ನವದೆಹಲಿ:ಪಕ್ಷ ಮತ್ತು ರಾಜ್ಯ ನಾಯಕರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುತ್ತಾ, ಬಂಡಾಯ ಎದ್ದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕೇಂದ್ರ ಬಿಜೆಪಿ ನೀಡಿರುವ ಶೋಕಾಸ್ ನೋಟಿಸ್‌ಗೆ ಖುದ್ದು ಉತ್ತರ ನೀಡಲು ಭಿನ್ನರ ತಂಡ ದೆಹಲಿಯಲ್ಲಿ ಬೀಡು ಬಿಟ್ಟಿದೆ.
ಯತ್ನಾಳ್ ಜೊತೆ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಬಿ.ಪಿ ಹರೀಶ್, ಕುಮಾರ್ ಬಂಗಾರಪ್ಪ ಸೇರಿದಂತೆ ಕೆಲವು ನಾಯಕರು ತೆರಳಿದ್ದಾರೆ.
ನಾಳೆ ಬೆಳಗ್ಗೆ ಭೇಟಿ
ನಾಳೆ ಬೆಳಗ್ಗೆ 11-30ಕ್ಕೆ ಭೇಟಿ ಸಮಯ ನೀಡಲಾಗಿದೆ ಎಂದು ರಮೇಶ್ ಜಾರಕಿಹೊಳಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಒಂದು ವೇಳೆ ಭೇಟಿ ಸಾಧ್ಯವಾಗದಿದ್ದರೆ, ಮುಂದೊಂದು ದಿನ ಬರುವುದಾಗಿಯೂ ತಿಳಿಸಿದರು.
ಬಿಜೆಪಿ ಶಿಸ್ತು ಸಮಿತಿ ಮುಂದೆ ನಮ್ಮ ಅಹವಾಲುಗಳನ್ನು ಮಂಡಿಸಲಿದ್ದು, ನಮ್ಮ ತಪ್ಪಿದ್ದರೆ ತಿದ್ದಿಕೊಳ್ಳಲು ಸಿದ್ಧವಿದ್ದೇವೆ ಎಂದರು.
ತೀವ್ರ ಆಕ್ಷೇಪ
ಈ ಮಧ್ಯೆ ನೋಟಿಸ್ ತಲುಪಿದ 10 ದಿನಗಳೊಳಗಾಗಿ ಉತ್ತರ ನೀಡುವಂತೆ ಗಡುವು ನೀಡಲಾಗಿದ್ದು, ಹಿಂದಿನ ಎಚ್ಚರಿಕೆಗಳಿಂದ ಸರಿಪಡಿಸಿಕೊಳ್ಳದೆ, ಪಕ್ಷದ ರಾಜ್ಯ ನಾಯಕರ ವಿರುದ್ಧ ಮಾತು ಮುಂದುವರೆಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ವರಿಷ್ಠರ ನೋಟಿಸ್‌ಗೆ ನಿನ್ನೆಯೇ ಯತ್ನಾಳ್ ಎರಡು ಪ್ರತ್ಯೇಕ ಟ್ವೀಟ್ ಮಾಡಿ ನನಗೆ ಇದುವರೆಗೂ ಯಾವುದೇ ಅಧಿಕೃತ ನೋಟಿಸ್ ಬಂದಿಲ್ಲ, ವಾಟ್ಸ್‌ಆಪ್‌ನಲ್ಲಿ ಬಂದಿದೆ ಎಂದಿದ್ದರು.
ಆದರೆ, ಇಂದು ಸ್ವಯಂ ದೆಹಲಿಯಲ್ಲಿದ್ದು, ನೋಟಿಸ್‌ಗೆ ಉತ್ತರಿಸಲು ಮುಂದಾಗಿದ್ದಾರೆ.
ದೆಹಲಿಯಲ್ಲಿ ಸಮಾಲೋಚನೆ
ಯತ್ನಾಳ್ ನೇತೃತ್ವದ ಭಿನ್ನರ ತಂಡ ದೆಹಲಿಯಲ್ಲಿ ಸಮಾಲೋಚನೆಯಲ್ಲಿ ತೊಡಗಿದ್ದು, ಶಿಸ್ತು ಸಮಿತಿ ಮುಂದೆ ಏನು ಹೇಳಬೇಕು ಎಂಬ ತಯಾರಿ ನಡೆಸಿದೆ.
ಏನೇ ಆದರೂ, ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲೇಬೇಕೆಂಬುದು ಈ ತಂಡದ ಹಠವಾಗಿದೆ.
ವಿಜಯೇಂದ್ರ ಪರವಾಗಿ ಎಲ್ಲೋ ಕೆಲವು ನಾಯಕರು ಮಾತ್ರ ಇದ್ದು, ಉಳಿದಂತೆ ತಮ್ಮೊಂದಿಗಿದ್ದಾರೆ ಎಂದು ಯತ್ನಾಳ್ ಪರ ತಂಡ ವಾದ ಮಾಡುತ್ತಿದೆ.
ಯತ್ನಾಳ್ ತಮ್ಮ ಟ್ವೀಟ್‌ನಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಕಲಿ ನೋಟಿಸ್ ಸೃಷ್ಟಿಸಿದ್ದಾರೆ ಎಂದು ಟೀಕಿಸಿದ್ದರು.
ವಿವಿಧ ವಲಯಗಳಿಂದ ಆರೋಪ
ಪಕ್ಷದ ವರಿಷ್ಠರು ಯತ್ನಾಳ್‌ಗೆ ನೀಡಿರುವ ನೋಟಿಸ್‌ನಲ್ಲಿ, ರಾಜ್ಯ ಮಟ್ಟದ ಪಕ್ಷದ ನಾಯಕತ್ವದ ವಿರುದ್ಧ ನೀವು ಮಾಡುತ್ತಿರುವ ನಿರಂತರ ವಾಗ್ದಾಳಿ ಮತ್ತು ಪಕ್ಷದ ನಿರ್ದೇಶನಗಳನ್ನು ದಿಕ್ಕರಿಸುತ್ತಿರುವ ಬಗ್ಗೆ ಪಕ್ಷದ ವಿವಿಧ ವಲಯಗಳಿಂದ ಆರೋಪಗಳು ಕೇಳಿಬಂದಿವೆ.
ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ನೀವು ಹೇಳಿಕೆಗಳನ್ನು ನೀಡುತ್ತಿರುವುದು ಮಾಧ್ಯಮ ಮತ್ತು ಪಕ್ಷದ ವಿವಿಧ ವೇದಿಕೆಗಳಲ್ಲಿ ವರದಿಯಾಗಿದೆ.
ನಿಮಗೆ ಈ ಹಿಂದೆಯೂ ಹಲವು ಬಾರಿ ಶೋಕಾಸ್ ನೋಟಿಸ್ ನೀಡಲಾಗಿತ್ತು, ಆಗ, ಇನ್ನು ಮುಂದೆ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಿರಿ.
ಮಾತು ಕೊಟ್ಟ ನಂತರವೂ ನಿರಂತರವಾಗಿ ಮುಖಂಡರು ಮತ್ತು ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದು ಪಕ್ಷದ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ.
ಈ ಹಿಂದೆ ಮೃದು ಧೋರಣೆ
ನಿಮ್ಮ ಹಿರಿತನ ಮತ್ತು ಪಕ್ಷದಲ್ಲಿನ ದೀರ್ಘ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಈ ಹಿಂದೆ ನೀವು ಸಲ್ಲಿಸಿದ್ದ ವಿವರಣೆಗಳಿಗೆ ಒಪ್ಪಿ, ಕೇಂದ್ರ ಶಿಸ್ತು ಸಮಿತಿ ಮೃದು ಧೋರಣೆ ತಳೆದಿತ್ತು.
ಈಗ ನೀಡಿರುವ ನೋಟಿಸ್‌ಗೆ ನಿರ್ದಿಷ್ಟ ಸಮಯದೊಳಗೆ ನಿಮ್ಮ ವಿವರಣೆಯನ್ನು ಸಲ್ಲಿಸದಿದ್ದಲ್ಲಿ, ನಾವು ಅಂತಿಮ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.