ಮಂಡ್ಯ:ಹೈಕೋರ್ಟ್ನಲ್ಲಿ ನಮ್ಮ ಅರ್ಜಿ ವಿಚಾರಣೆಗೆ ಬರುವ ಹಿಂದಿನ ದಿನ ಜಾರಿ ನಿರ್ದೇಶನಾಲಯ (ಇ.ಡಿ.) ಲೋಕಾಯುಕ್ತಕ್ಕೆ ಪತ್ರ ಬರೆದಿದ್ದೇ ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುತರ ಆರೋಪ ಮಾಡಿದ್ದಾರೆ.
ಕೆ.ಆರ್.ಪೇಟೆ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ.ಡಿ. ನಡೆಸುತ್ತಿರುವ ತನಿಖೆಯೇ ಸರಿಯಲ್ಲ, ಆದರೂ, ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ನೀಡಬಹುದಿತ್ತು, ಅದನ್ನು ಬಿಟ್ಟು, ಲೋಕಾಯುಕ್ತಕ್ಕೆ ಪತ್ರ ಬರೆಯುವುದು ಮತ್ತು ಮಾಧ್ಯಮಗಳಿಗೆ ಸೋರಿಕೆ ಮಾಡುವುದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದರು.
ಪೂರ್ವಾಗ್ರಹ ನಿಲುವಿಗೆ ಯತ್ನ
ಹೈಕೋರ್ಟ್ನಲ್ಲಿ ನಮ್ಮ ಅರ್ಜಿ ನಾಳೆ ವಿಚಾರಣೆಗೆ ಬರುತ್ತಿದ್ದು, ಹಿಂದಿನ ದಿನ ಇ.ಡಿ., ಲೋಕಾಯುಕ್ತಕ್ಕೆ ಪತ್ರ ಬರೆದಿದ್ದೇ ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಮತ್ತು ನ್ಯಾಯಾಲಯವನ್ನು ಪೂರ್ವಾಗ್ರಹ ನಿಲುವಿಗೆ ತರುವ ದುರುದ್ದೇಶದಿಂದ.
ಡಿಸೆಂಬರ್ 24ರೊಳಗೆ ತನಿಖಾ ವರದಿ ನೀಡುವಂತೆ ಲೋಕಾಯುಕ್ತಕ್ಕೆ ನ್ಯಾಯಾಲಯ ಸೂಚಿಸಿದೆ, ಈ ರೀತಿ ಮಾಡಿರುವುದರ ಉದ್ದೇಶ ರಾಜ್ಯದ ಜನರಿಗೆ ಅರ್ಥವಾಗುತ್ತದೆ.
ಮಂತ್ರಿಮಂಡಲ ಪುನಾರಚನೆ ಮಾಡುವುದಾಗಿ ನಾನು ಹೇಳಿದ್ದೇನೆಯೇ, ನೀವೇ ಕಲ್ಪಿಸಿಕೊಂಡು ಸುದ್ದಿ ಮಾಡಿ, ಈಗ ನನ್ನ ಬಳಿ ಉತ್ತರ ಕೇಳಿದರೆ ಹೇಗೆ, ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸಹಾ ಯಾವುದೇ ಸೂಚನೆ ಕೊಟ್ಟಿಲ್ಲ.
ಹಾಸನದಲ್ಲಿ ನಾಳೆ ಕಾಂಗ್ರೆಸ್ ವತಿಯಿಂದ ಸಮಾವೇಶ ನಡೆಯುತ್ತಿದೆ ಎಂದರು.