಕೆ ಕೊಟ್ಟಿದ್ದರು, ಆ ಹೇಳಿಕೆ ಬಗ್ಗೆ ಸ್ವಾಮೀಜಿಗಳು ಕ್ಷಮೆಯನ್ನೂ ಕೇಳಿದ್ದಾರೆ, ಇದರ ನಡುವೆ ರಾಜ್ಯ ಸರ್ಕಾರವು ಸ್ವಾಮೀಜಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಿ ಅವರಿಗೆ ತನಿಖೆಗೆ ಬರಲು ಒತ್ತಾಯಿಸಿದೆ ಎಂದು ಆಕ್ಷೇಪಿಸಿದರು.
ಸ್ವಾಮೀಜಿಗಳು ಆರೋಗ್ಯ ಸರಿ ಇಲ್ಲದಿರುವ ಕುರಿತು ತಿಳಿಸಿದ್ದಲ್ಲದೆ, ಅಗತ್ಯ ಉತ್ತರವನ್ನು ಪತ್ರ ಮೂಲಕ ನೀಡಿದ್ದರು, ಆದರೂ, ಒತ್ತಡ ಹಾಕುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.
ರಾಜ್ಯ ಸರ್ಕಾರವು ವಕ್ಫ್ ವಿಷಯ ಮುಂದಿಟ್ಟು ರೈತರನ್ನು ಒಕ್ಕಲೆಬ್ಬಿಸುತ್ತಿದೆ, ಮಠ ಮಾನ್ಯಗಳ ಜಮೀನು ಕಿತ್ತುಕೊಳ್ಳುತ್ತಿದೆ, ಅಧಿಕಾರಿಗಳ ಮೂಲಕ ನೋಟಿಸ್ ಕೊಡುತ್ತಿದೆ, ಇದರ ವಿರುದ್ಧ ಉಗ್ರ ಪ್ರತಿಭಟನೆ ನಡೆದಿದ್ದು, ರೈತರು ಬೀದಿಗೆ ಇಳಿದಿದ್ದಾರೆ ಎಂದರು.
ಕಾನೂನು ಬೇರೆ ಬೇರೆ ಇದೆಯೇ
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮಾತನಾಡಿ, ಸ್ವಾಮೀಜಿಗಳು ಕ್ಷಮೆ ಕೇಳಿದರೂ ಕೇಸು ದಾಖಲಿಸಿದ್ದಾರೆ, ದೇಶ ವಿರೋಧಿ, ಗಲಭೆ ಎಬ್ಬಿಸುವ ಹಾಗೂ ಸೌಹಾರ್ದತೆ ಹಾಳು ಮಾಡುವ ರೀತಿಯಲ್ಲಿ ಹೇಳಿಕೆ ಕೊಟ್ಟ ಇತರರ ಬಗ್ಗೆ ಸರ್ಕಾರ ಏಕೆ ಕೇಸು ಹಾಕಿಲ್ಲ, ಅವರ ಮೇಲೂ ಪ್ರಕರಣ ದಾಖಲಿಸಬೇಕಿತ್ತಲ್ಲವೇ, ಕಾನೂನು ಬೇರೆ ಬೇರೆ ಇದೆಯೇ ಎಂದು ಪ್ರಶ್ನಿಸಿದರು.
ಸ್ವಾಮೀಜಿಯವರಿಗೆ 80 ವರ್ಷ ವಯಸ್ಸಾಗಿದ್ದು, ಅನಾರೋಗ್ಯದಿಂದಿದ್ದಾರೆ, ಬಹಳ ನೊಂದಿದ್ದಾರೆ, ದೇಶ ದ್ರೋಹಿಗಳಿಗೂ ಇದು ಅನ್ವಯ ಮಾಡಬೇಕಿತ್ತು, ಎಲ್ಲರೂ ಒಗ್ಗೂಡಿ ಕೆಲಸ ಮಾಡಿ ಎಂಬುದಾಗಿ ಸ್ವಾಮೀಜಿ ಆಶೀರ್ವದಿಸಿದ್ದಾಗಿ ಹೇಳಿದರು.