ಬೆಂಗಳೂರು:ಅಧಿಕಾರ ಹಂಚಿಕೆ ವಿಷಯದಲ್ಲಿ ಯಾವುದೇ ಒಪ್ಪಂದ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಾಸಗಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅಧಿಕಾರ ಹಂಚಿಕೆ ಸೂತ್ರ ಇದೆ ಎಂದು ಬಹಿರಂಗ ಪಡಿಸಿದ್ದರು.
ದೆಹಲಿಯಲ್ಲಿ ಹೇಳಿಕೆ
ಮುಡಾಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ರಾಜ್ಯ ಹೈಕೋರ್ಟ್‌ನಲ್ಲಿ ಪ್ರತ್ಯೇಕವಾಗಿ ಎರಡು ಪ್ರಕರಣಗಳು ವಿಚಾರಣೆಗೆ ಬರುತ್ತಿರುವ ಸಮಯದಲ್ಲೇ ಶಿವಕುಮಾರ್, ದೆಹಲಿಯಲ್ಲಿ ಈ ಬಾಂಬ್ ಸಿಡಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವ ಸಂದರ್ಭದಲ್ಲಿ ಗಾದಿಗೆ ಏರಲು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ನಡುವೆ ಪೈಪೋಟಿ ನಡೆದಿತ್ತು.
ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ್ದ ಎಐಸಿಸಿ, ಅಧಿಕಾರ ಸೂತ್ರ ರೂಪಿಸಿತ್ತು ಎಂಬುದು ಜನಜನಿತವಾಗಿತ್ತು, ಆದರೆ, ಈ ಬಗ್ಗೆ ಸಿದ್ದರಾಮಯ್ಯ ಅವರಾಗಲೀ, ಶಿವಕುಮಾರ್ ಅವರಾಗಲೀ ಬಹಿರಂಗವಾಗಿ ಪ್ರತಿಕ್ರಿಯಿಸಿರಲಿಲ್ಲ.
ಮುಖ್ಯಮಂತ್ರಿ ಇಕ್ಕಿಟ್ಟಿಗೆ
ಆದರೆ, ಏಕಾಏಕಿ ಶಿವಕುಮಾರ್ ನೀಡಿರುವ ಹೇಳಿಕೆ ಮುಖ್ಯಮಂತ್ರಿ ಅವರನ್ನು ಇಕ್ಕಿಟ್ಟಿಗೆ ಸಿಲುಕಿಸಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಶಿವಕುಮಾರ್ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿರುವುದಲ್ಲದೆ, ಯಾವುದೇ ಅಧಿಕಾರ ಹಂಚಿಕೆ ಸೂತ್ರ ಆಗಿಲ್ಲ ಎಂದಿದ್ದಾರೆ.
ಆದರೆ, ಕಾಂಗ್ರೆಸ್ ವರಿಷ್ಠರು ಯಾವುದೇ ನಿರ್ಧಾರ ಕೈಗೊಂಡರೂ ನಾನು ಅದಕ್ಕೆ ತಲೆಬಾಗುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಪಕ್ಷದ ವರಿಷ್ಠರು ಇದುವರೆಗೂ ಅಧಿಕಾರ ಹಂಚಿಕೆ ಕುರಿತಂತೆ ಏನನ್ನೂ ಹೇಳಿಲ್ಲ, ಶಿವಕುಮಾರ್, ಯಾವ ರೀತಿಯಲ್ಲಿ ಅರ್ಥೈಸಿ ಮಾತನಾಡಿದ್ದಾರೋ ತಿಳಿಯದು ಎಂದಿದ್ದಾರೆ.